ಕಲಬುರ್ಗಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) :ನೀಲಖಾಡ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ರೇಣುಕಾ ಎನ್ ಅವರು 2020-21ನೇ ಸಾಲಿನ ಕಲ್ಬುರ್ಗಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಇಲ್ಲಿನ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು 25 ಶಿಕ್ಷಕ ಶಿಕ್ಷಕಿಯರಿಗೆ ಉತ್ತಮ ಶಿಕ್ಷಕ, ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ರಾಜಾ ಪಿ., ಡಿಡಿಪಿಐ ಎಸ್.ಪಿ. ಬಾಡಗಂಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ ಇದ್ದರು.
ರೇಣುಕಾ ಅವರು ಬೆಳ್ತಂಗಡಿ ತಾಲೂಕು, ಶಿರ್ಲಾಲು ಗ್ರಾಮದ ಹೊಸಮನೆ ಗುಲಾಬಿ ಮತ್ತು ನಾರಾಯಣ ಸಾಲಿಯಾನ್ ಅವರ ಸುಪುತ್ರಿಯಾಗಿದ್ದು, ಶಿಕ್ಷಕರಾದ ಶ್ರೀಕಾಂತ್ ಅವರ ಧರ್ಮಪತ್ನಿಯಾಗಿರುತ್ತಾರೆ. ಕೋವಿಡ್-19 ಸಮಯದ ಸಂದಿಗ್ಧತೆಯ ಪರಿಸ್ಥಿತಿಯಲ್ಲಿ ಕೂಡಾ ಮಕ್ಕಳ ಮನೆ ಮನೆಗೆ ತೆರಳಿ, ಪಾಠ ಮಾಡಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಇವರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಇವರ ಕೆಲಸಕ್ಕೆ ಕಲ್ಬುರ್ಗಿಯ ಆಯುಕ್ತರಾದ ನಳಿನ್ ಅತುಲ್ ರವರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಳ, ಪರಿಣಾಮಕಾರಿ ಬೋಧನೆಯೊಂದಿಗೆ ವೈವಿಧ್ಯಮಯ ಚಟುವಟಿಕೆಗಳನ್ನು ಶಾಲೆಯಲ್ಲಿ ಆಯೋಜಿಸಿರುತ್ತಾರೆ ಹಾಗೂ ದಾನಿಗಳಿಂದ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಶಾಲೆಯ ಭೌತಿಕ ಸೌಲಭ್ಯಗಳನ್ನು ಹೆಚ್ಚಿಸಿರುವುದು ಸ್ಥಳೀಯರ ವ್ಯಾಪಕ ಶ್ಲಾಘನೆಗೆ ಪಾತ್ರರಾಗಿದ್ದಾರೆ. ದ.ಕ.ಜಿಲ್ಲೆಯಿಂದ ಉದ್ಯೋಗ ನಿಮಿತ್ತ ದೂರದ ಗುಲ್ಬರ್ಗಕ್ಕೆ ಹೋಗಿ ಪರಿಣಾಮಕಾರಿಯಾದ ತಮ್ಮ ವೃತ್ತಿಯಿಂದಾಗಿ ಕಲ್ಬುರ್ಗಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿರುವುದು ನಮ್ಮ ಕುಲಾಲ ಸಮುದಾಯಕ್ಕೇ ಹೆಮ್ಮೆಯ ವಿಷಯ.