ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ವಯಸ್ಸು 111ರ ಗಡಿದಾಟಿದರೂ ಮನಸ್ಸು ಮಾತ್ರ 20ರ ಹರೆಯ. ಇಳಿ ವಯಸ್ಸಿನಲ್ಲೂ ಸ್ಪಷ್ಟವಾದ ಉಚ್ಚಾರಣೆ; ಚುರುಕು ಬುದ್ಧಿ. ಯಾರ ಸಹಾಯವೂ ಇಲ್ಲದೆ ತನ್ನ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳುವಷ್ಟು ಸ್ವಾಭಿಮಾನಿ. ಲವಲವಿಕೆ ಜೀವನವೇ ಅವರ ದೀರ್ಘಾಯುಷ್ಯದ ಗುಟ್ಟು. ಕಾರ್ಕಳ ತಾಲೂಕು ಸೂಡ ಗ್ರಾಮದ ಶತಾಯುಷಿ ನರ್ಸಿ ಮೂಲ್ಯ ಅವರದ್ದು 111ಕ್ಕೂ ಹೆಚ್ಚು ವಸಂತಗಳನ್ನು ಕಂಡ ತುಂಬು ಜೀವ.
ಪುಟ್ಟ ಮನೆಯಲ್ಲಿ ಅಪ್ಪಟ ಮಗುವಿನಂತೆ ಸದಾ ಹಸನ್ಮುಖಿಯಾಗಿರುವ ಅವರು, ಯಾವ ಕಾಯಿಲೆ, ತೊಂದರೆ ಇಲ್ಲದೆ ಆರೋಗ್ಯವಂತಳಾಗಿಬಡತನದಲ್ಲೂ ಸುಖ ಜೀವನ ನಡೆಸುತ್ತಿರುವ ಸರಳ ಜೀವಿ. ಅವರ ಸ್ವಾಭಿಮಾನ ಮತ್ತು ಸ್ವತಂತ್ರ ಬದುಕು ಎಲ್ಲರಿಗೂ ಆದರ್ಶ ಎಂಬ ನಿಟ್ಟಿನಲ್ಲಿ ಹಾಗೂ ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ರೋಟರಿ ಕ್ಲಬ್ ಬೆಳ್ಮಣ್ ವತಿಯಿಂದ ಸಮ್ಮಾನಿಸಲಾಯಿತು.
ಇನ್ನು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ವಲಯ ೫ರ ಮಾಜಿ ಸಾಹಯಕ ಗವರ್ನರ್ ಪಿ. ಎಚ್. ಎಫ್. ಸೂರ್ಯಕಾಂತ ಶೆಟ್ಟಿ ಗೌರವಾರ್ಪಣೆ ನಡೆಸಿಕೊಟ್ಟರು. ವಲಯ 5ರ ವಲಯ ಸೇನಾನಿ ಸುರೇಶ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪೂರ್ವಾಧ್ಯಕ್ಷ ಪಿ.ಎಚ್.ಎಫ್. ರನೀಶ್ ಆರ್. ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ರವಿರಾಜ್ ಶೆಟ್ಟಿ, ಸಂಸ್ಥೆಯ ಸದಸ್ಯ ರಾಜೇಶ್ ಸಾಲ್ಯಾನ್ ಹಾಗೂ ನರ್ಸಿ ಮೂಲ್ಯ ಇವರ ಕುಟುಂಬ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.