ಮುರುಕು ಮನೆಯಲ್ಲಿ ದಿಕ್ಕು ತೋಚದೆ ಕಣ್ಣೀರು ಸುರಿಸುತ್ತಿರುವ 4 ಹೆಣ್ಮಕ್ಕಳ ಕುಟುಂಬ
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಒಂದು ಕಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಜೀವ ಹಿಂಡುತ್ತಿರುವ ಕಿಡ್ನಿ ವೈಫಲ್ಯ. ಇನ್ನೊಂದೆಡೆ ಈಗಲೋ ಆಗಲೋ ಕುಸಿದು ಬೀಳಲು ತಯಾರಾಗಿರುವ ಮಣ್ಣಿನ ಗೋಡೆಯ ಮುರುಕಲು ಮನೆ. ಈ ಎಲ್ಲಾ ಸಂಕಷ್ಟದ ನಡುವೆ ಐದು ಮಂದಿ ಒಡಹುಟ್ಟಿದ ಸೋದರಿಯರ ಕುಟುಂಬದ ಹೊಣೆ ಹೊತ್ತು ಬಸವಳಿದು ಸೋತು ಹೋಗಿರುವ ಏಕೈಕ ಸಹೋದರ. ಇದು ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಜಯಂತಿ ಕುಟುಂಬದ ಕರುಣಾಜನಕ ಕಣ್ಣೀರ ಕಥೆ..
ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಕೃಷ್ಣ ಕುಲಾಲ್ ಅವರಿಗೆ ಐವರು ಮಂದಿ ಸಹೋದರಿಯರು. ಬಡತನದ ಕಾರಣಕ್ಕಾಗಿ ನಾಲ್ಕು ಮಂದಿ ಸಹೋದರಿಯರ ಸಹಿತ ತಾನು ಇನ್ನೂ ಅವಿವಾಹಿತನಾಗಿರುವ ಇವರಿಗೆ ಜೀವನ ನಿರ್ವಹಣೆಯೇ ದೊಡ್ಡ ಸವಾಲು. ಪೈಂಟಿಂಗ್ ಸಹಾಯಕರಾಗಿ ದುಡಿಯುವ ಇವರಿಗೆ ಸಿಗುವ ಅತ್ಯಲ್ಪ ಸಂಬಳ ಹಾಗೂ ಸಹೋದರಿಯರು ಬೀಡಿ ಕಟ್ಟಿ ಬರುವ ಸಣ್ಣ ಮೊತ್ತದಿಂದ ಕಷ್ಟದಲ್ಲೇ ಜೀವನ ಸಾಗುತ್ತಿದೆ.
ಇವರ ಕೊನೆಯ ಸಹೋದರಿ 33 ವರ್ಷ ಪ್ರಾಯದ ಜಯಂತಿಯವರು ಕಳೆದ ಐದು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ರೋಗ ಉಲ್ಬಣಿಸಿ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ ಚಿಕಿತ್ಸೆಗೆ ಹಣವಿಲ್ಲದೇ ಮನೆಯ ಮೂಲೆಯ ಮುರುಕು ಚಾಪೆಯಲ್ಲಿ ಬಿದ್ದುಕೊಂಡು ಯಾರಾದರೂ ತನ್ನ ನೆರವಿಗೆ ಧಾವಿಸಿಯಾರೇ ಎಂದು ಆಸೆ ಕಂಗಳಿಂದ ಕಾಯುತ್ತಿದ್ದಾಳೆ.
ಆಸ್ಪತ್ರೆಯಲ್ಲಿದ್ದಾಗ ಆಕೆಯ ಆರೋಗ್ಯ ಕಾಪಾಡುವುದರ ಜೊತೆಗೆ ಆಸ್ಪತ್ರೆಯ ಬಿಲ್ ಪಾವತಿಸುವುದೇ ಕೃಷ್ಣ ಕುಲಾಲ್ ಅವರಿಗೆ ದೊಡ್ಡ ತಲೆನೋವಾಗಿತ್ತು. ಇದೀಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡುವಂತೆ ವೈದ್ಯರು ಸೂಚಿಸಿದ್ದು ಈ ಬಡ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟ ಇವರ ಮನೆಯ ಛಾವಣಿ ಇತ್ತೀಚೆಗೆ ಕುಸಿದು ಬೀಳುವ ಹಂತ ತಲುಪಿದ್ದು, ಸಕಾಲಕ್ಕೆ ಸ್ಪಂದಿಸಿದ ಕೆಲ ಯುವಕರು ತಾತ್ಕಾಲಿಕ ಪರಿಹಾರ ಮಾಡಿ ಕೊಟ್ಟರೂ. ಸುಣ್ಣ ಬಣ್ಣ ಕಾಣದ ಮನೆಗೆ ದಾರಿ ಸಂಪರ್ಕವೇ ಇಲ್ಲ. ಹೀಗಾಗಿ ಅಸೌಖ್ಯದಿಂದಿರುವ ಜಯಂತಿ ಅವರನ್ನು ಚಿಕಿತ್ಸೆಗಾಗಿ ಹಲವು ಫರ್ಲಾಂಗ್ ದೂರದವರೆಗೆ ಎತ್ತಿಕೊಂಡೇ ಸಾಗುವ ಪರಿಸ್ಥಿತಿ ಕಂಡರೆ ಮರುಕ ಹುಟ್ಟುತ್ತದೆ. ಹರಕಲು ಮನೆಯಲ್ಲಿ ಬದುಕು ಕಟ್ಟಿಕೊಂಡಿರುವ ಈ ಬಡ ಕುಟುಂಬಕ್ಕೆ ಮಾನವೀಯತೆ ಮೆರೆಯುವ ಜೀವಗಳಿಂದ ಸಹಾಯಹಸ್ತ ಬೇಕಾಗಿದೆ. ಸಮಾಜದ ಬಂಧುಗಳು ಮಾನವೀಯ ನೆಲೆಯಲ್ಲಿ ತಮ್ಮಿಂದಾಗುವ ಧನ ಸಹಾಯವನ್ನು ಮಾಡಿದ್ದಲ್ಲಿ ತನ್ನ ತಂಗಿಗೆ ಡಯಾಲಿಸಿಸ್ ಮಾಡಿಸಿ ಮುಂದಿನ ಚಿಕಿತ್ಸೆ ಕೊಡಿಸಲು ಸಾಧ್ಯ ಎಂದು ಕೃಷ್ಣ ಕುಲಾಲ್ ವಿನಂತಿಸಿಕೊಂಡಿದ್ದಾರೆ.
ಜಯಂತಿಯವರಿಗೆ ಆರ್ಥಿಕ ನೆರವು ನೀಡುವ ದಾನಿಗಳು ಅಥವಾ ಸಂಘ ಸಂಸ್ಥೆಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಹಾಯ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೃಷ್ಣ ಕುಲಾಲ್ ಅವರ ದೂರವಾಣಿ 9743787021 ಸಂಪರ್ಕಿಸುವಂತೆ ಕೋರಲಾಗಿದೆ.
ಜಯಂತಿ
ಕೆನರ ಬ್ಯಾಂಕ್
ಬೋಳ್ಯಾರ್ ಶಾಖೆ
ಖಾತೆ ಸಂಖ್ಯೆ
8802101000175
ಐಎಫ್ ಎಸ್ ಸಿ ಕೋಡ್: CNRB0008802
ಅಥವಾ ಗೂಗಲ್ ಪೇ: 8861892106