ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರಾವಳಿಯಲ್ಲಿ ದೈವಾರಾಧನೆಗೆ ಪ್ರಮುಖ ಸ್ಥಾನ. ಭೂತಾರಾಧನೆ ಅಥವಾ ದೈವಾರಾಧನೆ ತುಳುನಾಡಿನ ಸಂಪ್ರದಾಯ, ಸಂಸ್ಕೃತಿಯ ಅವಿಭಾಜ್ಯ ಅಂಗ. ತುಳುನಾಡಿನ ಜನತೆಗೆ ದೈವಗಳ ಮೇಲೆ ಅಪಾರವಾದ ನಂಬಿಕೆ. ಅಗೆಲು, ತಂಬಿಲ, ಕೋಲ, ನೇಮೋತ್ಸವ ಮುಂತಾದ ಸೇವೆಯನ್ನು ಸಲ್ಲಿಸುತ್ತಾ ಈ ದೈವಗಳನ್ನು ತುಳುವರು ತುಳುನಾಡಿನಲ್ಲಿ ನಂಬಿಕೊಂಡು ಬಂದಿದ್ದಾರೆ. ಈ ನಡುವೆ ತುಳುನಾಡು ಸೇರಿದಂತೆ ಇಲ್ಲಿ ಆರಾಧಿಸುವ ದೈವಗಳಿಗೂ ಕಲೆಯ ಟಚ್ ನೀಡಲಾಗುತ್ತಿದೆ. ಹೌದು, ತುಳುನಾಡಿನ ಪ್ರಮುಖ ದೈವವಾದ ಸ್ವಾಮಿ ಕೊರಗಜ್ಜನ ಡಿಜಿಟಲ್ ಪೈಟಿಂಗ್ವೊಂದು ಭಾರೀ ಪ್ರಸಿದ್ದಿ ಪಡೆಯುತ್ತಿದೆ.
ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಟಲ್ ಪೈಟಿಂಗ್ನಲ್ಲಿ ಮೂಡಿ ಬಂದ ಈ ಸ್ವಾಮಿ ಕೊರಗಜ್ಜನ ಚಿತ್ರ ವೈರಲ್ ಕೂಡ ಆಗುತ್ತಿದೆ.
ಮಂಗಳೂರಿನವರೇ ಆದ ಶರತ್ ಕುಲಾಲ್ ಅವರು ನಿರ್ಮಿಸಿರುವ ಸ್ವಾಮಿ ಕೊರಗಜ್ಜನ ಡಿಜಿಟಲ್ ಪೈಟಿಂಗ್ ತುಳುನಾಡಿನ ಜನತೆಯ ಮನ ಗೆದ್ದಿದೆ. ಕೇವಲ ಒಂದು ವಾರದ ಹಿಂದೆ ರಚಿತವಾದ ಈ ಚಿತ್ರವೀಗ ಭಾರೀ ಸದ್ದು ಮಾಡುತ್ತಿದೆ. ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿದನ್ನು ಪ್ರೊಫೈಲ್ ಚಿತ್ರ, ಕವರ್ ಫೋಟೋವನ್ನಾಗಿ ಹಾಕಿಕೊಂಡಿದ್ದಾರೆ.
ಕೊರಗಜ್ಜ ಪವಾಡಗಳ ದೈವ ಎಂದೇ ಪ್ರತೀತಿ ಪಡೆದ ಶಕ್ತಿ. ಶರತ್ ಅವರಿಗೆ ಬಾಲ್ಯದಿಂದಲೂ ಕೊರಗಜ್ಜನ ಮೇಲೆ ನಂಬಿಕೆ ಇತ್ತು. ಹೀಗಾಗಿ ಅವರು ಈ ಡಿಜಿಟಲ್ ಪೈಟಿಂಗ್ ಮಾಡಿದ್ದಾರೆ. ಶರತ್ ಅವರು ಕೊರಗಜ್ಜನ ಡಿಜಿಟಲ್ ಪೈಟಿಂಗ್ ಮಾಡಲು ಸುಮಾರು ಒಂದೂವರೆ ವರುಷಗಳಿಂದ ಅಧ್ಯಯನ ನಡೆಸಿದ್ದರು. ಸುದರ್ಶನ್ ಕುಲಾಲ್, ಜಯರಾಮ್ ನಾವಡ ಮತ್ತು ನವೀನ್ ಕುಮಾರ್ ಅವರನ್ನು ಭೇಟಿಯಾಗಿ ದೈವಶಕ್ತಿ ಕೊರಗಜ್ಜನ ಚಾರಿತ್ರಿಕ ಹಿನ್ನೆಲೆಯನ್ನು ತಿಳಿದುಕೊಂಡರು. ಬಳಿಕ ತಮ್ಮ ಮನದಲ್ಲಿರುವ ಭಾವನೆಗಳಿಗೆ ಶರತ್ ಅವರು ಚಿತ್ರದ ಮೂಲಕ ಜೀವ ತುಂಬಿದ್ದಾರೆ.
ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ತುಳುನಾಡಿನ ಈ ಕೊರಗ ತನಿಯ ದೈವ ಕರಾವಳಿಯಲ್ಲಿ ಕೊರಗಜ್ಜ ಎಂದೇ ಪ್ರಸಿದ್ಧಿ ಪಡೆದಿದೆ. ತುಳುವರು ಅದೇನೆ ಕಷ್ಟ ಬಂದರೂ ಭಕ್ತಿಯಿಂದ ಕೊರಗಜ್ಜ.. ಕೊರಗಜ್ಜ ಎಂದೇ ಕರೆಯುತ್ತಾರೆ. ಹೀಗಾಗಿ ಕಲಾವಿದ ಶರತ್ ಅವರು ಅಜ್ಜನ ರೂಪವನ್ನು ಹೋಲುವ ಚಿತ್ರವನ್ನು ರಚಿಸಿದ್ದಾರೆ. ಕೊರಗಜ್ಜನ ಚಿತ್ರ ವೈರಲ್ ಆಗೋ ಮುಂಚೆ ಶರತ್ ಅವರು ತುಳುನಾಡಿನ ಧ್ವಜವನ್ನು ಹೋಲುವ ಡಿಜಿಟಲ್ ಪೈಟಿಂಗ್ ಅನ್ನು ರಚಿಸಿದ್ದು , ಅದು ಕೂಡ ವೈರಲ್ ಆಗುತ್ತಿದೆ. ಶರತ್ ಅವರು ಕಡು ಕೆಂಪು ಬಣ್ಣದ ಬಾವುಟದಲ್ಲಿ ಬಿಳಿ ಬಣ್ಣದ ವೃತ್ತಾಕಾರದ ಚಂದ್ರ ಹಾಗೂ ಸೂರ್ಯನ ಲಾಂಛನ ಹೊಂದಿರುವ ತುಳುನಾಡ ಧ್ವಜದ ಮಾದರಿಯ ಡಿಜಿಟಲ್ ಪೈಟಿಂಗ್ ಅನ್ನು ರಚಿಸಿದ್ದರು. ತುಳುನಾಡಿನ ಧ್ವಜವನ್ನು ಹೋಲುವ ಈ ಡಿಜಿಟಲ್ ಪೈಟಿಂಗ್ ಪೂರ್ಣಗೊಳಿಸಲು ಕಲಾವಿದ ಶರತ್ ತೆಗೆದುಕೊಂಡಿರುವುದು ಕೇವಲ ಒಂದು ವಾರ ಮಾತ್ರ ಎಂಬುದು ವಿಶೇಷ.
ಈ ಧ್ವಜದ ಡಿಜಿಟಲ್ ಪೈಟಿಂಗ್ನಲ್ಲಿ ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ನಾಗಾರಾಧನೆ. ಭೂತಾರಾಧನೆ, ಹುಲಿವೇಷ, ಯಕ್ಷಗಾನ, ಕಂಬಳ ಸೇರಿದಂತೆ ಹಲವು ಜನಪದ ಕಲೆಗಳನ್ನು ಶರತ್ ಅನಾವರಣಗೊಳಿಸಿದ್ದಾರೆ.
28ರ ಹರೆಯದ ಶರತ್ ಕುಲಾಲ್ ಕುತ್ತೆತ್ತೂರು ರಾಷ್ಟ್ರಮಟ್ಟದ ಚಿತ್ರ ಕಲಾವಿದ. ವಾಟರ್ ಕಲರ್, ಆಯಿಲ್ ಕಲರ್, ಅಕ್ರಲಿಕ್, ಚಾರ್ ಕೋಲ್ ಸೇರಿದಂತೆ ಅನೇಕ ಕಲಾ ಪ್ರಕಾರಗಳನ್ನು ಕರಗತ ಮಾಡಿಕೊಂಡಿರುವ ಇವರು, ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಓಂ ಆ್ಯನಿಮೇಶನ್ ಸ್ಟೂಡಿಯೋದಲ್ಲಿ ಕಾನ್ಸೆಪ್ಟ್ ಆರ್ಟಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಜ್ಜೈನಿಯಲ್ಲಿ ಮಾನವ ಸಂಕೇತ ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗೆ ನಡೆದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಇವರು, 2009-10ರಲ್ಲಿ ಇದೇ ಸಂಸ್ಥೆಯ ವತಿಯಿಂದ ನಡೆದ ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ. 2013ರಲ್ಲಿ ದೆಹಲಿಯ ಫ್ಯೂಷನ್ ಆರ್ಟ್ ಗ್ಯಾಲರಿ ವತಿಯಿಂದ ಎಂ. ಎಫ್ ಹುಸೇನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯ ವೃತ್ತಿಪರ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದ ಹೆಗ್ಗಳಿಕೆ ಇವರಿಗಿದೆ. ಮಾತ್ರವಲ್ಲ, ಕರ್ನಾಟಕ ಲಲಿತಾ ಕಲಾ ಆಕಾಡೆಮಿ ವತಿಯಿಂದಲೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಗುರುಗಳಾದ ಮನೋರಂಜನಿ ರಾವ್, ಎನ್. ಎಸ್ ಪತ್ತಾರ್, ಸಯ್ಯದ್ ಆಸೀಫ್ ಆಲಿ, ಮೋಹನ್ ಕುಮಾರ್, ನಾಗರಾಜ್ ಕೆಟಿ ಅವರ ಮಾರ್ಗದರ್ಶನದಲ್ಲಿ ಬೆಳೆದ ಇವರು ಅದ್ಭುತ ಚಿತ್ರಕಲಾವಿದ. ಶರತ್ ಅವರು ಮುಂದಿನ ದಿನಗಳಲ್ಲಿ ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರವನ್ನು ಬಿಂಬಿಸುವ ಮತ್ತಿತರ ಪೈಟಿಂಗ್ ರಚನೆ ಮಾಡುವ ಚಿಂತನೆಯಲ್ಲಿದ್ದಾರೆ.
ಬರಹ : ಸುಪ್ರೀತಾ ಸಾಲ್ಯಾನ್
(ಕೃಪೆ: citizenlive.news)