ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಳೆದ 40 ವರ್ಷಗಳ ಕಾಲ ನಿರಂತರವಾಗಿ ಈ ಸಂಘದಲ್ಲಿ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಅದರೊಂದಿಗೆ ನಮ್ಮ ಕುಲಾಲ ಭವನ ಮಂಗಳೂರು ಹಾಗೂ ಘೋಡ್ಬಂದರ್ ಯೋಜನೆಯು ನಿಮ್ಮೆಲ್ಲರ ಸಹಕಾರದಿಂದ ಅವಧಿಯಲ್ಲಿ ನಡೆಯುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಹೆಲ್ಪ್ಲೈನ್ಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಅನೇಕರಿಗೆ ನಮ್ಮ ಸಂಘವು ವೈದ್ಯಕೀಯ ಹಾಗೂ ಶೈಕ್ಷಣಿಕ ಸಹಾಯವನ್ನು ನೀಡಿದೆ. ಕೊರೊನಾ ಸಂದರ್ಭದಲ್ಲಿ ದಾನಿಗಳ ಸಹಾಯದಿಂದ ಅನೇಕರಿಗೆ ನಮ್ಮ ಸಂಘವು ಸಹಕರಿಸಿದೆ. ಮಂಗಳೂರಿನಲ್ಲಿ ಬಹುಕೋಟಿ ರೂ. ಗಳ ವೆಚ್ಚದಲ್ಲಿ ಕುಲಾಲ ಭವನದ ಲೋಕಾರ್ಪಣೆಗೆ ಎಲ್ಲರೂ ಕೈಜೋಡಿಸೋಣ ಎಂದು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್. ಕುಲಾಲ್ ತಿಳಿಸಿದರು.
ಮಾ. 21ರಂದು ಥಾಣಾ ಘೋಡ್ಬಂದರ್ ಒವಲ್ ಕೋರ್ಟ್ ಯಾರ್ಡ್ ಹೊಟೇಲ್ ಬಳಿಯ ಸಂಘದ ಸ್ವಂತ ನಿವೇಶನದಲ್ಲಿ ನಡೆದ ಕುಲಾಲ ಸಂಘ ಮುಂಬಯಿ ಇದರ 90ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಗಳೂರಿನ ಕುಲಶೇಖರದ ವೀರನಾರಾಯಣ ದೇವಸ್ಥಾನದ ಮುಂಬಯಿ ಸಮಿತಿ ರಚಿಸಿ ಸಹಕಾರ ನೀಡೋಣ. ನಮ್ಮ ಸಮಾಜದ ಆರ್ಥಿಕ ಸಂಸ್ಥೆ ಜ್ಯೊತಿ ಕ್ರೆಡಿಟ್ ಸೊಸೈಟಿಗೆ ನಿಮ್ಮ ಸಹಕಾರವಿರಲಿ ಎಂದು ತಿಳಿಸಿ, ಹೆಚ್ಚಿನವರಿಗೆ ಈ ಸಭೆಗೆ ಬರಲಾಗದಿದ್ದರೂ ಯೂಟ್ಯೂಬ್ ಮುಖಾಂತರ ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಸರಕಾರದ ಕೋವಿಡ್ ನಿಯಮ ಗಳಿಗೆ ಅನುಗುಣವಾಗಿ ಕನಿಷ್ಠ ಸದಸ್ಯರನ್ನೊಳ ಗೊಂಡು, ಸದಸ್ಯರ ಅನುಕೂಲಕ್ಕಾಗಿ ಯೂ ಟ್ಯೂಬ್ ಮೂಲಕ ವರ್ಚುವಲ್ ಸಭೆಯನ್ನು ನಡೆಸಲಾಗಿದ್ದು, ಅನೇಕ ಸದಸ್ಯರು ಭಾಗವಹಿಸಿದ್ದರು. ಕುಲಾಲ ಸಂಘದ ಅಧ್ಯಕ್ಷ ದೇವದಾಸ ಎಲ್. ಕುಲಾಲ್ ವೇದಿಕೆಯಲ್ಲಿದ್ದ ಇತರ ಗಣ್ಯರೊಂದಿಗೆ ದೀಪ ಬೆಳಗಿಸಿ ಪ್ರಾರ್ಥನೆಯೊಂದಿಗೆ ಮಹಾಸಭೆಗೆ ಚಾಲನೆ ನೀಡಿದರು. ಗೌರವ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ಅವರು ಸಂಘದ ವಾರ್ಷಿಕ ವರದಿ ಹಾಗೂ ಗತ ಮಹಾಸಭೆಯ ವರದಿ ಮಂಡಿಸಿದರು. ಗೌರವ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು.
ಮಂಗಳೂರಿನ ಕುಲಾಲ ಭವನದ ಯೋಜನೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ರಾಷ್ಟ್ರೀಕೃತ ಬ್ಯಾಂಕ್ವೊಂದರಿಂದ ದೊಡ್ಡ ಮೊತ್ತದ ಸಾಲ ಪಡೆಯಲು ಮಹಾಸಭೆಯಲ್ಲಿ ಅನುಮತಿ ಪಡೆಯಲಾಯಿತು. ಈ ಬಗ್ಗೆ ಸಂಘದ ಘಟನೆಯಲ್ಲಿ ಸೂಕ್ತ ತಿದ್ದುಪಡಿ ಮಾಡುವುದರೊಂದಿಗೆ ಸಂಪೂರ್ಣ ವಿವರವನ್ನು ಪ್ರಧಾನ ಕಾರ್ಯದರ್ಶಿ ಸಭೆಯಲ್ಲಿ ಮಂಡಿಸಿದರು. ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. 19 ಮಕ್ಕಳನ್ನು ಸ್ಥಳೀಯ ಸಮಿತಿಯವರು ದತ್ತು ಸ್ವೀಕರಿಸಿದ್ದು, ಗೌರವ ಕೋಶಾಧಿಕಾರಿ ಜಯ ಅಂಚನ್ ಈ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವರದಿ ವರ್ಷದಲ್ಲಿ ಸಂಘದ ಮಂಗಳೂರಿನ ಕುಲಾಲ ಭವನಕ್ಕೆ ಧನ ಸಹಾಯವಿತ್ತ ಹಾಗೂ ಕುಲಾಲ ಭವನಕ್ಕೆ ಪ್ರಾಯೋಜಕರಾಗಿ 50 ಲಕ್ಷ ರೂ. ನೀಡಿ ಸಹಕರಿಸಿದ ಸುನಿಲ್ ಆರ್. ಸಾಲ್ಯಾನ್ ದಂಪತಿ, 25 ಲಕ್ಷ ರೂ. ದೇಣಿಗೆ ಘೋಷಿಸಿದ ಗಿರೀಶ್ ಬಿ. ಸಾಲ್ಯಾನ್ ದಂಪತಿ, 10 ಲಕ್ಷ ರೂ. ದೇಣಿಗೆ ನೀಡಿದ ವಿಶ್ವನಾಥ ಬಂಗೇರ, 5 ಲಕ್ಷ ರೂ. ದೇಣಿಗೆಯಿತ್ತ ಜಗದೀಶ್ ಆರ್. ಬಂಜನ್, ಮಮತಾ ಎಸ್. ಗುಜರನ್, ಜಯರಾಜ್ ಪಿ. ಸಾಲ್ಯಾನ್, ನಂದಕುಮಾರ್ ದಂಪತಿಗಳನ್ನು ಸಮ್ಮಾನಿಸಿ ಗೌರವಿಸಲಾಯಿತು.
ಅಮೂಲ್ಯದ ಉಪ ಸಂಪಾದಕ ಆನಂದ ಬಿ. ಮೂಲ್ಯ ಅವರು ಅಮೂಲ್ಯ ಪತ್ರಿಕೆ ಬಗ್ಗೆ ಮಾತನಾಡಿ, ಎಲ್ಲರೂ ಅಮೂಲ್ಯ ಪತ್ರಿಕೆಯ ಸದಸ್ಯರಾಗಬೇಕು. ಪ್ರತಿಯೊಂದು ಮನೆಗೆ ಈ ಪತ್ರಿಕೆಯು ತಲಪುವಂತಾಗಬೇಕು ಎಂದರು.
ನ್ಯಾಯವಾದಿ ಉಮಾನಾಥ್ ಮೂಲ್ಯ ಮಾತನಾಡಿ, ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಅವರ ತಂಡ ಸಮರ್ಥವಾಗಿ ಸಂಘವನ್ನು ಮುನ್ನಡೆಸುತ್ತಿದೆ. ಅವರು ರೂಪಿಸಿಕೊಂಡಿರುವ ಎಲ್ಲ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪೂರೈಸುತ್ತಿದ್ದಾರೆ. ಊರಿನಲ್ಲಿ ಮತ್ತು ಮುಂಬಯಿಯಲ್ಲಿ ನಿರ್ಮಾಣವಾಗುವ ಕಾರ್ಯಗಳು ಸಮರ್ಥ ರೀತಿಯಲ್ಲಿ ನಡೆಯುತ್ತಿವೆ ಎಂದು ಅಭಿನಂದಿಸಿದರು. ಪತ್ರಕರ್ತ ಬೊಕ್ಕಪಟ್ನ ದಿನೇಶ್ ಬಿ. ಕುಲಾಲ್ ಮಾತನಾಡಿ, ಮಂಗಳೂರಿನ ವೀರ ನಾರಾಯಣ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಎ. 11ರಂದು ಮುಂಬಯಿಯಲ್ಲಿ ನಡೆಯಲಿರುವ ಸಭೆಗೆ ತಾವೆಲ್ಲರೂ ಆಗಮಿಸಿ ಸಹಕರಿಸಬೇಕು ಎಂದರು.
ಕಾರ್ಯಕಾರಿ ಸಮಿತಿಯ ಸದಸ್ಯ ಸುನಿಲ್ ಆರ್. ಸಾಲ್ಯಾನ್ ಮಾತನಾಡಿ, ಸಂಘದ ಕಾರ್ಯಕಾರಿ ಸಮಿತಿಗೆ ಸೇರ್ಪಡೆಗೊಂಡ ಬಳಿಕ ನನಗೆ ಸಂಘದ ಕರ್ತವ್ಯದ, ಕೆಲಸ ಗಳ ಬಗ್ಗೆ ಅರಿವಾಗಿದೆ. ಸಮಾಜದ ಮೇಲೆ ಅಭಿಮಾನವಿರಿಸಿ ಕೆಲಸ ಮಾಡುವ ಎಲ್ಲರನ್ನು ಅಭಿನಂದಿಸುವ ಕೆಲಸ ಆಗಬೇಕು ಎಂದರು. ಸದಸ್ಯ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಮೂಲ್ಯ ಮಾತನಾಡಿ, ಸಂಘದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ ಕೊಳ್ಳುವಂತೆ ಮಾಡಬೇಕು ಎಂದರು.
ಸಂಘದ ಜತೆ ಕೋಶಾಧಿಕಾರಿ ಸುನಿಲ್ ಕೆ. ಕುಲಾಲ್, ಸದಸ್ಯರಾದ ಡಿ. ಐ. ಮೂಲ್ಯ, ಪಿ. ಶಂಕರ ಮೂಲ್ಯ, ಶೀನ ಜಿ. ಮೂಲ್ಯ, ಸಂಜೀವ ಎನ್. ಬಂಗೇರ, ಎಲ್. ಆರ್. ಮೂಲ್ಯ, ನ್ಯಾಯವಾದಿ ಉಮಾನಾಥ ಕೆ. ಮೂಲ್ಯ, ಆನಂದ ಕೆ. ಕುಲಾಲ್, ಆನಂದ ಬಿ. ಮೂಲ್ಯ, ಜೈರಾಜ್ ಪಿ. ಸಾಲ್ಯಾನ್, ಸುಂದರ ಎನ್. ಮೂಲ್ಯ, ಸುನಿಲ್ ಆರ್. ಸಾಲ್ಯಾನ್, ಶೇಖರ ಬಿ. ಮೂಲ್ಯ, ರೇಣುಕಾ ಎಸ್. ಸಾಲ್ಯಾನ್, ಸಾಮಾಜಿಕ ಹಾಗೂ ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಕೆ. ಕುಲಾಲ್, ಸದಸ್ಯ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಪಿ. ಶೇಖರ ಮೂಲ್ಯ, ಸ್ಟೂಡೆಂಟ್ಸ್ ಕೌನ್ಸಿಲ್ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಎನ್. ಬಂಗೇರ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಶೀನ ಜಿ. ಮೂಲ್ಯ, ಮೀರಾರೋಡ್-ವಿರಾರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಕೆ. ಮೂಲ್ಯ, ಠಾಣೆ – ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಡಿ. ಐ. ಮೂಲ್ಯ, ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಎಸ್. ಬಂಗೇರ, ಚರ್ಚ್ಗೇಟ್ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಸತೀಶ್ ಬಂಗೇರ, ಸಿಎಸ್ಟಿ – ಮುಲುಂಡ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಎನ್ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡುವ ದಿ| ಡಾ| ಎಚ್. ಎಂ. ಸುಬ್ಬಯ್ಯ ಸ್ಕಾಲರ್ಶಿಪ್, ಶಾಂತ ಸುಬ್ಬಯ್ಯ ವಿದ್ಯಾರ್ಥಿವೇತನ, ಡಾ| ಎಚ್. ಎಂ. ಸುಬ್ಬಯ್ಯ ಮೆಮೋರಿಯಲ್ ಎಜುಕೇಶನ್ ರೋಲಿಂಗ್ ಶೀಲ್ಡ್, ಕುಲಾಲ ರತ್ನ ದಿ| ಬಂಟ್ವಾಳ ಬಾಬು ಸಾಲ್ಯಾನ್ ರೋಲಿಂಗ್ ಶೀಲ್ಡ್, ದಿ| ಸುಂದರ ಕರ್ಮರನ್ ಮೆಮೋರಿಯಲ್ ರೋಲಿಂಗ್ ಶೀಲ್ಡ್ ಅನ್ನು ಸಮಾಜದ ಸಾಧಕರಿಗೆ ಪ್ರದಾನ ಮಾಡಲಾಯಿತು. ಸಂಘದ ಜತೆ ಕಾರ್ಯದರ್ಶಿ ಉಮೇಶ್ ಬಂಗೇರ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ನಮ್ಮಲ್ಲಿ ಬಲಿಷ್ಠವಾದ ಕಾರ್ಯಕರ್ತರಿದ್ದಾರೆ. ಕೋವಿಡ್ ಕಾಲದಲ್ಲೂ ಈ ವರೆಗೆ ಆಗದ ಸಮಾಜಪರ ಕೆಲಸ ಸಂಘದಲ್ಲಿ ಮತ್ತು ಸಮಿತಿಯಿಂದ ಆಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕ್ರಿಯಾಶೀಲರಾಗೋಣ. ಸಂಘಕ್ಕೆ ನೂರು ತುಂಬುವ ಸಂದರ್ಭದಲ್ಲಿ ಜ್ಯೋತಿ ಕ್ರೆಡಿಟ್ ಸೊಸೈಟಿಗೆ 50 ವರ್ಷ ಆಗಲಿದೆ. ಮುಂದಿನ ಹತ್ತು ವರ್ಷಗಳು ನಮಗೆ ಬಹಳ ಮಹತ್ವಪೂರ್ಣವಾಗಿದೆ. ಮುಂದಿನ ವರ್ಷಗಳಲ್ಲಿ ಸೊಸೈಟಿಯ ಇನ್ನೂ ಕೆಲವು ಶಾಖೆಗಳಾಗಬೇಕಾಗಿದೆ. ನಮ್ಮ ಜ್ಯೋತಿ ಕ್ರೆಡಿಟ್ ಸೊಸೈಟಿ ಸದೃಢವಾಗಿದ್ದು, ಇದಕ್ಕೆ ನಿಮ್ಮೆಲ್ಲರ ಹೆಚ್ಚಿನ ಸಹಕಾರವನ್ನು ಬಯಸುತ್ತಿದ್ದೇನೆ. ಸಂಘದ ಎಲ್ಲ ಯೋಜನೆಗಳು ನಮ್ಮ ಸಮಾಜದ ಮುಂದಿನ ಪೀಳಿಗೆಗೆ ಪ್ರಯೋಜನಕಾರಿಯಾಗಲಿದೆ. -ಗಿರೀಶ್ ಬಿ. ಸಾಲ್ಯಾನ್, ಕಾರ್ಯಾಧ್ಯಕ್ಷರು, ಜ್ಯೋತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ
ಇಂದಿನ ಈ ಪರಿಸ್ಥಿತಿಯಲ್ಲಿ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಈ ಸಭೆಯನ್ನು ಸಮಯಕ್ಕೆ ಸರಿಯಾಗಿ ನಡೆಸುವಂತೆ ಮಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಮಿತಿಯ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಲಾಕ್ಡೌನ್ ಸಂದರ್ಭದಲ್ಲಿ ಸಮಾಜ ಬಾಂಧವರಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು. ಮಂಗಳೂರು ಕುಲಶೇಖರದ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಸಮಾಲೋಚನ ಸಭೆ ನಡೆಸಲಾಗುವುದು. ಸಮಾಜ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದು ಸಹಕರಿಸಬೇಕು. -ರಘು ಮೂಲ್ಯ ಉಪಾಧ್ಯಕ್ಷರು, ಕುಲಾಲ ಸಂಘ ಮುಂಬಯಿ
ಕೋವಿಡ್ ಸಂದರ್ಭದಲ್ಲಿ ಕಳೆದ ಒಂದು ವರ್ಷದಿಂದ ಮಹಿಳೆಯರು ಮನೆಯಲ್ಲಿದ್ದು ಮಾಡಿದ ಸೇವೆ ಅಭಿನಂದನೀಯ. ಪುರುಷರು ಸಂಘದ ಕೆಲಸದಲ್ಲಿ ಕ್ರೀಯಾಶೀಲರಾಗಿರಲು ಅವರ ಹಿಂದೆಯಿದ್ದು ಪ್ರೋತ್ಸಾಹ ನೀಡುತ್ತಿರುವ ಮಹಿಳೆಯರಿಗೆ ಅಭಿನಂದನೆಗಳು. ಕುಲಾಲ ಭವನ ಸಹಾಯಾರ್ಥಕ್ಕಾಗಿ ಇನ್ನೂ ಪ್ರತೀ ಮನೆ ಮನೆಗೆ ಹೋಗಲು ಅಸಾಧ್ಯವಾಗಿದ್ದು ಎಲ್ಲರೂ ಸಹಕರಿಸಬೇಕು. -ಮಮತಾ ಗುಜರನ್ ಕಾರ್ಯಾಧ್ಯಕ್ಷೆ , ಕುಲಾಲ ಸಂಘ ಮಹಿಳಾ ವಿಭಾಗ
ಸುದ್ದಿ-ಕೃಪೆ : ಉದಯವಾಣಿ ಮುಂಬಯಿ