ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಹಿರಿಯ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುತ್ಸದ್ಧಿ ಕೊಲ್ಯ ಸೀತಾರಾಮ ಬಂಗೇರ ಅವರಿಗೆ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
ಕಲೆ, ಸಾಹಿತ್ಯ, ಶಿಕ್ಷಣ, ಸಾಮಾಜಿಕ, ಪತ್ರಿಕೋದ್ಯಮ ಹೀಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ 2020ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಇವರಲ್ಲಿ ಕೊಲ್ಯ ಸೀತಾರಾಮ ಬಂಗೇರ ಅವರೂ ಒಬ್ಬರಾಗಿದ್ದಾರೆ. ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾಗಿ, ಮಲೆಯಾಳಿ ಚಾಮುಂಡೇಶ್ವರಿ ದೇವಸ್ಥಾನದ ಟ್ರಸ್ಟಿಯಾಗಿ, ಅಡ್ಕ-ಕುಂಜತ್ತೂರಿನ ಬಂಗೇರ ಮೂಲಸ್ಥಾನದ ಹಿರಿಯ ಗುರಿಕಾರರಾಗಿ ಧಾರ್ಮಿಕ ಬದುಕಿನ ಒಳ ಹೊರಗನ್ನು ಅನುಭವಿಸಿ,ಆಚರಿಸಿ ಉಳಿಸಿ ಬೆಳೆಸುವಲ್ಲಿ, ಸಂಸ್ಕಾರ ಸಂಸ್ಕೃತಿಯನ್ನ ಬಿತ್ತರಿಸುವಲ್ಲಿ ಸಾಕಷ್ಟು ಹೆಣಗಿದವರು. ಲ್ಯಾಂಡ್ ಡೆವಲಪ್ಮೆಂಟ್ ಬ್ಯಾಂಕ್ ನ ಸದಸ್ಯರಾಗಿ, ಕೊಲ್ಯ ಕುಲಾಲ ಸಂಘಕ್ಕೆ 4 ಬಾರಿ ಅಧ್ಯಕ್ಷರಾಗಿ, ಜಿಲ್ಲಾ ಕುಲಾಲ ಯಾನೆ ಮೂಲ್ಯರ ಸಂಘದ ಹಿರಿಯ ಮಾರ್ಗದರ್ಶಕರಾಗಿ, ಕೊಲ್ಯ ಕುಂಭೇಶ್ವರ ಸೊಸೈಟಿಯ ಸ್ಥಾಪಕ ಸದಸ್ಯ ಹಾಗೂ ನಂತರ ಅಧ್ಯಕ್ಷರಾಗಿ, ತೊಕ್ಕೊಟ್ಟು ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಸ್ಥಾಪಕರಲ್ಲಿ ಒಬ್ಬರಾಗಿ ,ಪೋಷಕರಾಗಿ ಉಳ್ಳಾಲದ ಸುತ್ತುಮುತ್ತಲಿನ ಆಗು ಹೋಗುಗಳಿಗೆ, ಏಳು ಬೀಳುಗಳಿಗೆ ಹಿರಿಯ ಸಾಕ್ಷಿಯಾಗಿ ನಿಂತಿರುವವರು ಸೀತಾರಾಮ ಬಂಗೇರರು.
1941 ಸೆಪ್ಟೆಂಬರ್ 4 ರಂದು ಶ್ರೀಮತಿ ರುಕ್ಮಿಣಿ ಹಾಗು ಶ್ರೀ ಮಂಜಪ್ಪ ದಂಪತಿ ಗಳ ಮಗನಾಗಿ ಜನನ. ಸ್ವಾತಂತ್ರ್ಯ ಪೂರ್ವದ ಬಡತನ ಕಷ್ಟ ಕಾರ್ಪಣ್ಯದ ಕಠಿಣ ದಿನಗಳು. ಪರಿಸ್ಥಿತಿಯ ಒತ್ತಡದಿಂದ ಪ್ರಾಥಮಿಕ ಶಿಕ್ಷಣ ಮುಗಿಸಿ ಬೀಡಿ ಕಟ್ಟುವ ಕಾಯಕಕ್ಕೆ ಧುಮುಕಿ ಕುಟುಂಬಕ್ಕೆ ಆಸರೆಯಾದವರು. ಅದಾದ ಬಳಿಕ ರೈಟರ್ ಆಗಿ ಅಂಗಡಿಯಲ್ಲಿ ಕೆಲಸ ಮಾಡಿ ವರ್ಕ್ ಶಾಪ್ ನಲ್ಲಿ ವೆಲ್ದರ್ -ಫಿಟ್ಟರ್ ಆಗಿ ದುಡಿತ. ದುಡಿಯುತ್ತಾ ದುಡಿಯುತ್ತಾ 1974ರಲ್ಲಿ ತೊಕ್ಕೊಟ್ಟಿನ ಭಟ್ನಗರದಲ್ಲಿ ಭಾರತ್ ಇಂಡಸ್ಟ್ರೀಟ್ ಸ್ಥಾಪಿಸಿದರು. ಅಲ್ಲಿಂದಲೇ ಬೆಳೆದು ನಿಂತರು.
ಶ್ರೀಮತಿ ಸುಂದರಿಯವರನ್ನು ಕೈಹಿಡಿದು 4 ಗಂಡು, 2 ಹೆಣ್ಣು ಮಕ್ಕಳ ತುಂಬು ಕುಟುಂಬ ಇವರದ್ದು. ಉಳ್ಳಾಲ ಎಂದರೆ ಅಬ್ಬಕ್ಕ, ಪೋರ್ಚುಗೀಸರ ಎದುರು ಹಿಂದೂ-ಮುಸ್ಲಿಮ್ ಬಂಧುಗಳು ಏಕ ಮನಸ್ಸಿನಿಂದ ಹೋರಾಟ ಕೊಟ್ಟ ರಾಷ್ಟ್ರದ ಖ್ಯಾತ ಊರು. ಅಲ್ಲಿ ರಾಜಕೀಯದ ವಿಷಯ ಬಂದಾಗ ಬಂಗೇರರದ್ದು ಮರೆಯಲಾಗದ ಹೆಸರು. ಕಾಂಗ್ರೆಸ್, ಕಮ್ಯುನಿಸ್ಟ್ ಭದ್ರಕೋಟೆಯಾಗಿದ್ದ ಈ ನಾಡಲ್ಲಿ ಜನತಾ ಪಕ್ಷ, ಜನಸಂಘ ಹಾಗೂ ಬಿಜೆಪಿ ಗೆ ಭದ್ರ ಭುನಾದಿ ಹಾಕಿ ಕೊಡುವಲ್ಲಿ ಅಡಿಗಲ್ಲು ಹಾಕಿದವರಲ್ಲಿ ಇವರು ಪ್ರಮುಖರು ಎಂದರೆ ತಪ್ಪಾಗಲಾರದು. 1957ರ ಚುನಾವಣೆಯಲ್ಲಿ ಮಂಗಳೂರು -2 ಎಂದು ಹೆಸರಾಗಿದ್ದ ಸಮಯದಲ್ಲೇ ಇವರು ಎಳೆ ವಯಸ್ಸಿನಲ್ಲೇ ಜನತಾ ಪಕ್ಷದತ್ತ ವಾಲಿದ್ದರು. 1977ರ ಪಂಚಾಯತ್ ಚುನಾವಣೆ, 1982ರಲ್ಲಿ ಜನಸಂಘ ರಚನೆಯಾದಾಗ ಅಲ್ಲಿ ಪ್ರಮುಖ ಪಾತ್ರ ವಹಿಸಿ ಉಳ್ಳಾಲ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ (1984-87) ಜಿಲ್ಲಾ ಪಂಚಾಯತ್ ಗೆ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದರು (1986). 1987ರಲ್ಲಿ ಜಿಲ್ಲಾ ಬಿಜೆಪಿಯ ಕಾರ್ಯದರ್ಶಿಯಾಗಿ ಅಂದಿನ ಅಧ್ಯಕ್ಷರಾಗಿದ್ದ ಧನಂಜಯ ಕುಮಾರ್ ಅವರ ಜೊತೆ ದುಡಿದಿದ್ದರು. 1996 ರಲ್ಲಿ ಉಳ್ಳಾಲದ ಪಂಚಾಯತ್ ಸದಸ್ಯರಾಗಿ ಉಳ್ಳಾಲದಲ್ಲಿ ಅಬ್ಬಕ್ಕನವರ ಪ್ರತಿಮೆ ಹಾಗೂ ವೃತ್ತ ಮಾಡುವಲ್ಲಿ ಶ್ರಮಿಸಿದವರು. ಹೀಗೆ ಜಿಲ್ಲಾ ಬಿಜೆಪಿಯ ಹಿರಿಯ ನಾಯಕನಾಗಿ, ಜಿಲ್ಲಾ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರಾಗಿ ಬಿಜೆಪಿಯ ರಾಜ್ಯ ಪರಿಷತ್ ನ ಸದಸ್ಯರಾಗಿ ಇಂದಿನವರೆಗೂ ಸಕ್ರೀಯವಾಗಿ ದುಡಿಯುತ್ತಿರುವ ಹಿರಿಯ ಜೀವ.
ರಾಜಕೀಯದಲ್ಲಿ ಇದ್ದರೂ ಸಹಾ ತನ್ನ ಸಾಮಾಜಿಕ ಹಾಗೂ ಧಾರ್ಮಿಕ ಹೊಣೆಯನ್ನು ಅರಿತು ನಡೆದವರು. ಹುಟ್ಟಿದ ಮನೆ,ಜಾತಿ, ಧರ್ಮ ಹಾಗೂ ಸಮಾಜಕ್ಕೆ ಅನ್ಯಾಯವಾದಾಗ ಸಿಡಿದೆದ್ದು ಸುದ್ದಿಯಾದವರಲ್ಲಿ ಬಂಗೇರರೂ ಸಹಾ ಒಬ್ಬರು. ಕೊಲ್ಯ ಶಾರದೋತ್ಸವ ಸಮಿತಿ (1984) ಸದಸ್ಯರಾಗಿ, ಅಧ್ಯಕ್ಷರಾಗಿ, ಗೌರವ ಅಧ್ಯಕ್ಷರಾಗಿ ಇಂದಿಗೂ ಯುವಕರಿಗೆ ಪ್ರೇರಣೆಯಾಗಿ ದುಡಿಯುತ್ತಿದ್ದಾರೆ.