ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಮಿತಿಗೆ ಸದಸ್ಯರಾಗಿ ಕೈಗಾರಿಕೊದ್ಯಮಿ ಡಾ. ಜೆ.ಆರ್. ಬಂಗೇರ ಅವರನ್ನು ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷರಾಗಿರುವ ಸಮಿತಿಗೆ ಕರ್ನಾಟಕ ರಾಜ್ಯದಿಂದ ಬಂಗೇರ ಅವರನ್ನು ನೇಮಕ ಮಾಡಲಾಗಿದೆ.
ಫೆ.26, 1951 ರಲ್ಲಿ ಮಂಗಳೂರಿನಲ್ಲಿ ಜನಿಸಿದ ಜೆ.ಆರ್ ಬಂಗೇರ ಅವರು ಮೈಸೂರು ವಿ.ವಿ.ಯಿಂದ ವಿಜ್ಞಾನದಲ್ಲಿ ಪದವಿ, ಬೆಂಗಳೂರು ವಿ.ವಿ ಇಂದ ಎಂ.ಬಿ.ಎ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ನಂತರ ಬೆಂಗಳೂರಿನಲ್ಲಿ ತಮ್ಮದೇ ಆದ ಪ್ರೀಮಿಯರ್ ಸ್ಟಾರ್ಚ್ ಪ್ರಾಡಕ್ಟ್ ಪ್ರೈ.ಲಿ ಸ್ಥಾಪಿಸಿ ಹಲವರಿಗೆ ಉದ್ಯೋಗ ಕಲ್ಪಿಸಿರುತ್ತಾರೆ. ರಾಜ್ಯ ಹಾಗೂ ರಾಷ್ಟ್ರದ ಪ್ರತಿಷ್ಠಿತ ಕೈಗಾರಿಕಾ ಸಂಘ/ಒಕ್ಕೂಟಗಳಾದ ಕಾಸಿಯಾ, ಲಘು ಉದ್ಯೋಗ ಭಾರತಿ, ಎಫ್.ಕೆ.ಸಿ.ಸಿ.ಐ, ಕುಂಬಳಗೋಡು ಇಂಡಸ್ಟ್ರೀಸ್ ಅಸೋಸಿಯೇಷನ್ ಮೊದಲಾದವುಗಳ ಅಧ್ಯಕ್ಷ ಸ್ಥಾನ ವಹಿಸಿರುವ ಮೊದಲ ಹಾಗೂ ಕುಲಾಲ ಸಮುದಾಯದ ಏಕೈಕ ವ್ಯಕ್ತಿ ಜೆ.ಆರ್.ಬಂಗೇರ ಆಗಿದ್ದಾರೆ. ಉದ್ಯಮ ಕ್ಷೇತ್ರದ ಇವರ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ 2020 ರಲ್ಲಿ ಯೂರೋಪಿಯನ್ ಡಿಜಿಟಲ್ ಯೂನಿವರ್ಸಿಟಿಯು ದುಬೈನಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಸತ್ಕರಿಸಿದೆ.