ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕಿಡ್ನಿ ವೈಫಲ್ಯದಿಂದ ಬಳಲುತ್ತಾ ಬಡತನದಿಂದ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ಎರಡು ಕುಟುಂಬಗಳ ಕುರಿತ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನ ಮಾನವೀಯ ವರದಿಗೆ ಸ್ಪಂದಿಸಿದ ಮಂಗಳೂರಿನ `ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್’ ಎರಡೂ ಕುಟುಬಗಳಿಗೆ 71 ಸಾವಿರ ರೂಪಾಯಿ ನೆರವು ನೀಡಿದೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಜಯಂತಿ ಹಾಗೂ ಡಯಾಬಿಟಿಸ್ ಕಾಯಿಲೆಯಿಂದ ಒಂದು ಕಾಲು ಕಳೆದುಕೊಂಡು ಇದೀಗ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಸುರತ್ಕಲ್ ಮಧ್ಯ ನಿವಾಸಿ ಸಂಜೀವ ಮೂಲ್ಯ ಅವರ ಕರುಣಾಜನಕ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿ ಹಣಕಾಸಿನ ನೆರವು ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿತ್ತು.
ಅಲ್ಲದೆ `ಕುಲಾಲ್ ವರ್ಲ್ಡ್’ ನಿರ್ವಾಹಕ ಹೇಮಂತ್ ಕುಮಾರ್ ಕಿನ್ನಿಗೋಳಿ ಅವರು ಈ ವರದಿಯನ್ನು`ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್’ ನ ಮುಖ್ಯಸ್ಥ ಅರ್ಜುನ್ ಭಂಡಾರ್ಕರ್ ಅವರ ಗಮನಕ್ಕೆ ತಂದು, ರೋಗಿಗಳ ಪರಿಸ್ಥಿತಿಯನ್ನು ವಿವರಿಸಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಅವರು ಜಯಂತಿ ಅವರಿಗೆ 35 ಸಾವಿರ ರೂ ಹಾಗೂ ಸಂಜೀವ ಮೂಲ್ಯ ಅವರಿಗೆ 36 ಸಾವಿರ ರೂಪಾಯಿ ನೆರವು ಘೋಷಿಸಿ, ಜನವರಿ 31ರಂದು ಚೆಕ್ ಹಸ್ತಾಂತರ ಮಾಡಿದ್ದಾರೆ. ವೆಬ್ ಸೈಟ್ ವರದಿಗೆ ಸ್ಪಂದಿಸಿ ತಕ್ಷಣ ಆರ್ಥಿಕ ನೆರವು ನೀಡಿದ `ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್’ ನ ರೂವಾರಿಗಳಿಗೆ `ಕುಲಾಲ್ ವರ್ಲ್ಡ್’ ವತಿಯಿಂದ ಅದರ ಸಂಪಾದಕ ದಿನೇಶ್ ಬಂಗೇರ ಇರ್ವತ್ತೂರು ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ.