ಕತಾರ್(ಫೆ.೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ವಿದೇಶದಲ್ಲಿದ್ದು ತಮ್ಮ ನಾಡಿನ ಸಮಾಜದ ನೊಂದವರ ನೋವಿಗೆ ಸತತವಾಗಿ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ `ದೋಹಾ ಕುಲಾಲ್ಸ್’ ಇಬ್ಬರು ಅಶಕ್ತ ಬಡ ರೋಗಿಗಳಿಗೆ 50 ಸಾವಿರ ರೂ. ಧನಸಹಾಯ ನೀಡಿದೆ.
ದೋಹಾ ಕತಾರ್ ನಲ್ಲಿ ನೆಲೆಸಿರುವ ಸಮಾನ ಮನಸ್ಕ ಕುಲಾಲರ ಸ್ನೇಹಿತರ ಬಳಗವು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಬೋಳ್ಯಾರಿನ ಜಯಂತಿ ಕುಲಾಲ್ ಅವರಿಗೆ 25 ಸಾವಿರ ರೂ. ಹಾಗೂ ರಕ್ತದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ಪುಣೆಯ ಸಂಧ್ಯಾ ಮೂಲ್ಯ-ಚಂದ್ರಕಾಂತ್ ದಂಪತಿಯ ಪುತ್ರ ಶ್ರೇಯಸ್ ಮೂಲ್ಯ ಅವರ ಕುಟುಂಬಕ್ಕೆ 25 ಸಾವಿರ ರೂ. ನೆರವಿನ ಹಸ್ತ ಚಾಚಿದೆ.
ಇದಲ್ಲದೆ `ದೋಹಾ ಕುಲಾಲ್ಸ್’ ಸ್ಥಾಪಕರಾದ ಆನಂದ್ ಕುಂಬಾರ್ ಅವರು ತಮ್ಮ ವಿವಾಹ ಬೆಳ್ಳಿಹಬ್ಬದ ಪ್ರಯುಕ್ತ ಬೋಳ್ಯಾರಿನ ಜಯಂತಿ ಕುಲಾಲ್ ಅವರಿಗೆ ವೈಯಕ್ತಿಕವಾಗಿ 25 ಸಾವಿರ ರೂ. ನೆರವು ನೀಡಿದ್ದರು. ಈ ಎರಡೂ ಕುಟುಂಬದ ಕರುಣಾಜನಕ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವಿಸ್ತೃತ ವರದಿ ಪ್ರಕಟಿಸಿ ದಾನಿಗಳ ನೆರವು ಯಾಚಿಸಿತ್ತು. ಹೊರದೇಶದಲ್ಲಿ ದುಡಿಯುತ್ತಿದ್ದರೂ ನಾಡಿನ ಸಮುದಾಯದ ನೊಂದ ಕುಟುಂಬಕ್ಕೆ ಆರ್ಥಿಕ ಸ್ಥೈರ್ಯ ತುಂಬುವ `ದೋಹಾ ಕುಲಾಲ್ಸ್’ನ ಕಾರ್ಯಕ್ಕೆ ಪ್ರಸಂಶೆ ವ್ಯಕ್ತವಾಗಿದೆ.