ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ತುಳುಕೂಟ ಉಡುಪಿ ವತಿಯಿಂದ ನೀಡಲಾಗುವ 2019-20ನೇ ಸಾಲಿನ ಪ್ರತಿಷ್ಠಿತ ಯು ಎಸ್ ಪಣಿಯಾಡಿ ಸ್ಮಾರಕ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಮಂಜೇಶ್ವರ ಕನ್ನಡ, ತುಳು ಸಾಹಿತಿ ಕುಶಾಲಾಕ್ಷಿ. ವಿ. ಕುಲಾಲ್ ಕಣ್ವತೀರ್ಥ(ಕುವಿಕು ಕಣ್ವತೀರ್ಥ) ಅವರ ಕಡಲಮುತ್ತು ಕಾದಂಬರಿ ಆಯ್ಕೆಯಾಗಿದೆ.
ತುಳುಕೂಟ ಕಳೆದ ಇಪ್ಪತ್ತಾರು ವರ್ಷಗಳಿಂದ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ಕೃತಿ ಬಿಡುಗಡೆ ಸಮಾರಂಭ ನಡೆಸುತ್ತಿದೆ. ತುಳು ಕಾದಂಬರಿಗಳನ್ನು ಪ್ರಕಟಿಸುವ ಮೂಲಕ ತುಳು ಭಾಷೆ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದೆ. ಉಡುಪಿ ರಥಬೀದಿ ಗೆಳೆಯರು ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಹಾಗೂ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ, ಪತ್ರಕರ್ತ, ನಾಟಕಕಾರ ಪ್ರಕಾಶ್ ಸುವರ್ಣ ಕಟಪಾಡಿ ತೀರ್ಪುಗಾರರಾಗಿದ್ದರು. ಪ್ರಶಸ್ತಿಯು ನಗದು ಬಹುಮಾನವನ್ನು ಒಳಗೊಂಡಿದ್ದು, ಸಮಾರಂಭವನ್ನು ಶೀಘ್ರ ಘೋಷಿಸಲಾಗುವುದು ಎಂದು ತುಳುಕೂಟ ಅಧ್ಯಕ್ಷ ವಿ. ಜಿ ಶೆಟ್ಟಿ, ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಾದಂಬರಿ ಪ್ರಶಸ್ತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.