ಹಾರ್ಟ್ ಪೇಶೆಂಟ್ ಅಪ್ಪ – ಮಾನಸಿಕ ಅಸ್ವಸ್ಥ ಅಮ್ಮ
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಒಂದು ಕಡೆ ಕಿತ್ತುತಿನ್ನುತ್ತಿರುವ ಬಡತನ, ಮತ್ತೊಂದೆಡೆ ಹಿಂಡುತ್ತಿರುವ ಅಪ್ಪನ ಹೃದಯ ಬೇನೆ, ಮಗದೊಂದೆಡೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಅಮ್ಮ, ಈ ನಡುವೆ ಆಶಾಕಿರಣವಾಗಿದ್ದ ತಮ್ಮನೊಬ್ಬ ಬೈಕ್ ಅಪಘಾತವಾಗಿ ಮುಖ, ತಲೆ, ಕೈಕಾಲಿಗೆ ಏಟು ತಗುಲಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ತುರ್ತಾಗಿ ಆಗಬೇಕಿರುವ ಸಹೋದರನ ಶಸ್ತ್ರಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿರುವ ಯುವತಿ, ದಾನಿಗಳಲ್ಲಿ ದೇಹೀ ಎಂದು ಅಂಗಲಾಚುತ್ತಿದ್ದಾಳೆ. ಇದು ಸುರತ್ಕಲ್ ಹೊಸಬೆಟ್ಟು ನಿವಾಸಿ, ಇಪ್ಪತ್ತರ ಹರೆಯದ ನಿಶಾ ಮೂಲ್ಯ ಅವರ ಕುಟುಂಬದ ಸದ್ಯದ ದಯನೀಯ ಸ್ಥಿತಿ.
ಹೊಸಬೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ರಾಮಚಂದ್ರ ಮೂಲ್ಯ ಅವರು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದಾರೆ. ಇವರ ಪತ್ನಿ ಸಂಪ ಹಲವು ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ನರಳುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಹಿರಿಯಾಕೆ ನಿಶಾ. ತನ್ನ ಅನಾರೋಗ್ಯದ ಮಧ್ಯೆಯೂ ಸೆಕ್ಯೂರಿಟಿ ಗಾರ್ಡ್ ಆಗಿ ದುಡಿಯುತ್ತಿರುವ ಅಪ್ಪನ ದಯನೀಯ ಸ್ಥಿತಿ ನೋಡಲಾಗದೇ ಪದವಿ ಶಿಕ್ಷಣ ಮೊಟಕುಗೊಳಿಸಿ, ಪಿಜ್ಜಾ ತಯಾರಿಕಾ ಸಂಸ್ಥೆಯಲ್ಲಿ ದುಡಿಯುತ್ತಾ, ತಮ್ಮ ಗಂಗಾಧರ್ (18ವರ್ಷ) ನನ್ನು ಓದಿಸುತ್ತಿದ್ದಳು. ಆತ ಈಗಷ್ಟೇ ಪಿಯುಸಿ ಮುಗಿಸಿದ್ದ. ಈ ನಡುವೆ ಮನೆಯ ಆರ್ಥಿಕ ಸಮಸ್ಯೆ ಕೊಂಚ ಸುಧಾರಿತು ಅನ್ನಿಸಿಕೊಳ್ಳುವಷ್ಟರಲ್ಲಿ ಬರಸಿಡಿಸಲಿನಂತೆ ಆಘಾತವೊಂದು ಬಂದೆರಗಿದೆ.
ತನ್ನ ಸ್ನೇಹಿತನ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ಗಂಗಾಧರ್ ಗೆ ಕಳೆದ ಮೇ. 29ರಂದು ಅಪಘಾತ ಸಂಭವಿಸಿತ್ತು. ಪಣಂಬೂರು ಸಮೀಪ ಈತ ತೆರಳುತ್ತಿದ್ದ ಬೈಕ್ ಗೆ ಟಿಪ್ಪರ್ ಲಾರಿ ಗುದ್ದಿದ ಪರಿಣಾಮ ಲಾರಿಯಡಿಗೆ ಬಿದ್ದ ಆತನ ಮುಖ, ತಲೆಗೆ ಗಂಭೀರ ಏಟು ತಗುಲಿದೆ. ಕಾಲಿನ ಮೂಲೆಯೂ ಮರಿದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿದ್ದಾನೆ. ಈತನಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದು, ಚಿಕಿತ್ಸೆಗೆ ಒಂದೂವರೆ ಲಕ್ಷ ಖರ್ಚು ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮನೆ ಬಾಡಿಗೆ ಜೊತೆ ಹೆತ್ತವರ ಆರೋಗ್ಯ ನೋಡಿಕೊಳ್ಳುತ್ತಿರುವ ನಿಶಾ ಅವರಿಗೆ ಅಷ್ಟೊಂದು ಹಣವನ್ನು ಹೊಂದಿಸುವ ಶಕ್ತಿ ಇಲ್ಲ. ಬಡವರಿಗಾಗಿ ಸರಕಾರಿ ಯೋಜನೆಗಳು, ಸಾಲ, ಸೌಲಭ್ಯಗಳು ನೂರಾರಿದ್ದರೂ ಅದು ಯಾವುದೂ ಇವರಿಗೆ ದೊರಕಿಲ್ಲ. ಹೀಗಾಗಿ ಹೃದಯವಂತ ದಾನಿಗಳ ಮುಂದೆ ಕೈಯೊಡ್ಡಿ ನಿಂತಿದ್ದಾರೆ. ಧನಸಹಾಯ ನೀಡುವವರು ಈ ಕೆಳಗಿನ ಅವರ ಖಾತೆಗೆ ಹಣ ಪಾವತಿಸಬಹುದು.