ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ನೀರ್ಚಾಲು ಸಮೀಪದ ಕುಂಟಿಕಾನದ ಕುಮಾರಿ ಅರ್ಪಿತಾ ಕುಲಾಲ್ ಇವರಿಗೆ ಜಿಯೋಗ್ರಾಫಿ ಸ್ನಾತಕೋತ್ತರ ಪದವಿಯಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಐದು ಚಿನ್ನದ ಪದಕ ಲಭಿಸಿದೆ.
ಎಳವೆಯಲ್ಲೇ ಉತ್ತಮ ಅಧ್ಯಯನ ಹವ್ಯಾಸಗಳನ್ನು ರೂಢಿಸಿಕೊಂಡು ಪ್ರಾಥಮಿಕ ಶಿಕ್ಷಣವನ್ನು ಎ.ಎಸ್.ಬಿ.ಎಸ್. ಕುಂಟಿಕಾನ ಶಾಲೆಯಲ್ಲಿ, ಪ್ರೌಢ ಶಿಕ್ಷಣ ಎಮ್.ಎಸ್.ಸಿ.ಎಚ್.ಎಸ್. ನೀರ್ಚಾಲು ಶಾಲೆಯಲ್ಲಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಎಡನೀರು ಸ್ವಾಮೀಜೀಸ್ ವಿದ್ಯಾಸಂಸ್ಥೆಯಲ್ಲಿ ಕಲಿತು, ನಂತರ ಬಿ.ಎಸ್ಸಿ. ಪದವಿಯನ್ನು ಪೆರ್ಲದ ನಲಂದಾ ಕಾಲೇಜಿನಲ್ಲಿ ಕಣ್ಣೂರು ವಿಶ್ವವಿದ್ಯಾಲಯದ ಪ್ರಥಮ ರ್ಯಾಂಕ್ ನೊಂದಿಗೆ ಪೂರೈಸಿದ ಅರ್ಪಿತಾ ಇದೀಗ ಸತತ ಪರಿಶ್ರಮದಿಂದ ಎಂ.ಎಸ್ಸಿ. ಪದವಿಯಲ್ಲಿಯೂ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಘಟಿಕೋತ್ಸವ ಸಮಾರಂಭದಲ್ಲಿ ನಗದು ಬಹುಮಾನ ಸಹಿತ ಐದು ಚಿನ್ನದ ಪದಕಗಳೊಂದಿಗೆ ಪ್ರಥಮ ರ್ಯಾಂಕ್ ಪಡೆದಿರುವುದು ಹೆತ್ತವರಿಗೆ, ಕಲಿಸಿದ ಗುರುಗಳಿಗೆ, ಊರಿನವರಿಗೆ ಹಾಗೂ ಗಡಿನಾಡು ಕಾಸರಗೋಡಿನ ಜನತೆಗೆ ಹೆಮ್ಮೆಯ ವಿಷಯ.
ಕುಂಟಿಕಾನದ ದಿ.ಕುಟ್ಯಾಪ್ಪು ಹಾಗೂ ಲಕ್ಷ್ಮೀ ದಂಪತಿಯ ಪುತ್ರಿಯಾಗಿರುವ ಇವರು ಇದೀಗ ಕೇರಳ ವಿಶ್ವವಿದ್ಯಾಲಯದ ಪಂದಳ ಎನ್.ಎಸ್.ಎಸ್. ಕಾಲೇಜಿನಲ್ಲಿ ಬಿಎಡ್ ವ್ಯಾಸಂಗ ಮಾಡುತ್ತಿದ್ದು , ಉತ್ತಮ ಶಿಕ್ಷಕಿಯಾಗಿ ರೂಪುಗೊಳ್ಳಬೇಕೆಂಬ ಅಭಿಲಾಷೆಯನ್ನು ಹೊಂದಿದ್ದಾರೆ.