ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಪ್ರಸಿದ್ದ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಸ್ಮರಣಾರ್ಥ ಅಬಚೂರಿನ ಮಿತೃವೃಂದ( ತೇಜಸ್ವಿ ಅಭಿಮಾನಿಗಳ ಬಳಗ) ಹಾಸನ ಇದರ ವತಿಯಿಂದ ನೆಡೆದ ಅಖಿಲ ಭಾರತ ಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಯುವ ಕಥೆಗಾರ ಮಂಜುನಾಥ ಹಿಲಿಯಾಣ ಅವರ ರಚನೆಯ “ರುದ್ರಿ” ಕಥೆ ಅತ್ಯುತ್ತಮ ಕಥೆಯಾಗಿ ಬಹುಮಾನಕ್ಕೆ ಆಯ್ಕೆಯಾಗಿದೆ.
ಬೆಂಗಳೂರು, ಮುಂಬೈ ಸೇರಿದಂತೆ ವಿಶ್ವದ ಮೂಲೆ ಮೂಲೆಯ ಹಿರಿ-ಕಿರಿಯ ಕನ್ನಡ ಕಥೆಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಯಶಸ್ವಿನಿ ಕದ್ರಿ ತಲಪಾಡಿ ಅವರು ಬರೆದಿರುವ “ಒಂದು ಶಿಕಾರಿಯ ಕಥೆ”, ಭದ್ರಪ್ಪ ಶಿ ಹೆನ್ಲಿ ಸಕಲೇಶಪುರ ಅವರು ಬರೆದ ” ಮಿಣಿ ಹರಿದ ಸುಗ್ಗಿ” ಮತ್ತು ಮಂಜುನಾಥ ಹಿಲಿಯಾಣ ಅವರು ಬರೆದ “ರುದ್ರಿ” ಕಥೆ ಬಹುಮಾನಕ್ಕೆ ಆಯ್ಕೆಯಾದವು. ಈ ಮೂವರು ಕಥೆಗಾರರಿಗೆ ಹತ್ತು ಸಾವಿರ ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ. ಸ್ಪರ್ಧೆಗೆ ಆಗಮಿಸಿದ ಕಥೆಗಳಲ್ಲಿ ಅತ್ಯುತ್ತಮ ಎನಿಸಿದ ಹದಿನೈದು ಕಥೆಗಳನ್ನು ಆಯ್ಕೆಮಾಡಿ “ಬುಕ್ ಪೋಸ್ಟ್” ಎಂಬ ಹೆಸರಿನ ಕಥಾ ಸಂಕಲನ ಪ್ರಕಟಿಸಲಾಗುವುದು. ಮಂಜುನಾಥ ಹಿಲಿಯಾಣ ಬರೆದಿರುವ “ರುದ್ರಿ” ಕಥೆ ಕುಂದಾಪುರದ ಬಡ ಹೆಣ್ಣಿನ ಜೀವನದ ಸುತ್ತ ಹೆಣೆದಿರುವ ಕಥೆಯಾಗಿದ್ದು ಕುಂದಾಪುರ ಕನ್ನಡದ ಭಾಷ ಲಾಲಿತ್ಯವನ್ನು ಹೊಂದಿದೆ.