ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಂಘ ಬೆಂಗಳೂರು ಇದರ ಸದಸ್ಯ, ಕುಲಾಲ ಯುವ ಘಟಕದ ಸಕ್ರಿಯ ಕಾರ್ಯಕರ್ತ ಚಂದ್ರಹಾಸ ಕನ್ಯಾನ ಅವರು ಅಸೌಖ್ಯದಿಂದ ನಿಧನರಾದರು.
ಮೂಲತಃ ವಿಟ್ಲ ಕನ್ಯಾನ ನಿವಾಸಿಯಾಗಿರುವ ಚಂದ್ರಹಾಸ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಲಾಕ್ ಡೌನ್ ಮೊದಲು ವಿಟ್ಲಕ್ಕೆ ಆಗಮಿಸಿದ್ದರು. ಎರಡು ದಿನಗಳ ಹಿಂದೆ ರಾತ್ರಿ ಹೊತ್ತಿಗೆ ಇವರಿಗೆ ಏಕಾಏಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ರಾತ್ರಿಯಿಡೀ ಜೋರಾಗಿ ನರಳಾಡುತ್ತಿದ್ದ ಆತನನ್ನು ವಾಹನದ ವ್ಯವಸ್ಥೆ ಇಲ್ಲದ ಕಾರಣ ಮರು ದಿವಸ ಮನೆಯವರು ವಿಟ್ಲದ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದರು. ಚಿಕಿತ್ಸೆ ಕೊಡಲು ಆಗುವುದಿಲ್ಲ ಬಂಟ್ವಾಳ ಆಸ್ವತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರಿಂದ ಬಂಟ್ವಾಳ ಸರಕಾರಿ ಆಸ್ವತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಆತನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರ ಸಮಸ್ಯೆ ಏನೆಂದು ಸರಿಯಾಗಿ ಪರೀಕ್ಷಿಸದ ವೈದ್ಯರು ಅವರನ್ನು ಕೋವಿಡ್ ವಾರ್ಡ್ ನಲ್ಲಿ ಹಾಕಿ, ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ. ಇವರ ಕೋವಿಡ್ ವರದಿ ನೆಗೆಟಿವ್ ಬಂದಿದ್ದು, ಅಪೆಂಡಿಸೈಟಿಸ್ ನಿಂದ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಅಪೆಂಡಿಸೈಟಿಸ್ ತೊಂದರೆಯಿಂದ ಕೃಷ್ಣಾಪುರ ಕಾಟಿಪಳ್ಳ ದಿ.ಲಕ್ಷ್ಮಣ್ ಕುಲಾಲ್ ಮತ್ತು ಜಾನಕಿ ದಂಪತಿಯ ಪುತ್ರಿ ಶೋಭಾ ಅವರು ಮುಂಬಯಿಯ ಪನ್ವೇಲ್ ನಲ್ಲಿ ಮೃತಪಟ್ಟಿದ್ದರು.