ಕಿನ್ನಿಗೋಳಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಅಪರೂಪದ ಸಾಮಾಜಿಕ ಸೇವೆ ಮತ್ತು ಸಂಘಟನಾಚಾತುರ್ಯದಿಂದ ಹೆಸರು ಪಡೆದಿರುವ ಹೇಮಂತ್ ಕುಮಾರ್ ಕಿನ್ನಿಗೋಳಿ ಅವರು ಭಾರತೀಯ ಜನತಾ ಪಾರ್ಟಿ ಮೂಲ್ಕಿ ಮೂಡಬಿದರೆ ಮಂಡಲಕ್ಕೊಳಪಟ್ಟ ತಾಳಿಪಾಡಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಹೇಮಂತ್ ಕುಮಾರ್ ವ್ಯಕ್ತಿತ್ವದ ಬಗ್ಗೆ ಅವರ ಸ್ನೇಹಿತ ಮಂಜುನಾಥ ಹಿಲಿಯಾಣ ಅವರು ಬೆಳಕನ್ನು ಚೆಲ್ಲಿ ಬರೆದಿರುವ ಬರಹ..
ಆಪತ್ಕಾಲದ ಗೆಳೆಯ ಹೇಮಂತ ಕುಲಾಲ್ ಕಿನ್ನಿಗೋಳಿ :
‘ಜೀವನದಲ್ಲಿ ಈ ಸಮಾಜ ನಿನಗೇನು ನೀಡಿದೆ ಅನ್ನುವುದಕ್ಕಿಂತ ನೀನು ಈ ಸಮಾಜಕ್ಕೆ ಏನು ಕೊಡುಗೆ ನೀಡಿದೆ ಅನ್ನುವುದೇ ಬಹುಮುಖ್ಯ ಅನ್ನುವ ಚಿಂತಕರೊಬ್ಬರ ಮಾತಿನ ಹಾಗೇ.. ಇರುವುದೊಂದೆ ಬದುಕು ಇನ್ನೊಬ್ಬರಿಗೆ ಮಾದರಿಯಾಗಿ ಬದುಕು ಎಂಬ ವಿವೇಕವಾಣಿಯ ಹಾಗೇ ತನ್ನ ಅಪರೂಪದ ಸಾಮಾಜಿಕ ಸೇವೆ ಮತ್ತು ಸಂಘಟನಾಚಾತುರ್ಯದಿಂದ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಹಲವು ಬಡ ಕುಟುಂಬಳಿಗೆ ನೆರವಿನ ಸಹಾಯಹಸ್ತ ಚಾಚುತ್ತ, ಅವರ ಕಣ್ಣೀರಿಗೆ ಸಾಂತ್ವನದ ಬರವಸೆಯನ್ನು ನೀಡುತ್ತಾ ಬೆಳೆದಿರುವ ಯುವಕ ಹೇಮಂತ ಕುಲಾಲ್ ನಿಜವಾದ ಅರ್ಥದಲ್ಲಿ ಬಡ ರೋಗಿಗಳ ಅಪತ್ಕಾಲದ ಗೆಳೆಯ. ಈಗಾಗಲೇ ಸರಿಸುಮಾರು ನೂರಕ್ಕೂ ಅಧಿಕ ಬಡ ಕುಟುಂಬಗಳಿಗೆ ಹಲವು ಸಂಘ ಸಂಸ್ಥೆಗಳ ಮೂಲಕ ನೆರವಿನ ಸಹಾಯಹಸ್ತ ಚಾಚುವಲ್ಲಿ ತನ್ನದೇ ವಿಶಿಷ್ಟ ಸೇವೆಗೈದಿರುವ ಒರ್ವ ಅಪರೂಪದ ಸಮಾಜಮುಖಿ ಕಾಯಕ ಇವರದ್ದು. ಯಾರಾದರೂ ತೀರಾ ಅಶಕ್ತ ಕುಟುಂಬ ಚಿಕಿತ್ಸೆಗೆ ಹಣವಿಲ್ಲದೇ ಒದ್ದಾಡುತ್ತಿದ್ದರೆ ಅಲ್ಲಿಗೆ ಧಾವಿಸುವ ಹೇಮಂತ್ ನೆರವಿನ ಭರವಸೆ ನೀಡುತ್ತಾರೆ. ಆಸರೆ ಗೆಳೆಯರ ಬಳಗ, ಕುಲಾಲ ವರ್ಲ್ಡ್, ಕುಲಾಲ ಜವನೆರ್ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಇವರು ಅಲ್ಲಿ ವಿಷಯ ಪ್ರಸ್ತಾಪಿಸಿ ದಾನಿಗಳಿಂದ ನೆರವಿನ ಹಸ್ತವನ್ನು ಕೋರಿ ಸರ್ವರ ಸಹಕಾರದಿಂದ ಸಹಾಯಧನವನ್ನು ಒಟ್ಟುಗೂಡಿಸಿ ಬಡಕುಟುಂಬಕ್ಕೆ ನೀಡಿ ಅವರ ಕಣ್ಣೀರನ್ನು ಒರೆಸುವ ಅಪರೂಪದ ಕೆಲಸವನ್ನು ಜತನದಿಂದ ಮಾಡುತ್ತಾರೆ. ಇದೊಂದು ಶ್ರೇಷ್ಠ ಸಮಾಜಮುಖಿ ಕೆಲಸ ಅನ್ನುವುದರಲ್ಲಿ ಎರಡು ಮಾತಿಲ್ಲ. ಇದಲ್ಲದೆ ಕುಲಾಲ ಚಾವಡಿ. ಪುಣ್ಯಭೂಮಿ ಸೇವಾ ಪೌಂಡೇಶನ್ ನಂತಹ ಹತ್ತಾರು ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ.
ಹೇಮಂತ ಕುಮಾರ್ ಕಿನ್ನಿಗೋಳಿ ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ತಾಳಿಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿಯವರು. ವಾಸು ಬಂಗೇರ ಮತ್ತು ಜಲಜ ದಂಪತಿಗಳ ಒಬ್ಬನೇ ಮಗ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಶಿಕ್ಷಣ ಮುಗಿಸಿ ಪ್ರತಿಷ್ಠಿತ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಡತನದ ಕುಟುಂಬದಲ್ಲಿ ಹುಟ್ಟಿ ಕಷ್ಟಕಾರ್ಪಣ್ಯವನ್ನು ಎದುರಿಸಿ ಬೆಳೆದು ನಿಂತ ಸಹೃದಯಿ ವ್ಯಕ್ತಿತ್ವದ ಇವರದ್ದು.
ಚಿಕ್ಕ ಪ್ರಾಯದಿಂದಲೂ ಇವರಿಗೆ ಸಮಾಜಮುಖಿ ಕೆಲಸಗಳಲ್ಲಿ ತೀವ್ರ ಆಸಕ್ತಿ. ಅದೇ ಮುಂದೆ ಬೆಳೆದು ಕುಲಾಲ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿರುವಂತೆ ಮಾಡಿತು. ಉದ್ಯೋಗ ನಿಮಿತ್ತ ಗಲ್ಫ್ ಗೆ ತೆರಳಿದ ಇವರಿಗೆ ಅಲ್ಲಿ ಬೆಹರೈನ್ ಕುಲಾಲ ಸಂಘದ ಮೂಲಕ ಸಾಮಾಜಿಕ ಸೇವೆಯ ತುಡಿತ ಹತ್ತಿತು. ಅಲ್ಲಿಂದ ಊರಿಗೆ ಮರಳಿದ ಮೇಲೂ ದಿನೇಶ್ ಬಂಗೇರ ಇರ್ವತ್ತೂರು ಸಾರಥ್ಯದ ಕುಲಾಲ್ ವರ್ಲ್ಡ್ ಸದಸ್ಯರಾಗಿ ಹಲವು ಬಡ ಕುಲಾಲ ಕುಟುಂಬಗಳ ವಿವರವನ್ನು ಸಮಾಜದ ಮುಖವಾಣಿ ವೆಬ್ ಸೈಟ್ ಮೂಲಕ ಪ್ರಕಟಿಸುತ್ತಾ, ಸಾಧ್ಯವಾದಷ್ಟು ನೆರವಿನ ಹಸ್ತ ಚಾಚುವಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ.
ಆರಂಭದಲ್ಲಿ ಹಲವು ಸಂಘ ಸಂಸ್ತೆಗಳ ಮೂಲಕ ಬಡ ಕುಲಾಲ ಕುಟುಂಬಗಳಿಗೆ ನೆರವಿನ ಹಸ್ತ ಚಾಚುತಿದ್ದ ಇವರ ಕೈಗಳು ಇಂದು ಸಮಾಜದ ಎಲ್ಲ ವರ್ಗದ ಜನರ ನೋವುಗಳಿಗೆ ಸಾಂತ್ವನ ನೀಡುವಷ್ಟು ವಿಸ್ತರಿಸಿದೆ. ಇವರೇ ಕಟ್ಟಿ ಬೆಳೆಸಿರುವ ‘ಆಸರೆ ಗೆಳೆಯರ ಬಳಗ, ಸದಸ್ಯರಾಗಿರುವ ತುಳುನಾಡ ಸೇವಾ ಪೌಂಡೇಶನ್, ಸಂಜೀವಿನಿ ಜಾಗರಣ, ಕುಲಾಲ ಚಾವಡಿ, ಸೇವಾ ಸಂಸ್ಥೆಗಳ ಮಹಾಸಂಗಮ ಬಳಗದಂತಹ ಹಲವು ವೇದಿಕೆಗಳ ಮೂಲಕ ಬಡವರ್ಗದ ಜನರ ಕಣ್ಣೀರನ್ನು ಒರೆಸುವ ಕಾಯಕವನ್ನು ಅತ್ಯಂತ ಜತನದಿಂದ ಮಾಡಿಕೊಂಡು ಬರುತಿದ್ದಾರೆ.
ಕುಟುಂಬಕ್ಕೇ ಒಬ್ಬನೇ ಮಗನಾಗಿರುವ ಇವರೇ ಸಂಸಾರಕ್ಕೆ ಆಧಾರ. ಆರೋಗ್ಯ ಸಮಸ್ಯೆಯಲ್ಲಿರುವ ತಂದೆ ತಾಯಿ ಸಂಸಾರದ ನೂರು ಸಮಸ್ಯೆಗಳ ಮಧ್ಯೆಯೂ ಸಮಾಜದ ನೊಂದವರ ಬಾಳಿಗೆ ಬೆಳಕಾಗುವ ಇವರ ಕೆಲಸ ನಿಜವಾಗಲೂ ಶ್ರೇಷ್ಠವಾದದ್ದು. ತನ್ನೊಬ್ಬನಿಂದ ಯಾರಿಗೂ ಸಹಾಯವಾಗಿಲ್ಲ, ನಾನು ಜೊತೆಗೂಡಿರುವ ಸಂಘ ಸಂಸ್ಥೆಗಳ ನೆರವಿನಲ್ಲಿ ನನ್ನದೂ ಒಂದು ಚಿಕ್ಕ ಪಾತ್ರವಷ್ಟೇ ಎಂದು ಹೇಳುವ ವಿನೀತ ಭಾವ ಹೇಮಂತ್ ಅವರದ್ದು.
ಕುಲಾಲ ಜವನೆರ್ ತೋಕೂರು, ಕುಲಾಲ ಸಂಘ ತೋಕೂರು ಸೇರಿದಂತೆ ಹಲವು ಸಮುದಾಯ ಸಂಘಟನೆಗಳಲ್ಲೂ ಸಕ್ರೀಯರಾಗಿರುವ ಇವರು ಆ ಮೂಲಕವೂ ಸಮುದಾಯ ಕೆಲಸದಲ್ಲಿ ಸಕ್ರೀಯರಾಗಿದ್ದಾರೆ. ಸಮಾಜಮುಖಿ ಚಿಂತನೆಯುಳ್ಳವರು ಹೇಗೆ ಸಮಾಜಸೇವೆ ಮಾಡುಬಹುದು ಎಂಬುದಕ್ಕೆ ಹೇಮಂತ ಕುಮಾರ್ ನಮಗೆ ಉದಾಹರಣೆ. ನೊಂದವರ ಕಣ್ಣೀರನ್ನು ಒರೆಸುವ ಅವರ ಸಮಾಜಮುಖಿ ಕಾಯಕಕ್ಕೇ ನಮ್ಮದೊಂದು ಬೆಂಬಲ ಸದಾ ಇರಲಿ. ಮನದುಂಬಿ ಅವರಿಗೆ ಶುಭ ಹಾರೈಸೋಣ ಅಲ್ಲವೇ?