ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ತೆಂಗಿನ ಬೆಲೆ ಗಗನಕ್ಕೇರಿದೆ. ಇದರಿಂದ ಗ್ರಾಹಕರಿಗೆ ಕಸಿವಿಸಿಯಾದ್ರೂ ರೈತರು ಮಾತ್ರ ಸಖತ್ ಖುಷಿಯಲ್ಲಿದ್ದಾರೆ. ಆದರೆ, ಕರಾವಳಿಯ ರೈತರಿಗೆ ಮಾತ್ರ ಈ ಖುಷಿ ಸಿಕ್ಕಿಲ್ಲ. ಫಲವತ್ಭರಿತವಾಗಿ ಬಂದ ತೆಂಗಿನ ಬೆಳೆ ಕೋತಿಗಳ ಹಾವಳಿಗೆ ಬಲಿಯಾಗಿದೆ. ಕೋತಿಗಳ ಉಪಟಳದಿಂದ ಕಂಗೆಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಬುದ್ದಿವಂತ ರೈತ ಕುಂಜ್ಞಣ್ಣ ಮೂಲ್ಯ ಅವರು ಮಂಗಗಳ ಕಾಟದಿಂದ ತಪ್ಪಿಸಲು ಸರಳ ಉಪಾಯ ಕಂಡುಕೊಂಡಿದ್ದಾರೆ.
ವಾನರಗಳ ಕಾಟದಿಂದ ಇದ್ದ ಬೆಳೆಗಳೆನ್ನೆಲ್ಲಾ ಕಳೆದುಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಗ್ರಾಮದ ಕುಂಜ್ಞಣ್ಣ ಮೂಲ್ಯ ತೆಂಗಿನ ಮರಗಳಿಗೆ ತಗಡಿನ ಶೀಟ್ಗಳನ್ನು ಕಟ್ಟಿ, ಮಂಗಗಳು ಮರ ಏರದಂತೆ ನೋಡಿಕೊಳ್ಳುವ ಮೂಲಕ ಕಪಿ ಕಾಟದಿಂದ ತಪ್ಪಿಸಿಕೊಂಡಿದ್ದಾರೆ. ಮಂಗನಿಂದ ಹಾಳಾದ ಬೆಳೆಗಳಿಗೆ ಪರಿಹಾರಕ್ಕಾಗಿ ಸರ್ಕಾರದ ಕಛೇರಿಗಳಿಗೆ ಅಲೆಯದೇ ತನ್ನ ಸ್ವಂತ ಬುದ್ದಿಯನ್ನು ಉಪಯೋಗಿಸಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಪರಿಹಾರವನ್ನು ಕಂಡುಕೊಂಡಿದ್ದಾರೆ. ತೆಂಗು ಬೆಳೆಗಳಿಂದಲೇ ಮನೆಯ ಖರ್ಚನ್ನು ಸರಿದೂಗಿಸುತ್ತಿದ್ದ ಕುಂಜ್ಞ ಮೂಲ್ಯರಿಗೆ ಕೆಲವು ತಿಂಗಳ ಹಿಂದ ವಾನರ ಸೈನ್ಯ ತೆಂಗಿನ ತೋಟಕ್ಕೆ ಲಗ್ಗೆ ಇಟ್ಟಿದ್ದವು. ಸಂಪತ್ಭರಿತವಾಗಿ ಬಂದಿದ್ದ ತೆಂಗಿನ ಬೆಳೆ ಎಲ್ಲವೂ ಮಂಗಗಳ ಪಾಲಾಯಿತು. ಮಂಗಗಳನ್ನು ಓಡಿಸುವ ಪ್ರಯತ್ನ ಮಾಡಿದ್ರೂ ಮಾರನೇ ದಿನ ಕೋತಿಗಳ ಉಪಟಳ ಮತ್ತಷ್ಟು ಜಾಸ್ತಿಯಾಯಿತು.
ಇದರಿಂದ ಕಂಗಾಲಾದ ಕುಂಜ್ಞಣ್ಣರು ಮಾಡಿದ್ದೇ ಸರಳ ತಂತ್ರ. ತೆಂಗಿನ ಮರಗಳ ಮಧ್ಯ ಭಾಗಕ್ಕೆ ಹೋಗಿ ತಗಡಿನ ಶೀಟ್ಗಳನ್ನು ಜೋಡಿಸಿದ್ರು. ಮರದ ಗರಿಗಳನ್ನು ಕತ್ತರಿಸಿ ಕೋತಿಗಳು ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರದಂತೆ ನೋಡಿಕೊಂಡ್ರು. ಈ ತಂತ್ರ ಅಳವಡಿಸದಾಗಿನಿಂತ ತೆಂಗಿನ ತೋಟಕ್ಕೆ ಮಂಗಗಳ ಹಾವಳಿ ತಪ್ಪಿದೆ. ಇದರ ಪರಿಣಾಮ ಸಂಪತ್ಭರಿತವಾದ ಬೆಳೆ ಹಾಗೇಯೇ ಉಳಿದುಕೊಂಡಿದೆ.
ತೆಂಗಿನ ಮರ ಉದ್ದವಾಗಿದ್ರೂ, ಗಿಡ್ಡವಾಗಿದ್ರೂ ಈ ತಂತ್ರವನ್ನು ಅಳವಡಿಸಬಹುದು. ತೆಂಗಿನ ಮರದ ಮಧ್ಯಭಾಗದಲ್ಲಿ ತಗಡಿನ ಶೀಟ್ ಕಟ್ಟಿದ್ರೆ ಮಂಗಗಳಿಗೆ ಮರ ಹತ್ತೋಕೆ ಸಾಧ್ಯ ಆಗಲ್ಲ. ಕೇವಲ ಮಂಗಗಳಿಗೆ ಮಾತ್ರವಲ್ಲ ಇಲಿಗಳಿಂದಲೂ ಬೆಳೆಯನ್ನು ರಕ್ಷಿಸಬಹುದು. ಒಟ್ಟಿನಲ್ಲಿ ಬೆಳೆಗೆ ಬೆಲೆ ಬಂದಿಲ್ಲ. ಪ್ರಾಣಿಗಳ ಉಪಟಳದಿಂದ ಬೆಳೆಯೇ ಇಲ್ಲ ಎಂದು ಕೊರಗುವ ರೈತರಿಗೆ ಪದ್ಮುಂಜ ಗ್ರಾಮದ ಕುಂಜ್ಞಣ್ಣ ಮೂಲ್ಯರು ಸರಳ ಮಾರ್ಗವನ್ನು ಸೂಚಿಸಿದ್ದಾರೆ. ತಾಲೂಕಿನ ಬಹುತೇಕ ರೈತರು ಇದೇ ತಂತ್ರವನ್ನು ಬಳಸುತ್ತಿದ್ದು, ಕೃಷಿಕರು ಯಶಸ್ಸನ್ನು ಕಂಡಿದ್ದಾರೆ.
ಸುದ್ದಿ ಕೃಪೆ : kannada.news18.com