ಮುರುಕಲು ಮನೆ – ನರರೋಗಪೀಡಿತ ಮಾನಸಿಕ ಅಸ್ವಸ್ಥ ಪತಿ
ಬಂಟ್ವಾಳ(ಡಿ.೦೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಷ್ಟವಿಲ್ಲದ ಜೀವನ ಎಲ್ಲಿದೆ ಹೇಳಿ ? ಕಷ್ಟ ಕಾಣದ ಜನ, ಮನೆ ಇರುವುದು ಸಾಧ್ಯವಿಲ್ಲ. ಆದರೆ ಈ ಬಡ ಕುಟುಂಬಕ್ಕೆ ಕಷ್ಟಗಳ ಸರಮಾಲೆಯೇ ಸುತ್ತಿಕೊಂಡಿದೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತು ಮನೆಗೆ ಆಧಾರವಾಗಿದ್ದ ಯಜಮಾನ ಇದ್ದಕ್ಕಿದ್ದಂತೆ ನರರೋಗಕ್ಕೆ ತುತ್ತಾಗಿ ಬಿಟ್ಟರು. ಅಷ್ಟೇ ಅಲ್ಲ ದೇಹದ ಬಲ ಕಳಕೊಂಡ ತನಗಿನ್ನು ದುಡಿಯಲಾಗುವುದಿಲ್ಲ ಎಂಬ ಸತ್ಯ ಯಾವಾಗ ಅವರಿಗೆ ಮಾನವರಿಕೆಯಾಯಿತೋ ಅಂದಿನಿಂದ ಮಾನಸಿಕ ಅಸ್ವಸ್ಥತೆಗೀಡಾಗಿದ್ದಾರೆ. ಅಲ್ಲಿಗೆ ಕೂಲಿನಾಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಕುಟುಂಬಕ್ಕೆ ದಿಕ್ಕೇ ತೋಚದಾಯಿತು. ಕುಟುಂಬಕ್ಕೆ ಅವರ ಜೀವನ ನಿರ್ವಹಣೆ, ವೈದ್ಯಕೀಯ ವೆಚ್ಚ ಭರಿಸಲು ಶಕ್ತಿಯಿಲ್ಲದ ಸ್ಥಿತಿ ಒಂದೆಡೆಯಾದರೆ ಇನ್ನೊಂದೆಡೆ ಕಷ್ಟಪಟ್ಟು ಸಂಪಾದಿಸಿ ಕಟ್ಟಿದ ಮನೆ ಸುಣ್ಣ, ಬಣ್ಣ ಕಾಣದೇ ಶಿಥಿಲಗೊಂಡು ಕುಸಿಯುವ ಭೀತಿಯಲ್ಲಿದೆ.
ಇದು ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಕುರಿಯಾಲ ಕುಕ್ಕಾಜೆಯಲ್ಲಿ ವಾಸವಾಗಿರುವ ಪ್ರಕಾಶ್ ಕುಲಾಲ್ ಹಾಗೂ ಶಾಂತಾ ದಂಪತಿಯ ಅಸಹನೀಯ ಬದುಕಿನ ಕಥೆ. ಈ ದಂಪತಿಗೆ ಕಿರಣ್ ರಾಜ್(16) ಹಾಗೂ ಕೀರ್ತಿಕಾ(14) ಎಂಬಿಬ್ಬರು ಮಕ್ಕಳಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದಾ ಚಟುವಟಿಕೆಯಿಂದಿದ್ದು, ಕೂಲಿ ಕೆಲಸ ಮಾಡುತ್ತಾ ಕುಟುಂಬ ಸಲಹುತ್ತಿದ್ದ ಪ್ರಕಾಶ್ ವರ್ಷಗಳ ಹಿಂದೆ ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ದುಡಿಯಲು ಅಶಕ್ತರಾದರು.
ಅವರ ಪತ್ನಿ ಶಾಂತಾ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಇವರ ದೌರ್ಭಾಗ್ಯಕ್ಕೆ ಪತಿಯ ಅನಾರೋಗ್ಯ ಸಮಯದಲ್ಲೇ ಆ ಕಾರ್ಖಾನೆಯೂ ಮುಚ್ಚಿಹೋಯಿತು. ಇದೀಗ ಹರೆಯದಲ್ಲಿ ಕಲಿತ ಬೀಡಿ ಸುರುಟುವ ಉದ್ಯೋಗದ ಅಲ್ಪ ಆದಾಯವೇ ಜೀವನಾಧಾರವಾಗಿದೆ. ಬೀಡಿ ಕಟ್ಟಿ ಬರುವ ಅಲ್ಪ ಆದಾಯ ಒಪ್ಪೊತ್ತಿಗೆ ಸಾಕಾಗುವುದಿಲ್ಲ.
ಸಂಸಾರದ ರಥವನ್ನು ಎಳೆಯುವುದಕ್ಕೆ ಈ ಸಂಸಾರ ಪಡುವ ಕಷ್ಟದ ಮೇಲೆ ಅನಾರೋಗ್ಯ ಮುತ್ತಿಕ್ಕಿ ಇವರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಸಂಕಷ್ಟದಲ್ಲಿ ಬದುಕು ಸವೆಸುತ್ತಿರುವ ಇವರು ಹಣದ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ. ಪ್ರಕಾಶ್ ಅವರು ಆರೋಗ್ಯವಾಗಿದ್ದಾಗ ಸಾಲ ಮಾಡಿ ಮನೆ ಕಟ್ಟಿದ್ದು, ಇದೀಗ ಅದು ಸರಿಯಾದ ನಿರ್ವಹಣೆ ಇಲ್ಲದೇ ಕುಸಿಯುವ ಭೀತಿಯಲ್ಲಿದೆ. ಮನೆ ಮಾಡು ಕೆಟ್ಟಿದ್ದರಿಂದ ಮಳೆಗಾಲದಲ್ಲಿ ಪೂರ್ತಿಯಾಗಿ ಮನೆಯ ಒಳಗೆ ನೀರು ತುಂಬಿ ರಾತ್ರಿ ಹಗಲು ತನ್ನ ಮಣ್ಣಿನ ನೆಲದಲ್ಲೇ ಕೆಸರಿನಲ್ಲಿ ಜೀವನ ಸಾಗಿಸುವ ಇವರ ಸ್ಥಿತಿ ಕಂಡರೆ ಎಂತಹವರಿಗೂ ಮನ ಕಲಕುತ್ತದೆ. ತಲೆಯ ಮೇಲಿನ ಸೂರು ಗಟ್ಟಿಯಾಗಿದ್ದರೆ ಉಳಿದ ಕಷ್ಟಗಳನ್ನು ಮೆಟ್ಟಿ ಹೇಗೋ ಬದುಕು ಕಟ್ಟಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸದಿಂದ ಹೇಳಿಕೊಳ್ಳುವ ಶಾಂತಾ ಅವರು, ಮನೆ ರಿಪೇರಿಗೆ ಸಾರ್ವಜನಿಕರ ಕಿಂಚಿತ್ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಡ ಕುಟುಂಬಕ್ಕೆ ಮನೆ ರಿಪೇರಿಗೆ ಧನಸಹಾಯ ಮಾಡಲಿಚ್ಛಿಸುವ ಸಹೃದಯಿ ದಾನಿಗಳು ಈ ಕೆಳಗಿನ ಖಾತೆಗೆ ನೆರವು ನೀಡಬಹುದು.
SHANTHA
W/O PRAKASHA
CANARA BANK,
S.B A/C NO. 5267108000460 (IFSC Code: CNRB0005267)
SORNAD BRANCH, BANTWAL TALUK, D.K
KARNATAKA