ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸಹಾಯಹಸ್ತ ನೀಡಲು ದಾನಿಗಳಲ್ಲಿ ಮನವಿ
ಪೆರ್ಡೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕೆಲವೇ ಗಂಟೆಗಳಲ್ಲಿ ಬದುಕು ಇಷ್ಟು ದುರ್ಬರ ಆಗಬಹುದೆಂದು ಬಹುಶಃ ಯಾರೂ ಎಣಿಸಿರಲಿಲ್ಲ. ಕೇವಲ ಒಂದೇ ದಿನದಲ್ಲಿ ಕೃಷ್ಣನಗರಿ ಉಡುಪಿಯಲ್ಲಿ ಎಡಬಿಡದೇ ಸುರಿದ ರಣ ಮಳೆಯ ಆರ್ಭಟಕ್ಕೆ ನದಿ ತಪ್ಪಲಿನ ಜನರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಉತ್ತರೆಯ ಮುನಿಸಿನಿಂದ ಧೋ ಎಂದು ಸುರಿದ ಮಳೆ ಸ್ವರ್ಣೆಯ ಒಡಲನ್ನು ತುಂಬಿ ಹಠಾತ್ ಪ್ರವಾಹ ರೂಪದಲ್ಲಿ ಹರಿದು ಬಂತು. ಪರಿಣಾಮ ಸ್ವರ್ಣ ನದಿಯ ಆಸುಪಾಸಿನಲ್ಲಿ ಬದುಕು ಕಟ್ಟಿಕೊಂಡ ನೂರಾರು ಕುಟುಂಬಗಳ ಸೂರನ್ನೇ ಧ್ವಂಸಗೊಳಿಸಿ ಬಿಟ್ಟಿದೆ. ದುರಂತವೆಂದರೆ ಮೂವತ್ತಕ್ಕೂ ಅಧಿಕ ಕುಲಾಲ ಕುಟುಂಬಗಳು ಈ ಜಲ ಪ್ರವಾಹಕ್ಕೆ ಸಿಕ್ಕಿ ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ.
ಸ್ವರ್ಣೆ ನದಿಯ ತಪ್ಪಲ್ಲಿರುವ ಪುತ್ತಿಗೆ, ಕುಕ್ಕೆಹಳ್ಳಿ, ಮಾಣಾಯಿ, ಮರ್ಣೆ, ಸಗ್ರಿ, ಪೆರಂಪಳ್ಳಿ ಪರಿಸರದಲ್ಲಿ ಮನೆಮಾಡಿಕೊಂಡು ನಿತ್ಯ ಕೂಲಿ ಮಾಡಿ ಹೊಟ್ಟೆ ಬಟ್ಟೆ ತುಂಬಿಸಿಕೊಳ್ಳುತ್ತಿದ್ದ ಮೂವತ್ತಕ್ಕೂ ಅಧಿಕ ಕುಲಾಲ ಕುಟುಂಬಗಳು ಬೀದಿಗೆ ಬಿದ್ದಿವೆ. ಅದರಲ್ಲೂ 10 ಕುಲಾಲ ಸಮುದಾಯದವರ ಮನೆ ಅಕ್ಷರಶಃ ಜಲ ಪ್ರವಾಹಕ್ಕೆ ಸಿಕ್ಕಿ ಉರುಳಿ ನೆಲಸಮವಾಗಿದೆ. ಇದರಿಂದ ಅಂದಾಜು ಸುಮಾರು 50 ಲಕ್ಷ ನಷ್ಟವಾಗಿದೆ. ಮನೆ ಕಳೆದುಕೊಂಡ ಕುಲಾಲ ಕುಟುಂಬಗಳು ಅನಿವಾರ್ಯವಾಗಿ ಸಹಾಯದ ಮೊರೆ ಇಡುತ್ತಿವೆ.
ನೆರವಿಗೆ ಮನವಿ
ವರುಣನ ರಣ ಆರ್ಭಟಕ್ಕೆ ಸಿಕ್ಕಿ ಮನೆ ಕಳೆದುಕೊಂಡಿರುವ ಕುಲಾಲ ಸಮುದಾಯದ ಕುಟುಂಬಗಳಿಗೆ ನೆರವಿನ ಭರವಸೆಯನ್ನು ಪೆರ್ಡೂರು ಕುಲಾಲ ಸಂಘ ನೀಡಿದೆ. ಮಳೆ ಸುರಿದ ಕೆಲವೇ ಗಂಟೆಗಳಲ್ಲಿ ಪೆರ್ಡೂರು ಕುಲಾಲ ಸಮುಧಾಯ ಭವನದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿತ್ತು. ಸಂಘದ ಪದಾದಿಕಾರಿಗಳು ಮನೆಕಳೆದುಕೊಂಡ ಸ್ಥಳಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವಾನ ನೀಡಿದರು.
ಇದಕ್ಕೆ ಸಾಥಿಯಾಗಿ ತಕ್ಷಣದಲ್ಲಿ ಸ್ಪಂದಿಸಬೇಕಾದ ಜವಬ್ದಾರಿ ಸಮುದಾಯದ ನಮ್ಮೆಲ್ಲರ ಮುಂದಿದೆ. ಸಮಾಜದ ದಾನಿಗಳು, , ಕುಲಾಲ ಸಂಘ ಸಂಸ್ಥೆಗಳು, ಯುವ ವೇದಿಕೆಗಳು ಈ ಅಪತ್ಕಾಲದಲ್ಲಿ ತಮ್ಮಿಂದಾದಷ್ಟು ಹಣದ ಸಹಾಯ ಮಾಡಿದರೆ ಅದನ್ನು ಸೂಕ್ತವಾಗಿ ಮಳೆಯ ವಿನಾಶಕ್ಕೆ ಸಿಕ್ಕಿ ಬದುಕು ದುಸ್ತರಮಾಡಿಕೊಂಡಿರುವ ಕುಲಾಲ ಕುಟುಂಬಗಳಿಗೆ ಮುಟ್ಟಿಸುವ ಕೆಲಸವನ್ನು ಪೆರ್ಡೂರು ಕುಲಾಲ ಸಂಘ ಮಾಡುತ್ತದೆ.
ನೀವು ನೀಡಿದ ಪೈಸೆ ಪೈಸೆಯನ್ನು ಲೆಕ್ಕವಿರಿಸಿ ನೊಂದ ಕುಟುಂಬಗಳ ಮಡಿಲಿಗೆ ಹಾಕುವ ಜವಬ್ದಾರಿಯನ್ನು ಪೆರ್ಡೂರು ಕುಲಾಲ ಸಂಘ ಹೊತ್ತಿದೆ. ಆ ಕಾರಣ ಈ ಅಪಾತ್ಕಾಲದಲ್ಲಿ ಬದುಕಿನ ಸೂರನ್ನೇ ಕಳೆದುಕೊಂಡಿರುವ ಕುಲಾಲ ಕುಟುಂಬಗಳ ಕಣ್ಣೀರನ್ನು ಒರೆಸುವ ಕಾಯಕ ನಮ್ಮೆಲ್ಲರದ್ದಾಗಲಿ. ನೆರವಿನ ಸಹಾಯಹಸ್ತ ಎಲ್ಲೆಡೆಯಿಂದ ಹರಿದು ಬರಲಿ ಎಂಬ ಪ್ರಾರ್ಥನೆ ನಮ್ಮದು.. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9900475153 , 9945998578 ಸಂಪರ್ಕಿಸಿ.