ಮೂಲ್ಕಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಶೇಂದಿ ತೆಗೆಯಲೆಂದು ತಾಳೆಮರವೇರಿ ಬಳಿಕ ಮೂರ್ಛೆ ತಪ್ಪಿ ಎರಡು ಗಂಟೆ ಕಾಲ ಮರದಲ್ಲೇ ಬಾಕಿಯಾಗಿದ್ದ ವ್ಯಕ್ತಿಯನ್ನು ಸಕಾಲಿಕ ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಐಕಳ ಗ್ರಾಪಂ ಮಾಜಿ ಸದಸ್ಯ ಸುಧಾಕರ ಸಾಲ್ಯಾನ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸನ್ಮಾನಿಸಿದರು.
ಕೆಪಿಸಿಸಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಶಿವಕುಮಾರ್ ಅವರು ಸುಧಾಕರ ಸಾಲ್ಯಾನ್ ರನ್ನು ಗೌರವಿಸಿ ಸಮಯಪ್ರಜ್ಞೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸುಮಾರು 20 ವರ್ಷಗಳಿಂದ ಶೇಂದಿ ವ್ಯಾಪಾರ ಮಾಡುತಿದ್ದ ಕಡಂದಲೆ ಕಲ್ಲೋಳಿಯ ಸಂತೋಷ್ ಎಂಬವರು ಜು.16ರಂದು ಎಂದಿನಂತೆ ಬೆಳಗ್ಗೆ 6:30ರ ಸುಮಾರಿಗೆ ತಾಳೆ ಮರವೇರಿದವರು ರಕ್ತದೊತ್ತಡ ಸಮಸ್ಯೆಯಿಂದ ಅಲ್ಲೇ ಮೂರ್ಛೆ ತಪ್ಪಿದ್ದಾರೆ. ಪರಿಣಾಮ 8:30ರವರೆಗೆ ತಾಳೆಮರದ ದಂಡುಗಳ ನಡುವೆ ಸಿಲುಕಿಕೊಂಡಿದ್ದರು. ಮರದ ಪಕ್ಕದಲ್ಲೇ ದಾರಿಯಲ್ಲಿ ಹೋಗುವವರು ಇದನ್ನು ಗಮನಿಸಿದರೂ ರಕ್ಷಿಸುವ ಸಾಹಸಕ್ಕೆ ಮುಂದಾಗಿರಲಿಲ್ಲ. ಈ ವೇಳೆ ಆ ದಾರಿಯಾಗಿ ಬಂದ ಸುಧಾಕರ್ ಸಾಲ್ಯಾನ್ ಅಗ್ನಿಶಾಮಕದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಸಂತೋಷ್ರನ್ನು ರಕ್ಷಿಸಿ ಕೆಳಗಿಳಿಸಿದ್ದಾರೆ. ಬಳಿಕ ಸಂತೋಷ್ರನ್ನು ಸುಧಾಕರ ಸಾಲ್ಯಾನ್ ತನ್ನ ಮಿತ್ರರಾದ ಅಶೋಕ, ನಾರಾಯಣ, ದಿನೇಶರ ನೆರವಿನಿಂದ ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ದಾರಿಮಧ್ಯೆ ಸಂತೋಷ್ರಿಗೆ ಪ್ರಜ್ಞೆ ಬಂದಿದ್ದರಿಂದ ಉಪಚರಿಸಿ ಮನೆಗೆ ಕರೆದೊಯ್ದು ಬಿಟ್ಟಿದ್ದರು.