ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಈ ಬಾರಿ ಗಣೇಶನನ್ನೂ ಕೊರೋನಾ ಮಹಾಮಾರಿ ಬಿಡುತ್ತಿಲ್ಲ. ಈ ವರುಷ ಬೀದಿಬದಿಯಲ್ಲಿ ಗಣೇಶೋತ್ಸವದ ಸಂಭ್ರಮವಿಲ್ಲ. ದೊಡ್ಡ ಗಣೇಶ ಮೂರ್ತಿ ತಯಾರಿಯನ್ನೇ ನಂಬಿದ್ದ ಸಾವಿರಾರು ಕಲಾವಿದರು ಸಂಕಷ್ಟದಲ್ಲಿದ್ದಾರೆ. ದಶಕಗಳ ಇತಿಹಾಸವಿರುವ ಬೆಂಗಳೂರಿನ ಪೊಟರಿ ಟೌನ್ (ಕುಂಬಾರ ನಗರ) ನಲ್ಲಿ ವ್ಯಾಪಾರದ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ ವರುಷ ಇಷ್ಟೊತ್ತಿಗಾಗಲೇ ಭರ್ಜರಿ ವ್ಯಾಪಾರ ಆಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಕರಿನೆರಳು ವಿಘ್ನ ನಿವಾರಕ ಗಣೇಶನನ್ನು ಬಿಡುತ್ತಿಲ್ಲ.
ಕೊರೊನಾ ಕೇಸ್ ಮಾರ್ಚ್ ತಿಂಗಳಿನಿಂದ ಕಡಿಮೆಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಕೇಸ್ ಹೆಚ್ಚಾಗುತ್ತಲೇ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಕೇಸ್ ಎರಡು ಸಾವಿರ ಆಸುಪಾಸಿನಲ್ಲಿ ದಿನನಿತ್ಯ ದಾಖಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಗಣೇಶ ಹಬ್ಬ ಬರುತ್ತಿದೆ. ಮೊದಲೇ ಸಾರ್ವಜನಿಕ ಪ್ರತಿಷ್ಟಾಪನೆಗೆ ಹೆಚ್ಚು ಆದ್ಯತೆ ಇರುವ ಗಣೇಶ ಹಬ್ಬಕ್ಕೆ ಸರ್ಕಾರ ಸಾಕಷ್ಟು ಮಾರ್ಗಸೂಚಿಗಳನ್ನು ನೀಡಿದೆ. ಮನೆಯಲ್ಲಿ ಮಾತ್ರ ಆಚರಣೆ ಮಾಡಬಹುದು, ಸಾರ್ವಜನಿಕ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡಿಲ್ಲ.
ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಜನ ಗುಂಪು ಸೇರಲು ಅವಕಾಶ ಇಲ್ಲ. ಧಾರ್ಮಿಕ, ಸಾಂಪ್ರದಾಯಿಕ ಗುಂಪುಕೂಡಲು ಅವಕಾಶ ಇಲ್ಲ. ಮನೆಯಲ್ಲಿ ಮಾತ್ರ ಗಣೇಶ ಇಟ್ಟು ಪೂಜೆಮಾಡಬೇಕು. ಪರಿಸರ ಸ್ನೇಹಿ ಗಣೇಶ ಮಾತ್ರ ಇಡಬೇಕು. ಗಣಪತಿ ವಿಸರ್ಜನೆಗೆ ಯಾವುದೇ ಕೆರೆ ಕಲ್ಯಾಣಿಗಳಲ್ಲಿ ಅವಕಾಶ ಇಲ್ಲ. ಮನೆಗಳಲ್ಲೇ ವಿಸರ್ಜನೆ ಮಾಡಬೇಕು. ವಿಸರ್ಜನೆಗೆ ಬಿಬಿಎಂಪಿಯಿಂದ ಈ ವರ್ಷ ಯಾವುದೇ ವ್ಯವಸ್ಥೆ ಮಾಡಲ್ಲ. ಜನ ಗುಂಪು ಸೇರಲು ಈ ಬಾರಿ ಅವಕಾಶ ಇಲ್ಲ. ದೊಡ್ಡ ದೊಡ್ಡ ಗಣೇಶಗಳ ಮಾರಾಟಕ್ಕೂ ಅವಕಾಶ ಇಲ್ಲ. ಎಲ್ಲವೂ ಈ ಬಾರಿ ನಿಷೇಧ.
ಕಲ್ಯಾಣಿ, ಕೆರೆಗಳಲ್ಲಿ ವಿಸರ್ಜನೆಗೆ ಸಂಪೂರ್ಣ ಬ್ಯಾನ್. ಮೆರವಣಿಗೆ ಮಾಡುವಂತಿಲ್ಲ. ಕಾನೂನು ಉಲ್ಲಂಘನೆ ಮಾಡಿದ್ರೆ ಕಾನೂನು ರೀತಿ ಶಿಸ್ತು ಕ್ರಮ ಎಂದು ಬಿಬಿಎಂಪಿ ಸೂಚನೆ ನೀಡಿದೆ. ಬೀದಿ ಬದಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸರ್ಕಾರ ನಿಷೇಧಿಸಿರುವುದರಿಂದ ಇದನ್ನೇ ನಂಬಿರುವವರು ಬೀದಿಗೆ ಬೀಳುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ವ್ಯಾಪಾರ ವಹಿವಾಟಿಲ್ಲದೆ ಕಂಗಾಲಾಗಿರುವ ವ್ಯಾಪಾರಿಗಳಿಗೆ ಗಣೇಶ ಮೂರ್ತಿ ಮಾರಾಟ ಮಾಡಿ ಒಂದಷ್ಟು ಜೀವನ ಸುಧಾರಿಸುವ ಯೋಚನೆಯಲ್ಲಿದ್ದರು. ಆದರೀಗ ಅದಕ್ಕೂ ಅಡ್ಡಿಯುಂಟಾಗಿದೆ.
ಬೆಂಗಳೂರಿನಲ್ಲಿಯೇ 500ಕ್ಕೂ ಹೆಚ್ಚು ಕಲಾವಿದರ ಕುಂಬಾರ ಕುಟುಂಬಗಳಿವೆ. ಮೂರು ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚಿಕ್ಕ ಮಣ್ಣಿನ ಗಣಪನ ರೆಡಿ ಮಾಡಿದ್ರೂ ಇಲ್ಲಿಯವರೆಗೆ ಕೇಳೋರಿಲ್ಲದ ಪರಿಸ್ಥಿತಿಯಿದೆ. ಗಣೇಶನ ಮೂರ್ತಿ ಮಾರಾಟ ಮಾಡುತ್ತಿದ್ದವರಿಗೆ ದೊಡ್ಡ ಸಂಕಷ್ಟ ಶುರುವಾಗಿದೆ. ಪ್ರತಿ ವರುಷ ಮೂರು ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿ ಬೇರೆ ರಾಜ್ಯಗಳಿಗೆ ಮಾರಾಟವಾಗುತ್ತಿತ್ತು. ಆದರೆ ಈ ವರುಷ ಬೇರೆ ರಾಜ್ಯಗಳಿಂದ ಬೇಡಿಕೆಯೇ ಇಲ್ಲ. ಶೇ.80ರಷ್ಟು ಮನೆ ಮಣ್ಣಿನ ಗಣೇಶ ಮೂರ್ತಿ ಖರೀದಿಸಲು ಮಾರಾಟಗಾರರ ಹಿಂದೇಟು ಹಾಕುತ್ತಿದ್ದಾರೆ. ಕೊರೋನಾದಿಂದ ಇನ್ನೇನಾಗುತ್ತೋ ಎಂಬ ಭಯಬೆಂಗಳೂರಿನ ಮಾರಾಟಗಾರರಿಗೆ ಕಾಡುತ್ತಿದೆ.
ಗಣೇಶ ಹಬ್ಬಕ್ಕೆ 15 ದಿನಗಳು ಮಾತ್ರ ಬಾಕಿ ಇದ್ದು, ದೊಡ್ಡ ಗಣೇಶ ಕೂರಿಸುವುದು ನಿಷೇಧ ಹಿನ್ನೆಲೆ ವ್ಯಾಪಾರಗಾರರಿಗೆ ಇನ್ನಿಲ್ಲದ ತೊಂದರೆಯಾಗಿದೆ. ಈಗಾಗಲೇ ನಿರ್ಮಿಸಿದ ದೊಡ್ಡ ಗಣೇಶ ಮೂರ್ತಿಯಿಂದ ಅತಿ ದೊಡ್ಡ ನಷ್ಟವಾಗಿದೆ. ಕಳೆದ ವರುಷ ಇಷ್ಟೊತ್ತಿಗಾಗಲೇ ಶೇ.60 ವ್ಯಾಪಾರ, ಇನ್ನಷ್ಟು ಬೇಡಿಕೆ ಬರುತ್ತಿತ್ತು. ಈ ವರುಷ ಬೇಡಿಕೆಯೂ ಇಲ್ಲ, ತಯಾರಿಸಿದ ಪುಟ್ಟ ಗಣೇಶ ಖರೀದಿಸಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಇಂಥ ಸಂದರ್ಭದಲ್ಲಿ ಒಂದು ದಿನದ ಮಟ್ಟಿಗಾದರೂ ದೊಡ್ಡ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಅವಕಾಶ ನೀಡಿದರೆ ಈಗಾಗಲೇ ತಯಾರಿಸಿರುವ ದೊಡ್ಡ ಮೂರ್ತಿ ಗಣೇಶ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಕುಂಬಾರ ಸಂಘದ ಮೂರ್ತಿ ತಯಾರಕರಾದ ಕಮಲ್ ಮನವಿ ಮಾಡಿಕೊಳ್ಳುತ್ತಾರೆ.
ಒಟ್ಟಾರೆ ಈ ಬಾರಿ ಗಣೇಶ ಹಬ್ಬ ಸಂಭ್ರಮದಿಂದ ದೂರವಾದ ನೋವು ಒಂದೆಡೆಯಾದರೆ ಹಬ್ಬದಲ್ಲಿ ಖರೀದಿಯಾಗುತ್ತಿದ್ದ ಗಣೇಶ ಮೂರ್ತಿಗಳನ್ನೇ ಆಶ್ರಯಿಸಿದ ಕಲಾವಿದರು ಪಾಡು ಹೇಳ ತೀರದಾಗಿದೆ.