ಮಂಜೇಶ್ವರ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮನೆ ಸಮೀಪ ಕಂಬದಿಂದ ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ-ಮಗು ಮೃತಪಟ್ಟ ಘಟನೆ ವರ್ಕಾಡಿ ಸಮೀಪದ ದೈಗೋಳಿಯ ಬೋಳಂತಕೋಡಿ ಎಂಬಲ್ಲಿ ನಡೆದಿದೆ.
ಶುಕ್ರವಾರ ಬೆಳಿಗ್ಗೆ ನಡೆದ ವಿದ್ಯುತ್ ದುರಂತ ನಾಡನ್ನೇ ಕಣ್ಣೀರಲ್ಲಿ ಮುಳುಗಿಸಿದೆ. ದುರ್ಘಟನೆಯಲ್ಲಿ ಮೃತ ಪಟ್ಟವರನ್ನು ವಿಶ್ವನಾಥ ಮೂಲ್ಯ ಎಂಬವರ ಪತ್ನಿ ವಿಜಯಾ (32) ಹಾಗೂ ಅವರ ಪುತ್ರ ಆಶ್ರಯ್ (6) ಎಂದು ಗುರುತಿಸಲಾಗಿದೆ.
ಬೋಳಂತಕೋಡಿಯ ರಿಕ್ಷಾ ಚಾಲಕರಾಗಿರುವ ವಿಶ್ವನಾಥ ಎಂಬವರ ಮನೆ ಹಿಂಭಾಗದಲ್ಲಿ ಹಾದು ಹೋಗಿದ್ದ ಎಲ್ ಟಿ ಲೈನ್ ಮಳೆಗೆ ತುಂಡಾಗಿ ಬಿದ್ದಿದ್ದು, ಇದರ ಅರಿವಿಲ್ಲದೆ ಇವರ ಹಿರಿಯ ಮಗಳು ಸಾನಿಕಾ (10 ವರ್ಷ) ಅ ದಾರಿಯಾಗಿ ಸಾಗಿದ್ದಳು. ಅಕ್ಕನ ಹಿಂದಿನಿಂದಲೇ ತಮ್ಮ ಆಶ್ರಯ್ (6ವರ್ಷ) ತೆರಳಿದ್ದು ಕಡಿದು ಬಿದ್ದ ತಂತಿಯ ಅರಿವಿಲ್ಲದೆ ತುಳಿದಿದ್ದ. ಈ ವೇಳೆ ಕೂಗು ಕೇಳಿದ್ದು ಒಳಗೆ ಅಡುಗೆ ಕೋಣೆಯಲ್ಲಿದ್ದ ತಾಯಿ ವಿಜಯ ಓಡಿ ಬಂದು ಮಗುವನ್ನು ರಕ್ಷಿಸಲೆತ್ನಿಸಿದ್ದು ಈ ವೇಳೆ ಆಕೆಗೂ ಶಾಕ್ ತಗುಲಿತ್ತು. ಈ ಸಂದರ್ಭದಲ್ಲಿ ಬೊಬ್ಬೆ ಕೇಳಿ ಓಡಿ ಬಂದ ನೆರೆಮನೆಯವರು ವಿದ್ಯುತ್ ಪ್ಯೂಸ್ ತೆಗೆದು ಮಗು ಹಾಗೂ ತಾಯಿಯನ್ನು ರಕ್ಷಿಸಲು ಯತ್ನಿಸಿದರು. ದುರದೃಷ್ಟವಶಾತ್ ಇವರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಡುವೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೃತ ವಿಜಯಾ ಅವರು ದೈಗೋಳಿಯಲ್ಲಿ ಹೋಟೆಲ್ ಹೊಂದಿದ್ದು, ಸ್ಥಳೀಯವಾಗಿ ಜನಾನುರಾಗಿಯಾಗಿದ್ದರು.
ಪಾರಾದ ಹಿರಿಯ ಪುತ್ರಿ
ಮಜಿರ್ಪಳ್ಳದಲ್ಲಿ ರಿಕ್ಷಾ ಚಾಲಕರಾಗಿ ದುಡಿಯುವ ವಿಶ್ವನಾಥ ಮೂಲ್ಯರು ಕಳೆದ 11 ವರ್ಷಗಳ ಹಿಂದೆ ಕಳತ್ತೂರು ಸಮೀಪದ ಕಿದೂರಿನ ಓಡಗದ್ದೆಯ ದಿ.ಐತ್ತಪ್ಪ ಮೂಲ್ಯ-ಲಕ್ಷ್ಮಿ ಎಂಬವರ ಕೊನೆಯ ಪುತ್ರಿಯಾದ ವಿಜಯ ಎಂಬಾಕೆಯನ್ನು ವಿವಾಹವಾಗಿದ್ದು ಸಾನಿಕಾ ಹಾಗೂ ಆಶ್ರಯ ಎಂಬಿಬ್ಬರು ಮಕ್ಕಳಿದ್ದರು.ವಿ ದ್ಯುತ್ ತಂತಿಯ ಸಮೀಪ ಈ ಎರಡು ಮಕ್ಕಳು ಹಾದು ಹೋಗಿದ್ದರೂ ಹಿರಿಯಾಕೆ ಅದೃಷ್ಠವಶಾತ್ ಪಾರಾಗಿರುವುದು ದೇವರ ದಯೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತಪಟ್ಟ ಆಶ್ರಯ್ ಕಳಿಯೂರು ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಎಲ್ ಕೆ ಜಿ ವಿದ್ಯಾರ್ಥಿನಿಯಾಗಿದ್ದಾನೆ. ಹಿರಿಯಾಕೆ ಸಾನಿಕಾ ಅದೇ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ. ತಾಯಿ ಮಗುವಿನ ಶವವನ್ನು ಮಹಜರು ನಡೆಸಲು ಮಂಗಲ್ಪಾಡಿ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ತಲುಪಿಸಲಾಗಿದೆ.