ಮೈಸೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ತೀರಿಹೋದವರಿಗೆ ಮೋಕ್ಷ ಕೊಡಿಸಲು ಗಂಡಸರು ಅಂತ್ಯ ಸಂಸ್ಕಾರವನ್ನು ಮಾಡಬೇಕು ಎಂಬುವುದು ಭಾರತೀಯರ ನಂಬಿಕೆ. ಈ ಕಾರಣದಿಂದಲೂ ಗಂಡು ಮಕ್ಕಳು ಬೇಕು ಎಂದು ಹೆಚ್ಚಿನವರು ಬಯಸುತ್ತಾರೆ. ಈ ಎಲ್ಲ ಸಾಂಪ್ರಾದಾಯಿಕ ಪದ್ಧತಿಗೆ ತಿಲಾಂಜಲಿ ಹಾಡಿ ಅಮ್ಮನ ಸಂಸ್ಕಾರವನ್ನು ಮಗಳೇ ನಡೆಸಿದ ಅಪರೂಪದ ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಮೃತಪಟ್ಟ ತನ್ನ ಪ್ರೀತಿಯ ಅಮ್ಮನ ಅಂತ್ಯ ಸಂಸ್ಕಾರದ ಎಲ್ಲಾ ವಿಧಿ ವಿಧಾನದ ಪ್ರಕ್ರಿಯೆಯನ್ನು ಗಂಡು ಮಕ್ಕಳಂತೆ ಮಗಳು ಮುಂದೆ ನಿಂತು ನಿರ್ವಹಿಸಿದ್ದಾಳೆ. ಕುಂಬಾರ ಸಮುದಾಯದ ಮುಖಂಡರೂ, ಸಮಾಜಸೇವಕರೂ ಆಗಿರುವ ಮೈಸೂರಿನ ಡಾ. ಎಂ.ಪಿ ವರ್ಷ ಅವರ ಪತ್ನಿ ವನಜಾಕ್ಷಿ (40) ಅವರು ಅನಾರೋಗ್ಯದಿಂದ ನಿಧನರಾಗಿದ್ದರು.
ಮುಂದೆ ನಡೆದ ಎಲ್ಲಾ ವಿಧಿ ವಿಧಾನವನ್ನು ಅವರ ಮಗಳು ರಚನಾ ನೆರವೇರಿಸಿದ್ದಲ್ಲದೆ, ಚಾಮುಂಡಿಬೆಟ್ಟದ ತಳದಲ್ಲಿರುವ ಹರಿಶ್ಚಂದ್ರಘಾಟ್ ನಲ್ಲಿ ನಡೆದ ಅಂತಿಮ ವಿಧಿಯಲ್ಲಿ ತಾಯಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದಕ್ಕೆ ಕುಟುಂಬದ ಹಿರಿಯರು ಹಾಗೂ ಖುದ್ದು ತಂದೆ ಬೆಂಬಲ ಹಾಗೂ ಮಾರ್ಗದರ್ಶನ ನೀಡಿ ಸಹಕರಿಸಿದರು. ರಚನಾ ಅವರು ಎಂಜಿನಿಯರಿಂಗ್ ವಿದ್ಯಾಭ್ಯಾಸ ನಡೆಸುತ್ತಿದ್ದು, ಮೈಸೂರಿನಲ್ಲಿ ಖ್ಯಾತಿ ಪಡೆದಿರುವ ಮಹಿಳಾ ಡ್ರಮ್ಮರ್ ಕೂಡಾ ಆಗಿದ್ದಾರೆ.
“ಪತ್ನಿ ವನಜಾಕ್ಷಿಯ ನುಡಿದಂತೆ ನಡೆಯಬೇಕೆಂಬ ಆಶಯ ಹಾಗೂ ಹೆಣ್ಣು ಮಕ್ಕಳಿಗಿರುವ ಕಟ್ಟುಪಾಡುಗಳಿಂದ ನನ್ನ ಮಗಳನ್ನಾದರೂ ಹೊರತರಬೇಕೆನ್ನುವ ಬಯಕೆಯಂತೆ ಮಗಳು ರಚನಾಳಿಂದ ನನ್ನ ಪತ್ನಿಯ ಅಂತ್ಯಸಂಸ್ಕಾರದ ಎಲ್ಲಾ ಕ್ರಿಯೆಗಳನ್ನು ನೆರವೇರಿಸಿದೆ. ಕ್ರಾಂತಿ ಮಾಡುವ ಭ್ರಮೆ ನನ್ನಲ್ಲಿಲ್ಲ. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಎಲ್ಲರಿಗೂ ಹೃದಯಪೂರ್ವಕ ನಮನಗಳು” ಎಂದು ಡಾ. ಎಂ.ಪಿ ವರ್ಷ ಹೇಳಿದ್ದಾರೆ.