ಕತಾರ್(ಕುಲಾಲ್ ವರ್ಲ್ಡ್ ಡಾಟ್ ಕಾಮ್): ದೋಹಾ ಕುಲಾಲ್ಸ್ ಸ್ಥಾಪಕ ಆನಂದ ಕುಂಬಾರ್ ಅವರು ತಮ್ಮ ವಿವಾಹ ರಜತ ಮಹೋತ್ಸವ ಪ್ರಯುಕ್ತ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆಗೆ ಆರ್ಥಿಕ ತೊಂದರೆಯಲ್ಲಿರುವ ಬಡ ಯುವತಿಗೆ ನೆರವು ನೀಡಿ ಆಚರಣೆ ಅರ್ಥಪೂರ್ಣಗೊಳಿಸಿದ್ದಾರೆ.
ಕರಾವಳಿಯಲ್ಲಿ ಜಿಲ್ಲೆಯಲ್ಲಿ ಹುಟ್ಟಿ ಉದ್ಯೋಗ ಅರಸಿಕೊಂಡು ಲಕ್ಷಾಂತರ ಮಂದಿ ಸಾಗರ ದಾಟಿ ಗಲ್ಫ್ ದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಕುಂದಾಪುರ ಮೂಲದ ಆನಂದ ಕುಂಬಾರ ಕೂಡ ಒಬ್ಬರು. ಹೊಟ್ಟೆಪಾಡಿಗಾಗಿ ತಾವು ಹುಟ್ಟೂರು ಬಿಟ್ಟು ತೆರಳಿದ್ದರೂ ಊರಲ್ಲಿ ಯಾರಿಗಾದರೂ ಸಂಕಷ್ಟ ಎದುರಾದಾಗ ಕಿಂಚಿತ್ತಾದರೂ ಸಹಾಯ ಮಾಡಬೇಕೆಂಬ ಹಾಗೂ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುವ ಉದ್ದೇಶದಿಂದ ಗಲ್ಫ್ ರಾಷ್ಟ್ರವಾದ ದೋಹಾ ಕತಾರಿನಲ್ಲಿ ಸ್ವಜಾತಿ ಬಾಂಧವರ ಬಳಗವನ್ನು ಹುಟ್ಟು ಹಾಕಿದ್ದಾರೆ.
ತಮ್ಮ ಸಂಪಾದನೆಯ ಒಂದಿಷ್ಟು ಭಾಗವನ್ನು ಬಡವರ ಸೇವೆಗೆ, ಹುಟ್ಟೂರಿನ ಜನರ ಏಳಿಗೆಗಾಗಿಯೇ ಮೀಸಲಿಡುವ ಅವರು, ಇದುವರೆಗೆ ಲಕ್ಷಾಂತರ ರೂಪಾಯಿ ಹಣವನ್ನು ಒಟ್ಟುಗೂಡಿಸಿ ಸಹಾಯಾರ್ಥವಾಗಿ ಬಡ ರೋಗಿಗಳಿಗೆ ನೀಡಿ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಅವರ ನಿಸ್ವಾರ್ಥ ಸೇವಾ ತತ್ಪರತೆ, ಹೃದಯವಂತಿಕೆ, ಸಹಾನುಭೂತಿ, ಸರಳ ಸಜ್ಜನಿಕೆಯ ವ್ಯಕ್ತಿತ್ವ ನಮ್ಮ ಪ್ರಸ್ತುತ ಸಮಾಜದ ಆಸ್ತಿ ಹಾಗೂ ಶಕ್ತಿಯೂ ಹೌದು. ಇಂದು (ಫೆ.೨) ಅವರ 25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಾ ಬಡತನದಿಂದ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ಬಂಟ್ವಾಳ ತಾಲೂಕಿನ ಬೋಳ್ಯಾರು ಸಮೀಪದ ಒಡಕಿನಕಟ್ಟೆಯ ಸಂಕೇಶ ನಿವಾಸಿ ಜಯಂತಿ ಕುಲಾಲ್ ಅವರ ಚಿಕಿತ್ಸೆಗೆ ವೈಯಕ್ತಿಕವಾಗಿ 25 ಸಾವಿರ ರೂ. ಧನಸಹಾಯ ನೀಡಿ ಮಾನವೀಯತೆ ಮೆರೆದರು. ಆ ಮೂಲಕ ತಮ್ಮ ವಿವಾಹ ಬೆಳ್ಳಿಹಬ್ಬ ಆಚರಣೆಯನ್ನು ಅರ್ಥಪೂರ್ಣಗೊಳಿಸಿದರು.