ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸೊಂಟದ ಕೆಳಗೆ ಬಲವಿಲ್ಲದೆ ಬದುಕಿನ ಬಂಡಿ ಸಾಗಿಸಲು ತೆವಳುತ್ತಾ ಸಾಗಿ ಬಸ್ ಟೈಮ್ ಕೀಪರ್ ಕೆಲಸ ಮಾಡುತ್ತಿದ್ದ ಸುರತ್ಕಲ್ ನ ರೋಹಿತ್ ಕುಲಾಲ್ ಅವರ ಬಹುಕಾಲದ ಕನಸೊಂದು ಈಡೇರಿದೆ. ದೂರದ ಇಸ್ರೇಲಿನಲ್ಲಿ ದುಡಿಯುತ್ತಿರುವ ಸ್ನೇಹಿತರು ಸೇರಿ ಅಂಗವಿಕಲರಿಗಾಗಿ ತಯಾರಿಸಲಾದ ಹೊಸ ಸ್ಕೂಟರನ್ನು ಇವರಿಗೆ ದಾನವಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸುರತ್ಕಲ್ ಮಧ್ಯ ಗ್ರಾಮದ ನಿವಾಸಿ ರೋಹಿತ್ ಕುಲಾಲ್ ಅವರು ಕಳೆದ 14 ವರ್ಷಗಳಿಂದ ಬಸ್ ಸಂಚಾರ ವಿಭಾಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಿಷ್ಠಾವಂತರಾಗಿ ದುಡಿಯುತ್ತಿದ್ದಾರೆ. ತನ್ನ ಎರಡು ಕಾಲುಗಳಲ್ಲಿ ಬಲವಿಲ್ಲದೆ ದೈಹಿಕವಾಗಿ ಅಂಗವಿಕಲರಾಗಿದ್ದರೂ ಸಹ ಯಾರ ಸಹಾಯವು ಇಲ್ಲದೆ ದುಡಿಯುವಂತ ಶ್ರಮಜೀವಿ. ಇವರ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಶರತ್ ಕುಂದರ್ ಪದವಿನಂಗಡಿ ಹಾಗೂ ನಟರಾಜ್ ಪಚ್ಚನಾಡಿ ಮೊದಲಾದವರು ಸೇರಿ ಒಂದು ವಿಡಿಯೋ ಮಾಡಿ ಯಾರಾದರೂ ಸಹಾಯ ಮಾಡುವ ಮಹಾದಾನಿಗಳು ಸಿಗಲಿ ಎಂಬ ಆಶಾಭಾವನೆಯಿಂದ ಸಾಮಾಜಿಕ ಜಾಲ ತಾಣವಾದದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ತುಣುಕನ್ನು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಸಹಿತ ಹಲವರು ಹಂಚಿದ ಫಲವಾಗಿ ಅದು ನಿಜವಾದ ದಾನಿಗಳಿಗೆ ತಲುಪಿತ್ತು.
ಇದನ್ನು ವೀಕ್ಷಿಸಿದ ದೂರದ ಇಸ್ರೇಲ್ ನಲ್ಲಿರುವ ರಾಜು ಪೂಜಾರಿ, ವಿಲ್ಫ್ರೆಡ್ ಲೋಬೊ ಹಾಗೂ ದೀಪು ಸಾಲಿಯಾನ್ ಎಂಬವರು ಮಂಗಳೂರಿನಲ್ಲಿರುವ ತಮ್ಮ ಆಪ್ತ ಪ್ರದೀಪ್ ಅವರ ಮುಖಾಂತರ ರೋಹಿತ್ ಅವರಿಗೆ 1ಲಕ್ಷಕ್ಕೂ ಅಧಿಕ ಬೆಲೆಯಿರುವ ಮೂರು ಚಕ್ರದ ಸ್ಕೂಟರನ್ನು ಉಡುಗೊರೆ ರೂಪದಲ್ಲಿ ನೀಡಿ, ರೋಹಿತ್ ಅವರ ಶ್ರಮಜೀವನಕ್ಕೆ ಸಾರ್ಥಕತೆಯ ಭಾವ ಕಲ್ಪಿಸಿದ್ದಾರೆ. ರೋಹಿತ್ ಕುರಿತ `ಕುಲಾಲ್ ವರ್ಲ್ಡ್ ‘ಪೋಸ್ಟ್ ವೈರಲ್ ಗಮನಿಸಿದ ಮಂಗಳೂರು ಕರಾವಳಿ ಕುಲಾಲ/ಕುಂಬಾರರ ಯುವವೇದಿಕೆಯ ಅಧ್ಯಕ್ಷರಾದ ಅಕ್ಷಯ್ ಕುಲಾಲ್ ಅವರು ಸುರತ್ಕಲ್ ಕುಲಾಲ ಸಂಘ , ಕುಳಾಯಿ ಕುಲಾಲ ಸಂಘ ಹಾಗೂ ಮಂಗಳೂರು ಉತ್ತರ ಕರಾವಳಿ ಕುಲಾಲ/ಕುಂಬಾರರ ಯುವ ವೇದಿಕೆ ವತಿಯಿಂದ ಒಟ್ಟು 15,000 ರೂ. ಧನಸಹಾಯ ಸಂಗ್ರಹಿಸಿ ನೀಡುವಲ್ಲಿ ಸಹಕರಿಸಿದ್ದಾರೆ.