ಬೆಂಗಳೂರು(ಜ.೨೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯ ಕುಂಬಾರ ಒಕ್ಕೂಟದ ಪ್ರಥಮ ಪೂರ್ವಭಾವಿ ಸಭೆಯು ಇಂದು ಬೆಂಗಳೂರಿನ ಕೆ ಆರ್ ವೃತ್ತದ ಎಂಜಿನಿಯರ್ಸ್ ಭವನದಲ್ಲಿ ಜ.೨೪ರಂದು ನಡೆಯಿತು.
ಕುಂಬಾರ ಸಮಾಜದ ಮುಖಂಡ, ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಆರ್ ಶ್ರೀನಿವಾಸ್ ಅವರ ಮುಂದುಳುತ್ವ ಹಾಗೂ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ರೂಪುರೇಷೆಯ ಕುರಿತಂತೆ ಚರ್ಚಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖ ನಡೆದ ಚರ್ಚೆಯಲ್ಲಿ ಮುಂದಿನ ಆರು ತಿಂಗಳ ಅವಧಿಗೆ ಒಕ್ಕೂಟದ ರಾಜ್ಯದ ವಿವಿಧ ಭಾಗದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅದರಂತೆ ಒಕ್ಕೂಟದ ಗೌರವಾಧ್ಯಕ್ಷರಾಗಿ ನಿವೃತ್ತ ಬಿ.ಎಸ್. ಎಫ್. ಕಮಾಂಡರ್ ಚಂದಪ್ಪ ಮೂಲ್ಯ, ಅಧ್ಯಕ್ಷರಾಗಿ ಉದ್ಯಮಿ, ರಾಜ್ಯ ಕುಂಬಾರರ ಮಹಾಸಂಘದ ಶಿವಕುಮಾರ್ ಚೌಡಶೆಟ್ಟಿ ಹಾಗೂ ಕಾರ್ಯಾಧ್ಯಕ್ಷರಾಗಿ ಮೈಸೂರುಕ್ರೆಡಿಟ್ – ಐ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ. ವರ್ಷ ಅವರನ್ನು ಆಯ್ಕೆ ಮಾಡಲಾಯಿತು. ಒಕ್ಕೂಟದ ಸಂಘಟನಾ ಕಾರ್ಯದರ್ಶಿಯಾಗಿ ಕುಲಾಲ ಸಂಘ ಬೆಂಗಳೂರು ಇದರ ಮಾಜಿ ಅಧ್ಯಕ್ಷ ಮಾಧವ ಕುಲಾಲ್, ಮಹಿಳಾ ಉಪಾಧ್ಯಕ್ಷರಾಗಿ ಪ್ರೇಮಲೀಲಾ, ಮಹಿಳಾ ಕಾರ್ಯದರ್ಶಿಯಾಗಿ ಭುವನೇಶ್ವರಿ, ಖಜಾಂಜಿಯಾಗಿ ನಿವೃತ್ತ ಡಿಡಿಪಿಐ ಗುರುರಾಜ್, ಮಾಧ್ಯಮ ಕಾರ್ಯದರ್ಶಿಯಾಗಿ ನಟರಾಜ್ ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಬೆಂಗಳೂರು, ಮೈಸೂರು, ಬೆಳಗಾವಿ, ಕರಾವಳಿ, ಉತ್ತರಕನ್ನಡ, ಹೈದರಾಬಾದ್ ಕರ್ನಾಟಕ ಮತ್ತು ಗುಲ್ಬರ್ಗಾ ವಿಭಾಗದ ಒಬ್ಬರು ಉಪಾಧ್ಯಕ್ಷರನ್ನಾಗಿ ಹಾಗು ಕಾರ್ಯದರ್ಶಿಯಾಗಿ ಒಬ್ಬರನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಕರಾವಳಿ ವಿಭಾಗದ ಉಪಾಧ್ಯಕ್ಷರಾಗಿ ಮಹಾಬಲ ಕುಲಾಲ್ ಹಾಗೂ ಕಾರ್ಯದರ್ಶಿಯಾಗಿ ಸುಧಾಕರ ಸಾಲ್ಯಾನ್ ಸುರತ್ಕಲ್ ಅವರನ್ನು ಆಯ್ಕೆ ಮಾಡಲಾಯಿತು.