ಮಂಗಳೂರು(ಜ.೨೫, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಮಾಜವನ್ನು ಒಗ್ಗೂಡಿಸುವ ಸಲುವಾಗಿ ಜನವರಿ 31ರಂದು ಕುಲಶೇಖರ ವೀರನಾರಾಯಣ ದೇವಳದಲ್ಲಿ ಕುಲಾಲ ಸಮ್ಮಿಲನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಅದ್ಧೂರಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕುಲಾಲ ಯಾನೆ ಮೂಲ್ಯರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ತಿಳಿಸಿದ್ದಾರೆ.
ಈ ಕುರಿತು ನಡೆದ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಮಯೂರ್ ಉಳ್ಳಾಲ್ ಅವರು, ಮಾಣಿಲ ಮೋಹನದಾಸ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಸಂಸದರು, ಶಾಸಕರು ಹಾಗೂ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಲಿರುವ ಸಮಾರಂಭದಲ್ಲಿ ಮೂಲ್ಯರ ಮಾತೃಸಂಘದ ನೂತನ ಆಡಳಿತ ಮಂಡಳಿಯ ಪದಗ್ರಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಘಟನಾತ್ಮಕ ದೃಷ್ಟಿಯಿಂದ ನಡೆಯಲಾಗುವ ಈ ಕಾರ್ಯಕ್ರಮದಲ್ಲಿ ಸಮಸ್ತ ಸಮಾಜ ಬಾಂಧವರು ಉತ್ಸವ ರೀತಿಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿದರು. ಈ ಸಂದರ್ಭ ವೀರನಾರಾಯಣ ದೇವಳದ ಆಡಳಿತ ಮೊಕ್ತೇಸರ ಪುರುಷೋತ್ತಮ ಕಲ್ಬಾವಿ, ಕುಲಾಲ ಸಮುದಾಯದ ನಾಯಕ, ಉದ್ಯಮಿ ಅನಿಲ್ ದಾಸ್, ಶಿಕ್ಷಣ ತಜ್ಞ ಗಿರೀಶ್ ಕುಲಾಲ್ ವೇಣೂರು, ವಕೀಲರಾದ ರವೀಂದ್ರ ಮುನ್ನಿಪ್ಪಾಡಿ, ಕುಶಾಲಪ್ಪ ಕುಲಾಲ್ ಮೊದಲಾದವರು ಉಪಸ್ಥಿರಿದ್ದರು.