ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕೋವಿಡ್ 19 ವೈರಸ್ ಉಪಟಳಕ್ಕೆ ತತ್ತರಿಸುತ್ತಿರುವ ಮುಂಬಯಿ ವಾಣಿಜ್ಯ ನಗರದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರಬಹುದಾಗಿರುವ ಕುಲಾಲ ಸಮಾಜ ಭಾಂಧವರ ಯೋಗಕ್ಷೇಮ ವಿಚಾರಿಸಲು ಮುಂಬಯಿ ಕುಲಾಲ ಸಂಘ ಮುಂದಾಗಿದೆ. ಮುಂಬಯಿ ಕುಲಾಲ ಸಮುದಾಯದವರ ರಕ್ಷಣೆಗೆ ‘ಕುಲಾಲ ಹೆಲ್ಫ್ ಲೈನ್’ ಮೂಲಕ ಸಹಾಯ ಮಾಡಲು ಸಂಘ ಮುಂದಾಗಿದೆ.
ಮುಂಬಯಿ ಹಾಗೂ ಉಪನಗರಗಳಲ್ಲಿ ಇರುವ ಸಮಸ್ತ ಕುಲಾಲ ಸಮಾಜ ಬಾಂಧವರನ್ನು ಸಂಪರ್ಕಿಸಿ ಅವರ ಸಂಕಷ್ಟಗಳನ್ನು ಖುದ್ದಾಗಿ ವಿಚಾರಿಸುವುದು ಕಷ್ಟಸಾಧ್ಯವಾಗಿರುವುದರಿಂದ ಈ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.
ಈ ಸಂಕಷ್ಟದ ಸಮಯದಲ್ಲಿ ಕುಲಾಲ ಸಮಾಜ ಬಾಂಧವರು ಸಂಧಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಯಾವುದೇ ಸಹಕಾರದ ಅಗತ್ಯವಿದ್ದಲ್ಲಿ ಅಂತವರ ಸೇವೆಗಾಗಿ ಕುಲಾಲ ಹೆಲ್ಪ್ ಲೈನ್ ನ್ನು ಸಂಪರ್ಕಿಸಬಹುದು. ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಈ ಹೆಲ್ಪ್ ಲೈನ್ ಕರೆಯಲ್ಲಿ ತಿಳಿಸಿದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕುಲಾಲ ಹೆಲ್ಪ್ ಲೈನ್ ನಿಮ್ಮ ಕಷ್ಟಕ್ಕೆ ಸಹಕರಿಸುವುದು. ಏಪ್ರಿಲ್ 14ರವರೆಗೆ ಮುಂಬಯಿ ನಗರ ಮತ್ತು ಉಪನಗರದಲ್ಲಿರುವ ಕುಲಾಲ ಸಮಾಜ ಬಾಂಧವರ ಸೇವಾ ಕಾರ್ಯಗಳಿಗೆ ಪೂರಕವಾಗಿ ಈ ಹೆಲ್ಪ್ ಲೈನ್ ಕಾರ್ಯನಿರ್ವಹಿಸಲಿದೆ.
‘ದೈನಂದಿನ ಬದುಕು ನಿರ್ವಹಿಸಲು ಕಷ್ಟವಾದಾಗ ಅಥವಾ ವೈದ್ಯಕೀಯ ಸಮಸ್ಯೆ ಆದಾಗ ನಿಮ್ಮ ಸೇವೆಗೆ ಸ್ಥಳೀಯ ಪೊಲೀಸ್ ಸೇವಾಕೇಂದ್ರದ ಸಹಾಯದೊಂದಿಗೆ ಸಮಾಜಬಾಂಧವರನ್ನು ಸಂಪರ್ಕಿಸಲಾಗುತ್ತದೆ’, ಈ ಉಪಯುಕ್ತ ಮಾಹಿತಿಯನ್ನು ಮುಂಬೈ ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ್ ಕುಲಾಲ್, ಉಪಾಧ್ಯಕ್ಷರಾಗಿರುವ ರಘು ಮೂಲ್ಯ ಕಾರ್ಯದರ್ಶಿ ಕರುಣಾಕರ್ ಸಾಲ್ಯಾನ್, ಕೋಶಧಿಕಾರಿ ಜಯ ಅಂಚನ್ ಮಹಿಳಾ ವಿಭಾಗದ ಕಾರ್ಯಧ್ಯಕ್ಷ ಮಮತಾ ಗುಜರಾತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಎಚ್ಚರವಾಗಿರಿ ಜಾಗೃತರಾಗಿರಿ
ಮುಂಬಯಿ ಮಹಾನಗರದಲ್ಲಿ ಹೆಚ್ಚು ಹೆಚ್ಚು ಪಸರಿಸಿಕೊಳ್ಳುತ್ತಿರುವ ಕೋವಿಡ್ 19 ಮಹಾಮಾರಿ ಯಾವುದೇ ಸಂದರ್ಭದಲ್ಲಿ ನಮಗೂ ತಗಲುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನಾವೆಲ್ಲರೂ ಮನೆಯಿಂದ ಹೊರಗೆ ಬಾರದೆ ಜಾಗೃತರಾಗಿರಬೇಕು ಮತ್ತು ಅಗತ್ಯ ವಸ್ತುಗಳಿಗೆ ಮಾತ್ರ ಮನೆಯಿಂದ ಹೊರಗೆ ಬರುವಂತೆ ಕುಲಾಲ ಸಮಾಜ ಬಾಂಧವರಲ್ಲಿ ಸಂಘ ಮನವಿ ಮಾಡಿಕೊಂಡಿದೆ.
‘ಸಮಾಜ ಬಾಂಧವರ ನೋವನ್ನು ಅರಿತುಕೊಂಡು ಅವರಿಗೆ ಸೂಕ್ತ ಸಹಾಯ ಹಸ್ತ ನೀಡುವುದಕ್ಕಾಗಿ ಕುಲಾಲ ಸಂಘ ಮುಂಬಯಿ ‘ಕುಲಾಲ ಹೆಲ್ಪ್ ಲೈನ್’ ಪ್ರಾರಂಭಿಸಿದ್ದು ಪ್ರತೀ ಉಪನಗರಗಳಲ್ಲಿ ಸ್ವಯಂ ಸೇವಕರ ಸಮಾಜ ಬಾಂಧವರು ಕಷ್ಟದಲ್ಲಿರುವವರ ಸೇವೆ ಮಾಡುವುದಕ್ಕಾಗಿ ಸಿದ್ಧರಾಗಿದ್ದಾರೆ. ನಿಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳಿ ಯಾವುದೇ ಸಂದರ್ಭದಲ್ಲಿ ಸಂಘದ ಸೇವಾ ಕಾರ್ಯದ ಅಗತ್ಯವಿದ್ದಾಗ ಕುಲಾಲ ಹೆಲ್ಪ್ ಲೈನ್ ಗೆ ಸಂಪರ್ಕಿಸಿ’ ಎಂದು ಮುಂಬಯಿ ಕುಲಾಲ ಸಂಘದ ಅಧ್ಯಕ್ಷರಾಗಿರುವ ದೇವದಾಸ್ ಕುಲಾಲ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.