ಮುಂಬಯಿ ಕುಲಾಲ ಸಂಘದಿಂದ 50 ಸಾವಿರ ರೂ. ನೆರವು
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ದ್ವಿತೀಯ ಪಿಯುಸಿಯಲ್ಲಿ 467 ಅಂಕ ಪಡೆದು ಸಾಧನೆಗೈದ ಬಂಟ್ವಾಳ ತಾಲೂಕು ಕೂರಿಯಾಳ ಗ್ರಾಮದ ದಿವ್ಯಾಂಗ ಬಾಲಕಿ ಭಾಗ್ಯಶ್ರೀಗೆ ಮುಂದಿನ ಪದವಿ ಶಿಕ್ಷಣ ಮುಂದುವರಿಸಲು ನೆರವಿನ ಭರವಸೆ ದೊರೆತಿದೆ. ಮನೆಯಲ್ಲೇ ಕುಳಿತು ಮುಂದಿನ ಶಿಕ್ಷಣ ಪಡೆಯಬೇಕೆಂದಿದ್ದ ಹುಡುಗಿ ಕಾಲೇಜು ಶಿಕ್ಷಣವನ್ನೇ ಪಡೆಯಲು ಸಿದ್ಧವಾಗುವಂತೆ ಮಾಡಿದೆ. ಫರಂಗೀಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಅವರು ಭಾಗ್ಯಶ್ರೀಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪದವಿ ಶಿಕ್ಷಣ ಪೂರೈಸುವಂತೆ ಮನವೊಲಿಸಿದ್ದಾರೆ. ಈ ನಡುವೆ ಮುಂಬಯಿ ಕುಲಾಲ ಸಂಘದ ಅದ್ಯಕ್ಷ ದೇವದಾಸ ಕುಲಾಲ್ ಮತ್ತು ಇತರ ದಾನಿಗಳು ಸೇರಿ ಆಕೆಗೆ 50 ಸಾವಿರ ರೂ. ನೆರವು ನೀಡಿದ್ದಾರೆ.
ಮೂರುವರ್ಷ ಪದವಿ ಶಿಕ್ಷಣಕ್ಕೆ ಬೇಕಾಗುವ ವ್ಯವಸ್ಥೆಯನ್ನು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಕಲ್ಪಿಸುವ ಭರವಸೆಯನ್ನು ನೀಡಿದ್ದಲ್ಲದೆ ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ಪ್ರಾಂಶುಪಾಲರೊಂದಿಗೂ ಕೆ.ಕೆ.ಪೂಂಜಾ ಅವರು ಮಾತುಕತೆಯನ್ನು ನಡೆಸಿದ್ದಾರೆ.
ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಪುತ್ರಿ ಭಾಗ್ಯಶ್ರೀ. ತಂದೆ ಕೇಶವ ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾದವರು. ಮನೆಯ ಪಕ್ಕದಲ್ಲಿ ಒಂದು ಗೂಡಂಗಡಿ ಇಟ್ಟುಕೊಂಡಿದ್ದರೆ,ಇವರ ಪತ್ನಿ ಬೀಡಿ ಕಟ್ಟುತ್ತಿದ್ದು ತನ್ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದಾರೆ.
ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಹಿರಿಯಾಕೆ ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ. ಎರಡನೆಯವಳು ಭಾಗ್ಯಶ್ರೀ ಹುಟ್ಟು ವಿಕಲಚೇತನೆ. ಸೊಂಟದಿಂದ ಕೆಳಭಾಗದಲ್ಲಿ ಪೂರ್ತಿ ನಿಶಕ್ತಿ ಹೊಂದಿರುವ ಈಕೆಗೆ ಅಮ್ಮನೇ ಆಸರೆ, ಅಮ್ಮನೇ ಈಕೆಯನ್ನು ಎತ್ತಿ ತನ್ನ ಸೊಂಟದಲ್ಲಿ ಕೂರಿಸಿ ಎತ್ತಿಕೊಂಡು ಹೋಗಿಯೇ ಅವಳನ್ನು ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಬರುತ್ತಿದ್ದರು. ಎಸ್.ಎಸ್.ಎಲ್.ಸಿಯಲ್ಲಿ 470 ಅಂಕಗಳನ್ನು ಪಡೆದು ಉತ್ತೀರ್ಣಳಾಗಿದ್ದಳು, ಪಿಯುಸಿಯಲ್ಲಿ 467 ಅಂಕ ಗಳಿಸಿ ಸಾಧನೆ ಗೈದಿದ್ದಾಳೆ.