ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್):ಕೊನೆಗೂ ನಮ್ಮೆಲ್ಲರ ಈ ಆಸೆ ಈಡೇರಲಿಲ್ಲ.. ನೂರಾರು ಸಹೃದಯಿಗಳ ಹರಕೆ, ಹಾರೈಕೆ, ಪ್ರಾರ್ಥನೆ ಕೈಗೂಡಲಿಲ್ಲ.. ರಕ್ತ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬಾಲಕ ಹಾರ್ದಿಕ್ ಕುಲಾಲ್ ವಿಧಿಯಾಟದ ಮುಂದೆ ಸೋತು ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾನೆ.
ಪೈವಳಿಕೆ ಪಂಚಾಯತ್ನ ಬಾಯಾರು ಗ್ರಾಮದ ಕನಿಯಾಲ ನಿವಾಸಿ ಹರೀಶ್ ಕುಲಾಲ್-ರಂಜಿತಾ ದಂಪತಿ ಪುತ್ರ 4 ವರ್ಷದ ಬಾಲಕ ಹಾರ್ದಿಕ್ ಕುಲಾಲ್ ರಕ್ತ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಅಂಗನವಾಡಿಯಲ್ಲಿ ಕಲಿಯುತ್ತಿದ್ದ ಬಾಲಕನಿಗೆ ಆರಂಭದಲ್ಲಿ ಸಾಮಾನ್ಯ ಜ್ವರ ಕಾಣಿಕೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖವಾಗದೇ ಈ ಮಗುವಿನ ಕಾಯಿಲೆಯು ದಿನದಿಂದ ದಿನಕ್ಕೆ ಉಲ್ಬಣಗೊಂಡು ಬಳಿಕ ಮಂಗಳೂರು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಉನ್ನತ ವೈದ್ಯಕೀಯ ಪರೀಕ್ಷೆಯಲ್ಲಿ ರಕ್ತದ ಕ್ಯಾನ್ಸರ್ ಈ ಮಗುವಿಗೆ ಬಾಧಿಸಿದ್ದು ಕಂಡು ಬಂದಿತ್ತು. ಈತನ ಚಿಕಿತ್ಸೆಗಾಗಿ ಸುಮಾರು 6ರಿಂದ 8 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ಬೇಕೆಂಬುದಾಗಿ ವೈದ್ಯರು ತಿಳಿಸಿದ್ದರು. ಕೂಲಿ ನಾಲಿ ಮಾಡಿ ದಿನದೂಡುತ್ತಿದ್ದ ಹಾರ್ದಿಕ್ ಪೋಷಕರು ತಮ್ಮ ಕರುಳಕುಡಿಯನ್ನು ಸಾಲಸೋಲ ಮಾಡಿಯಾದರೂ ಬದುಕಿಸಬೇಕೆಂದು ಪಣ ತೊಟ್ಟಿದ್ದರು. ಅಲ್ಲದೇ ಸಾರ್ವಜನಿಕರ ಬಳಿ ನೆರವು ನೀಡುವಂತೆ ವಿನಂತಿಸಿದ್ದರು. ಅದರಂತೆ ನೂರಾರು ದಾನಿಗಳು ಆರ್ಥಿಕ ಸಹಾಯ ನೀಡಿ ಮಗು ಗುಣಮುಖವಾಗಲಿ ಎಂದು ಮನದಲ್ಲೇ ಹಾರೈಸಿದ್ದರು, ಹರಕೆ ಹೊತ್ತರು. ಆದರೆ, ದೇವರು ದಯೆ ತೋರಲಿಲ್ಲ.. ಈತನನ್ನು ರಕ್ಷಿಸಲು ವೈದ್ಯರು ನಡೆಸಿದ ಎಲ್ಲ ಪ್ರಯತ್ನ ಕೈಗೂಡದೇ ಇವರ್ಯಾವ ಆಶಯಗಳು ಕೊನೆಗೂ ಕೈಗೂಡದೆ ಏಪ್ರಿಲ್ 20ರಂದು ಕೊನೆಯುಸಿರೆಳಿದಿದ್ದಾನೆ.