ಅಸಹಾಯಕ ಹಿರಿಯ ಯಕ್ಷ ಜೀವಕ್ಕೆ ಬೇಕಿದೆ ಆಸರೆ
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಹಲವು ಯಕ್ಷಗಾನ ಮೇಳಗಳಲ್ಲಿ ಗೆಜ್ಜೆ ಕಟ್ಟಿ ಕುಣಿದು ಯಕ್ಷರಂಗದಲ್ಲಿ ಮೆರೆದ ಕಲಾವಿದ ಅನಾರೋಗ್ಯಪೀಡಿತರಾಗಿ ಒಂದು ಕಾಲು ಕಳೆದುಕೊಂಡಿದ್ದಲ್ಲದೆ ಪ್ರಸ್ತುತ ಕಿಡ್ನಿ ಸಮಸ್ಯೆಯಿಂದ ಚಿಕಿತ್ಸೆ, ಮದ್ದು ಹಾಗೂ ದೈನಂದಿನ ಖರ್ಚಿಗೆ ಹಣವಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದರೆ, ಅವರ ಪತ್ನಿ ಹೇಗಾದರೂ ಮಾಡಿ ಪತಿಯ ಜೀವ ಉಳಿಸಲು ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದಾರೆ.
ಬಜ್ಪೆ ಕೊಳಂಬೆ ಸುಂಕದಕಟ್ಟೆ ನಿವಾಸಿಯಾದ ಗಂಗಾಧರ ಬಂಗೇರ ಎರಡು ದಶಕಗಳ ಹಿಂದೆ ಯಕ್ಪರಂಗದಲ್ಲಿ ವಿಜೃಂಭಿಸಿದ ಕಲಾವಿದ. ಹಲವು ವರ್ಷಗಳ ಕಾಲ ರಂಗದಲ್ಲಿ ಸ್ತ್ರೀ ವೇಷಧಾರಿಯಾಗಿ ಮಿಂಚಿ ಕಲಾಭಿಮಾನಿಗಳನ್ನು ರಂಜಿಸಿವರು ಗಂಗಾಧರ ಬಂಗೇರ. ಸುರತ್ಕಲ್ ಮೇಳದಲ್ಲಿ ಮೊದಲು ಗೆಜ್ಜೆ ಕಟ್ಟಿದ ಬಂಗೇರ ಅವರು ಬಳಿಕ ಮುಂಬಯಿ, ಕುಂಟಾರು ಮೇಳ, ಕೊಲ್ಲಂಗಾನ ಮೇಳ, ಆನೇಗಲ್ ಮೇಳ, ಸುಂಕದಕಟ್ಟೆ ಮೇಳ, ಅಳದಂಗಡಿ ಮೇಳಗಳಲ್ಲಿ ತಿರುಗಾಟ ನಡೆಸಿ ವಿವಿಧ ಸ್ತ್ರೀ ಪಾತ್ರಗಳಿಗೆ ಜೀವ ತುಂಬಿ, ತಮ್ಮದೇ ಆದ ವೈಶಿಷ್ಟ್ಯಪೂರ್ಣ ನಾಟ್ಯ ಹಾವಭಾವದಿಂದ ಒಳ್ಳೆಯ ಕಲಾವಿದರೆನಿಸಿಕೊಂಡಿದ್ದವರು. ಆದರೆ ವಿಧಿಬರಹ ಘೋರ. ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿಬಿಟ್ಟಿತು. ಯಾವುದೇ ದುಶ್ಚಟಗಳಿಲ್ಲದೇ ಇದ್ದರೂ ಇವರನ್ನು ಬೆಂಬಿಡದೇ ಕಾಡಿದ ಡಯಾಬಿಟಿಸ್ ಕಾಯಿಲೆ ಒಂದು ಕಾಲನ್ನೇ ಬಲಿ ತೆಗೆದುಕೊಂಡಿತು. ಅಲ್ಲಿಗೆ ತನ್ನ ಪ್ರೀತಿಯ ಮತ್ತು ಆಸಕ್ತಿಯ ಕ್ಷೇತ್ರವಾದ ಯಕ್ಷಗಾನದಲ್ಲಿ ಮುಂದುವರಿಯುವ ಕನಸು ನುಚ್ಚುನೂರಾಗಿತ್ತು. ಕಾಲು ಕಳೆದುಕೊಂಡು ಇದರಿಂದ ಗೆಜ್ಜೆ ಕಟ್ಟಲಾಗದೆ ಅತ್ತ ಬೇರೆ ಯಾವುದೇ ಉದ್ಯೋಗವೂ ಮಾಡಲಾಗದೆ ಚಡಪಡಿಸಿದ ಗಂಗಾಧರ ಅವರು, ಕಾಲು ಕಳೆದುಕೊಂಡರೂ ತೊಂದರೆಯಿಲ್ಲ, ಸ್ವಾವಲಂಬಿಯಾಗಿ ಬದುಕಿ ಬಾಳ ಬಂಡಿಯನ್ನು ಮುನ್ನಡೆಸಬೇಕೆಂಬ ಪಣತೊಟ್ಟು ಒಂದು ಹೂವಿನ ಅಂಗಡಿಯನ್ನು ತೆರೆದು ವ್ಯಾಪಾರ ಆರಂಭಿಸಿದರು. ಅಂತೂ ಬಾಡಿಗೆ ಮನೆಯೊಂದರಲ್ಲಿ ಪತ್ನಿ- ಹತ್ತು ವರ್ಷದ ಹೆಣ್ಣು ಮಗುವಿರುವ ಪುಟ್ಟ ಸಂಸಾರದ ಬಂಡಿ ಹೇಗೋ ಸಾಗುತ್ತಿತ್ತು. ಸಂಪಾದನೆ ಕಡಿಮೆ ಆದರೂ ಪ್ರೀತಿ ವಾತ್ಸಲ್ಯಕ್ಕೆ ಕೊರತೆ ಇಲ್ಲ ಎಂಬಂತೆ ಜೀವಿಸುತ್ತಿದ್ದರು.
ಆದರೆ ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎಂಬಂತೆ ಇವರ ಅರೋಗ್ಯ ತಾಪತ್ರಯ ಮತ್ತೆ ಬೆನ್ನು ಹತ್ತಿತು. ಎರಡು ವರ್ಷದ ಹಿಂದೆ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡು ಕೆಲಸ ಮಾಡಲಾಗದ ಸ್ಥಿತಿ ನಿರ್ಮಾಣ ಆಯಿತು. ಇದರಿಂದ ಪತಿಯ ಹೂವಿನ ವ್ಯಾಪಾರವನ್ನು ಪತ್ನಿ ರತ್ನಾವತಿ ನೋಡಿಕೊಂಡು ಸಂಸಾರ ನಿಭಾಯಿಸಲು ಹೆಣಗಾಡಿದರು. ಬದುಕು ಸ್ವಲ್ಪ ಹದಕ್ಕೆ ಬಂತು ಎನ್ನುವಾಗಲೇ ಈ ಕುಟುಂಬಕ್ಕೆ ಮತ್ತೆ ಕಷ್ಟಗಳ ಸರಮಾಲೆ ಸುತ್ತಿಕೊಂಡು ನರಳುವಂತೆ ಮಾಡಿದೆ. ಹೃದಯ ಕಾಯಿಲೆ ಇದ್ದ ಗಂಗಾಧರ ಅವರಿಗೆ ಕಿಡ್ನಿ ವೈಫಲ್ಯ ಕಾಣಿಸಿಕೊಂಡು ಸದ್ಯ ಆಸ್ಪತ್ರೆ ಸೇರಿದ್ದಾರೆ. ಮಧುಮೇಹ, ಹೃದಯ, ಕಿಡ್ನಿ ಸಮಸ್ಯೆಗಳು ಗಂಗಾಧರ ಅವರನ್ನು ಹಿಂಡಿ ಹಿಪ್ಪೆ ಮಾಡಿದೆ. ಸಂಸಾರದ ತುತ್ತಿನ ಆಸರೆಯಾಗಿರುವ ಪತ್ನಿಯೇ ಇವರ ಸೇವೆಗೆ ನಿಂತಿರುವುದರಿಂದ ಬದುಕು ನಡೆಸುವುದು ದುಸ್ತರವಾಗಿದೆ. ಯಕ್ಷರಂಗದ ಮೇರು ಕಲಾವಿದನೊಬ್ಬನ ಕಷ್ಟದ ಜೀವನ ನೋಡಿದಾಗ ಕಟುಕನಿಗೂ ಮನಸ್ಸು ಕರಗುತ್ತದೆ. ಚಿಂತಾಜನಕ ಸ್ಥಿತಿಯಲ್ಲಿರೋ ಈ ಕುಟುಂಬಕ್ಕೆ ನಾವು ಆಸರೆ ಆಗಬೇಕಿದೆ. ರತ್ನಾವತಿ ಅವರು ಚಿಕಿತ್ಸೆಗೆ ಹಣ ಹೊಂದಿಸಲು ದಿಕ್ಕು ತೋಚದೆ ಬರಿಗೈಯಲ್ಲಿ ಅಲೆದಾಡುತ್ತಿದ್ದು ಸಹೃದಯಿ ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ಮಂಗಳೂರಿನ ತಾರಾ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗಾಧರ ಅವರಿಗೆ ಯಕ್ಷ ಪ್ರೇಮಿಗಳು, ಸಂಘ-ಸಂಸ್ಥೆಗಳು, ದಾನಿಗಳು ಚಿಕಿತ್ಸೆಗಾಗಿ ಕರುಣೆ ತೋರಿ ಆರ್ಥಿಕ ಸ್ಪಂದನೆ ನೀಡಿದರೆ ಕುಟುಂಬಕ್ಕೆ ಕೊಂಚ ನೆಮ್ಮದಿ ಸಿಗಬಹುದು.