ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಇಲ್ಲಿನ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಸದಸ್ಯರ ನಿರಂತರ ಶ್ರಮದಾನದ ಮೂಲಕ ನಿರ್ಮಾಣಗೊಂಡ ಸಜೀಪಮೂಡ ಗ್ರಾಮದ ಕಂದೂರಿನ ಬಡಮಹಿಳೆ ಕಮಲ ಅವರ ಮನೆಯ ಗೃಹಪ್ರವೇಶ ಕಳೆದ ಭಾನುವಾರ ನಡೆಯಿತು.
ಸಜೀಪಮೂಡ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ ಕುಂಭ ಕುಟೀರ ಶಿಲಾಫಲಕ ಅನಾರಣಗೊಳಿಸುವ ಮೂಲಕ ನೂತನವಾಗಿ ನಿರ್ಮಾಣಗೊಂಡ ಮನೆಯನ್ನು ಉದ್ಘಾಟಿಸಿದರು. ಸತ್ಯನಾರಾಯಣ ಪೂಜೆ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೃಹಪ್ರವೇಶ ಸಮಾರಂಭ ನಡೆಯಿತು. ಬಳಿಕ ಮನೆಯ ಕೀಲಿ ಕೈ ನೀಡುವ ಮೂಲಕ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಮನೆಯನ್ನು ಕಮಲಾ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.
ಕಂದೂರಿನಲ್ಲಿ ಸ್ವಂತ ಜಮೀನು ಹಾಗೂ ಮನೆ ಇದ್ದರೂ ಕೂಡ ಕಮಲ ಅವರು ಕಾರಣಾಂತರಗಳಿಂದ ಮಣಿನಾಲ್ಕೂರು ಗ್ರಾಮದ ಕುಂಟಾಲಪಲ್ಕೆಯಲ್ಲಿ ಬಾಡಿಗೆ ಮನೆಯಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಯುವಕರು ಕುಲಾಲ ಕುಂಬಾರ ಯುವ ವೇದಿಕೆಯ ಗಮನಕ್ಕೆ ತಂದಾಗ ಮನೆಮಂದಿಯನ್ನು ಸಂಪರ್ಕಿಸಿ ಅವರ ಒಪ್ಪಿಗೆ ಪಡೆದು ಕಂದೂರಿನ ಮನೆಯ ಪುನರ್ ನಿರ್ಮಾಣ ಕಾರ್ಯವನ್ನು ಆರಂಭಿಸಲಾಯಿತು.
ಕೊರೋನಾ ಲಾಕ್ಡೌನ್ನ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಂಡ ಯುವ ವೇದಿಕೆಯ ಸದಸ್ಯರು ದಾನಿಗಳ ನೆರವಿನೊಂದಿಗೆ ಎಂಟು ದಿನಗಳ ಕಾಲ ಶ್ರಮದಾನ ನಡೆಸಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಈ ಮೂಲಕ ಬಡ ಕುಟುಂಬಕ್ಕೆ ಯುವವೇದಿಕೆ ಆಸರೆಯಾಗಿದೆ.
ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಸಂತೃಪ್ತಭಾವ ಯುವ ವೇದಿಕೆಯ ಸದಸ್ಯರಲ್ಲಿದ್ದರೆ ಇನ್ನಾದಾರೂ ನಮ್ಮ ಸ್ವಂತಮನೆಯಲ್ಲಿ ನೆಮ್ಮದಿಯಲ್ಲಿ ಬಾಳಬಹುದೆನ್ನುವ ಕನಸು ಸಾಕಾರಗೊಂಡ ಸಂಭ್ರಮ ಕಮಲ ಅವರಲ್ಲಿ ಗೃಹಪ್ರವೇಶದ ದಿನ ಕಂಡು ಬಂತು.