ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ತೀವ್ರ ಹೊಟ್ಟೆನೋವು ಮತ್ತು ಜ್ವರದಿಂದ ಬಳಲುತ್ತಿದ್ದ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ಚಂದ್ರಹಾಸ ಕುಲಾಲ್ ಚಿಕಿತ್ಸೆ ಸಿಗದೇ ಮೃತಪಟ್ಟ ಪ್ರಕರಣವನ್ನು ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕುಲಾಲ ಯುವ ವೇದಿಕೆ ಆಗ್ರಹಿಸಿದೆ.
ಚಂದ್ರಹಾಸ ಅವರ ತಂದೆ ಮೋನಪ್ಪ ಮೂಲ್ಯರವರು ಅನಾರೋಗ್ಯ ಪೀಡಿತರಾಗಿದ್ದು ದುಡಿಯಲು ಅಶಕ್ತರಾಗಿದ್ದರೆ, ತಾಯಿ ಕೂಲಿ ಕೆಲಸ ಮಾಡುತ್ತಾರೆ. ಇರುವ ಒಬ್ಬ ತಮ್ಮ ವಿದ್ಯಾಭ್ಯಾಸ ಮುಗಿಸಿ ನಿರುದ್ಯೋಗಿಯಾಗಿ ಮನೆಯಲ್ಲೇ ಇದ್ದಾನೆ. ಹಿರಿಮಗನಾಗಿದ್ದ ಚಂದ್ರಹಾಸನ ದುಡಿಮೆಯಿಂದ ಆ ಕುಟುಂಬ ಬದುಕುತ್ತಿತ್ತು. ಇದೀಗ ಮನೆಗೆ ಆಸರೆಯಾಗಿದ್ದ ಮಗ ವಿಧಿವಶನಾಗಿದ್ದಾನೆ. ಮನೆಯವರಿಗೆ ದಿಕ್ಕು ತೋಚದಂತಾಗಿದೆ.
ಏಪ್ರಿಲ್ 23ರಂದು ಹೊಟ್ಟೆನೋವು ಕಾಣಿಸಿಕೊಂಡು ಜ್ವರದಿಂದ ಬಳಲುತ್ತಿದ್ದ ಯುವಕನನ್ನು ಮನೆಯವರು ವಿಟ್ಲ ಆಸ್ಪತ್ರೆಗೆ ತಂದಿದ್ದಾರೆ. ಅಲ್ಲಿ ಇವರ ಸ್ಥಿತಿ ನೋಡಿ ವೈದ್ಯರು ಬಂಟ್ವಾಳದ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಇವರಿಗೆ ಕೋವಿಡ್ 19 ಇದೆ ಎಂದು ಅನುಮಾನಪಟ್ಟ ಆಸ್ಪತ್ರೆ ವೈದ್ಯರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕಳುಹಿಸಿದ್ದಾರೆ. ಮನೆಯವರನ್ನು ಬಂಟ್ವಾಳದಿಂದಲೇ ವಾಪಾಸ್ ಮನೆಗೆ ಕಳುಹಿಸಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ನೇರವಾಗಿ ಚಂದ್ರಹಾಸ ಕುಲಾಲ್ ರನ್ನು ಐಸೋಲೇಷನ್ ವಾರ್ಡ್ ಗೆ ಹಾಕಿ ಕೋವಿಡ್ ಟೆಸ್ಟಿಗೆ ಬೇಕಾದ ಗಂಟಲ ದ್ರವವನ್ನು ತೆಗೆದು ರಿಪೋರ್ಟ್ ಗಾಗಿ ಕಾದಿದ್ದಾರೆ. ಆದರೆ ಇವರ ನಿಜವಾದ ಸಮಸ್ಯೆ ಏನು ಅನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನಮಾಡಲಿಲ್ಲ. ಪರಿಪರಿಯಾಗಿ ಬೇಡಿಕೊಂಡರೂ ಏಪ್ರಿಲ್ 24ರ ಸಂಜೆಯವರೆಗೆ ಚಿಕಿತ್ಸೆಯನ್ನು ನೀಡದೆ ಸತಾಯಿಸಲಾಗಿದೆ. ಇದನ್ನು ಸ್ವತಃ ಚಂದ್ರಹಾಸರೇ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದರು. ಈತನ್ಮಧ್ಯೆ ನೋವು ಉಲ್ಬಣಿಸಿದಾಗ ಐಸಿಯುಗೆ ಶಿಫ್ಟ್ ಮಾಡಿದ್ರೂ ಚಂದ್ರಹಾಸ ಅವರು ಏಪ್ರಿಲ್ 24ರ ರಾತ್ರಿ ಮೃತಪಟ್ಟಿದ್ದಾರೆ. ಇತ್ತ ಫೋನ್ ಸ್ವೀಕರಿಸದಿರುವ ಮಗನಿಗೆ ಏನೋ ಆಗಿದೆ ಅಂದುಕೊಂಡು ಮನೆಯವರು ಕಷ್ಟಪಟ್ಟು ಮಂಗಳೂರು ತಲುಪಿದಾಗ ಮಗ ಮೃತಪಟ್ಟಿದ್ದು ತಿಳಿದು ಆಕಾಶವೇ ಕಳಚಿಬಿದ್ದಂತಾಗಿದೆ. ಆ ಬಡ ಕುಟುಂಬಕ್ಕೆ. ಇಷ್ಟೆಲ್ಲಾ ಆದರೂ ಆ ದೇಹವನ್ನು ಮನೆಯವರಿಗೆ ಹಸ್ತಾಂತರಿಸಿ ಜಿಲ್ಲಾಸ್ಪತ್ರೆ ಕೈತೊಳೆದುಕೊಂಡಿದೆ.
ದೇಹಕ್ಕೆ ಬಂದ ರೋಗ ಬೇರೆ ಆದರೂ ಕೊರೊನ ಇರಬಹುದೆಂದು ಶಂಕಿಸಿ ಚಂದ್ರಹಾಸ್ ಕುಲಾಲ್ ರವರಿಗೆ ಸರಿಯಾದ ಚಿಕಿತ್ಸೆ ನೀಡದೇ ಜಿಲ್ಲಾಸ್ಪತ್ರೆ ನಿರ್ಲಕ್ಷ್ಯ ವಹಿಸಿದೆ, ಮನೆಗೆ ದಿಕ್ಕು ಆಸರೆಯಾಗಿದ್ದ ಮಗ ಈಗ ಲಾಕ್ ಡೌನ್ ಪರಿಣಾಮ ಚಿಕಿತ್ಸೆ ಸಿಗದೇ ನಮ್ಮನ್ನಗಲಿದ್ದಾನೆ ಎಂದು ಕಣ್ಣೀರಿನಲ್ಲಿ ಬೆಂದು ಹೋಗಿದೆ ಆ ನತದೃಷ್ಟ ಕುಟುಂಬ. ಸಂಬಂಧಪಟ್ಟ ಇಲಾಖೆಗಳು, ಅಧಿಕಾರಿಗಳು ಈ ಸಾವು ಹೇಗಾಗಿದೆ ಅದಕ್ಕೆ ಸೂಕ್ತ ಕಾರಣವೇನು ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ಪರಿಹಾರ ನೀಡಿ ಆ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕರ್ನಾಟಕ ರಾಜ್ಯ ಕುಲಾಲ /ಕುಂಬಾರ ಯುವ ವೇದಿಕೆ, ಪುತ್ತೂರು ಅಧ್ಯಕ್ಷ ನವೀನ್ ಕುಲಾಲ್ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.