ಕಲೆಯೆಂಬುದು ಎಲ್ಲರಿಗೂ ಒಲಿಯುವುದಿಲ್ಲ. ಅದರ ಮೇಲಿರುವ ಆಸಕ್ತಿ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಅಂತಹ ಪ್ರತಿಭೆಯೊಬ್ಬರಲ್ಲಿ ಸಾತ್ವಿಕ್ ಬಂಗೇರ ಕೂಡಾ ಒಬ್ಬರಾಗಿದ್ದಾರೆ.
ಇವರು ನಮ್ಮ ಟಿವಿಯ ಕಾರ್ಯಕ್ರಮ ಸಂಯೋಜಕರಾದ ಸುಕನ್ಯಾ ಅವರ ಪ್ರಥಮ ಪುತ್ರ. ಪ್ರಸ್ತುತ ಇವರು ಕಾರ್ಕಳ ನಿಟ್ಟೆಯ ಪ್ರತಿಷ್ಟಿತ ಕಾಲೇಜಿನಲ್ಲಿ 3ನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಸಾತ್ವಿಕ್ ಓರ್ವ ಹುಟ್ಟು ಕಲಾವಿದ ಎಂದರೂ ತಪ್ಪಾಗಲಾರದು. ಸಣ್ಣ ವಯಸ್ಸಿನಿಂದಲೇ ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದವರು ಸಾತ್ವಿಕ್.
“ಬೆಳೆವ ಸಿರಿ ಮೊಳಕೆಯಲ್ಲಿ” ಎಂಬ ನಾಣ್ಣುಡಿಯಂತೆ ತನ್ನ 10ನೇ ವಯಸ್ಸಿನಲ್ಲೇ ತಾನು ಕಂಡ ಚಿತ್ರಗಳನ್ನು ಪೆನ್ಸಿಲ್ ಸ್ಕೆಚ್ ಮೂಲಕ ಚಿತ್ರಿಸುತ್ತಿದ್ದ ಇದನ್ನು ಗಮನಿಸಿದ ಈತನ ಚಿತ್ರಕಲಾ ಶಿಕ್ಷಕರಾದ ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಶ್ರೀ ಜಾನ್ ಚಂದ್ರನ್ ಅವರು ಸಾಕಷ್ಟು ಪ್ರೋತ್ಸಾಹ ನೀಡಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಹುರಿದುಂಬಿಸುತ್ತಿದ್ದರು.
ಆ ಬಳಿಕ ಸಾತ್ವಿಕ್ ಕ್ಯಾನ್ವಾಸ್ಗಳಲ್ಲಿ ಆಕ್ರಿಲಿಕ್ ಚಿತ್ರಕಲೆಗಳನ್ನು ತೈಲವರ್ಣಗಳನ್ನು ಬಳಸಿ ರಚಿಸಲು ಪ್ರಾರಂಭಿಸಿದ. ಚಿತ್ರಕಲೆಗಳನ್ನು ಗಮನಿಸಿ ತನ್ನ ಸ್ವಂತ ಆಸಕ್ತಿಯಿಂದಲೇ ಬರೆದು( ಕೆಲವನ್ನು ಯೂ ಟ್ಯೂಬ್ನಲ್ಲಿ ವೀಕ್ಷಿಸಿ) ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ತನ್ನದಾಗಿಸಿಕೊಂಡ.
ಈತನ ಒಂದು ಅತ್ಯುತ್ತಮ ಚಿತ್ರ ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆಯಲ್ಲೂ ಪ್ರಕಟಿಸಲ್ಪಟ್ಟಿತು. ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿ ಆಯೋಜಿಸಲಾದ ಸ್ಥಳದಲ್ಲೇ ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿಯೂ ಸಾತ್ವಿಕ್ ಸೈ ಎನಿಸಿಕೊಂಡಿದ್ದಾನೆ.
ಸಾತ್ವಿಕ್ ಕೇವಲ ಚಿತ್ರಕಲೆ ಮಾತ್ರವಲ್ಲ ಸಂಗೀತ ಹಾಗೂ ವಿದ್ಯಾಭ್ಯಾಸದಲ್ಲಿಯೂ ಎತ್ತಿದ ಕೈ. ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ 97% ಅಂಕ ಗಳಿಸಿ ತಾನು ಕಲಿತ ವಿದ್ಯಾಸಂಸ್ಥೆಗೂ, ಪೋಷಕರಿಗೂ ಕೀರ್ತಿ ತಂದಿದ್ದಾನೆ. ಸಾತ್ವಿಕ್ ತಾಯಿ ಸುಕನ್ಯಾ ಅವರು ಕರಾವಳಿ ಕರ್ನಾಟಕದ ನಾಡಿಮಿಡಿತ ನಮ್ಮ ಟಿವಿಯಲ್ಲಿ ಕಾರ್ಯಕ್ರಮ ಸಂಯೋಜಕಿ, ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲ ತುಳು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಅಭಿನಯ, ಜಾಹೀರಾತುಗಳಲ್ಲಿ ಅಭಿನಯಿಸಿರುವ ಇವರು ಹಲವಾರು ನಟಿಯರಿಗೆ ಹಿನ್ನೆಲೆ ಧ್ವನಿಯನ್ನೂ ನೀಡಿದ್ದಾರೆ.
ಸಾತ್ವಿಕ್ನ ಈ ಸಾಧನೆಯ ಹಿಂದೆ ಸುಕನ್ಯಾ ಅವರ ಅಪಾರ ಪರಿಶ್ರಮವೂ ಇದ್ದು ಆತನ ಸಾಧನೆ ಕುರಿತಾಗಿ ಹೆಮ್ಮೆ ಇದೆ. ಇವರ ಸಹೋದರ ಸುಧಾಂಶು ಕೂಡಾ ಅಣ್ಣನಂತೆ ಚಿತ್ರಕಲೆಯಲ್ಲಿ ತೊಡಗಿಸಿ ಕೊಂಡಿದ್ದು ಸಾಧನೆಯ ಹಾದಿಯಲ್ಲಿದ್ದಾರೆ. ಸುಧಾಂಶು ಉತ್ತಮ ಕ್ರೀಡಾಪಟುವಾಗಿದ್ದು ಜಿಲ್ಲಾಮಟ್ಟದ ಬಾಸ್ಕೆಟ್ಬಾಲ್ ಹಾಗೂ ಹ್ಯಾಂಡ್ಬಾಲ್ ಆಟಗಾರನಾಗಿದ್ದಾನೆ. ಸಾತ್ವಿಕ್ ಹಾಗೂ ಸುಧಾಂಶು ಇನ್ನಷ್ಟು ಸಾಧನೆ ಮಾಡಿ ದೇಶದ, ರಾಜ್ಯದ ಹಾಗೂ ಮಂಗಳೂರಿನ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವಂತಾಗಲಿ





