ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ವಾರ್ಡ್ ನಂ. 26 ದೇರೆಬೈಲ್ ಕಾರ್ಪೊರೇಟರ್ ಗಣೇಶ್ ಕುಲಾಲ್ ಅವರು ಕಳೆದ ಎರಡು ವಾರಗಳಿಂದ ವಾರ್ಡ್ನ ವಿವಿಧ ಪ್ರದೇಶಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಂದಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಇದುವರೆಗೆ ಸುಮಾರು 1800 ಮಂದಿಗೆ ದಿನಸಿ ಕಿಟ್ ವಿತರಣೆ ಮಾಡಲಾಗಿದೆ.
ಮಂಗಳೂರಿನ ಉರ್ವ ಪ್ರದೇಶದಲ್ಲಿ ಪೌರ ಕಾರ್ಮಿಕರು ಮತ್ತು ಇತರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಯಿತು. ಕಿಟ್ನಲ್ಲಿ 10 ಕೆ. ಜಿ. ಅಕ್ಕಿ, ಬೇಳೆ. ಕಾಳು, ರಿಫೈಂಡ್ ಎಣ್ಣೆ, ನಾಲ್ಕು ಬಗೆಯ ತರಕಾರಿ, ಸಕ್ಕರೆ, ಚಾಹುಡಿ, ಉಪ್ಪು ಒಳಗೊಂಡಿದೆ.
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಅರುಣ್ ಕುಮಾರ್ ಉರ್ವ, ನಿತಿನ್ ಸುವರ್ಣ, ಸುಖಾಂತ್ ಪೂಜಾರಿ, ವಿಶ್ವನಾಥ ಪ್ರಭು, ಚಂದನ್ ಉರ್ವ, ರಾಜೇಶ್ ಶೆಟ್ಟಿ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಷ್ಟೇ ಅಲ್ಲದೆ, ಗಣೇಶ್ ಕುಲಾಲ್ ನೂರಕ್ಕೂ ಹೆಚ್ಚು ಮಂದಿಗೆ ಬೆಳಿಗ್ಗಿನ ಉಪಹಾರ, ಊಟ ಮತ್ತು ಸಂಜೆಯ ತಿಂಡಿಯನ್ನು ತಮ್ಮ ಕ್ಷೇತ್ರದ ನಿರ್ಗತಿಕರಿಗೆ ನೀಡುತ್ತಿದ್ದಾರೆ. ಸ್ವತಃ ತಮ್ಮ ಮನೆಯಲ್ಲಿ ಆಹಾರವನ್ನು ಬೇಯಿಸಿ ಉರ್ವಸ್ಟೋರ್, ಲೇಡಿಹಿಲ್, ಉರ್ವ ಹಾಗೂ ಮಣ್ಣಗುಡ್ಡೆ ಸೇರಿದಂತೆ ಐದು ಕಡೆಗಳಲ್ಲಿ ಹಂಚುತ್ತಿದ್ದಾರೆ.
ಈ ಕಾರ್ಯಕ್ಕೆ ಕ್ಷೇತ್ರದಲ್ಲಿರುವ ದಾನಿಗಳು ಕೈಜೋಡಿಸಿದ್ದಾರೆ. ಕಾರ್ಪೊರೇಟರ್ ಗಣೇಶ್ ಕುಲಾಲ್ ಅವರ ಕಾರ್ಯಕ್ಕೆ ಪಂಚಮುಖಿ ಬಳಗ, ಉರ್ವ ಫ್ರೆಂಡ್ ಸರ್ಕಲ್, ಕೊರಗಜ್ಜ ಕ್ಷೇತ್ರ, ನವದುರ್ಗ ಕ್ರಿಕೆಟರ್ಸ್ ಕೈಜೋಡಿಸಿವೆ.
ವಿವಿಧ ದಾನಿಗಳು ನೀಡಿರುವ ತರಕಾರಿ ಮತ್ತು ಆಹಾರ ಸಾಮಗ್ರಿಗಳ ಜೊತೆ ತಾವೂ ತಮ್ಮ ಸ್ವಂತ ಖರ್ಚಿನಿಂದ ದಿನಸಿ ಕಿಟ್ ಹಾಗೂ ಆಹಾರ ವಿತರಣೆಯಲ್ಲಿ ತೊಡಗಿದ್ದಾರೆ. ಕಾರ್ಪೊರೇಟರ್ ಅವರ ಸೇವಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.