ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಂದ ಮನವಿಗಳ ವಿಚಾರಣೆ
ಉಡುಪಿ (ಜ.12, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ರಾಜ್ಯದಲ್ಲಿರುವ ವಿವಿಧ ಜಾತಿ/ಜನಾಂಗಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಸೇರಿಸಲು, ಪ್ರವರ್ಗ ಬದಲಾವಣೆಗೆ, ಪರ್ಯಾಯ ಪದ ಸೇರ್ಪಡೆಗೆ, ಕಾಗುಣಿತ ದೋಷ ತಿದ್ದುಪಡಿ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಲ್ಲಿ ಈಗಾಗಲೇ ಸ್ವೀಕೃತಗೊಂಡಿರುವ ಮನವಿಗಳ ಬಹಿರಂಗ ವಿಚಾರಣೆ ಕಾರ್ಯಕ್ರಮ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಿತು.
ಮೊದಲಿಗೆ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ, ಮಂಗಳೂರು ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಸಂಘಟನೆಗಳ ಒಕ್ಕೂಟ, ಉಡುಪಿ ಜಿಲ್ಲಾ ಕುಲಾಲ ಕುಂಬಾರ ಮಾತೃ ಸಂಘದ ಪರವಾಗಿ ಮನವಿ ಅರ್ಪಿಸಿದ ಉಡುಪಿ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಸುನಿಲ್ ಎಸ್.ಮೂಲ್ಯ, ರಾಜ್ಯದಲ್ಲೀಗ ಸುಮಾರು 15 ಲಕ್ಷದಷ್ಟು ಕುಂಬಾರ ಸಮುದಾಯದವರಿದ್ದು, ಈ ಸಮುದಾಯವನ್ನು ‘ಪ್ರವರ್ಗ-2ಎ’ ಯಲ್ಲಿ ಸೇರಿಸಲಾಗಿದೆ. ಇದರಿಂದ ತೀರಾ ಹಿಂದುಳಿದ ನಮ್ಮ ಸಮುದಾಯಕ್ಕೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಹೀಗಾಗಿ ರಾಜ್ಯದ ಕುಂಬಾರ ಸಮುದಾಯಕ್ಕೆ ಒಳಮೀಸಲಾತಿಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದರೊಂದಿಗೆ ಕುಂಬಾರಿಕಾ ಗುಡಿಕೈಗಾರಿಕೆಯನ್ನು ಕೌಶಲ್ಯಾಭಿವೃದ್ದಿ ಯೋಜನೆಯಡಿ ಸೇರ್ಪಡೆಗೊಳಿಬೇಕು. ಕುಂಬಾರ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಮತ್ತು ತರಬೇತಿಗೆ ವ್ಯವಸ್ಥೆ ಕಲ್ಪಿಸಬೇಕು. ಸದ್ಯ ದೇವರಾಜು ಅರಸು ನಿಗಮದಲ್ಲಿರುವ ಕುಂಬಾರ ಅಭಿವೃಧ್ದಿ ಮಂಡಳಿಯನ್ನು ಅಲ್ಲಿಂದ ಪ್ರತ್ಯೇಕಿಸಿ, ಕುಂಭಕಲಾ ಅಭಿವೃಧ್ದಿ ಮಂಡಳಿ ಮಾಡಬೇಕು ಎಂದು ಸುನೀಲ್ ಮೂಲ್ಯ ಹಾಗೂ ಇತರ ಮುಖಂಡರು ತಮ್ಮ ಸಮುದಾಯದ ಪರವಾಗಿ ಮನವಿ ಮಾಡಿದರು. ಒಳಮೀಸಲಾತಿಗೆ ಒತ್ತು ನೀಡುವ ದಾಖಲಾತಿಯನ್ನು ಕೊಡಿ. ನಿಮ್ಮ ದಾಖಲೆ ಹಾಗೂ ಮನವಿಗಳನ್ನು ಆಯೋಗದ ಶಿಫಾರಸ್ಸಿನೊಂದಿಗೆ ಸರಕಾರಕ್ಕೆ ಕಳುಹಿಸಿ ಕೊಡುವುದಾಗಿ ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದರು.
ಬಹಿರಂಗ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಕಲ್ಯಾಣ್ಕುಮಾರ್ ಎಚ್.ಎಸ್., ಬಿ.ಎಸ್. ರಾಜಶೇಖರ್, ಕೆ.ಟಿ.ಸುವರ್ಣ, ಅರುಣ್ ಕುಮಾರ್ ಉಪಸ್ಥಿತರಿದ್ದರು.