ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್):ಬಹುನಿರೀಕ್ಷಿತ ರಾಜ್ಯ ಸರಕಾರ ಬಜೆಟ್ನಲ್ಲಿ ಕುಂಬಾರ ಜನಾಂಗದ ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ನೀಡಿದ್ದು, ಕುಂಬಾರರ ಕೆಲವು ಪ್ರಮುಖ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಜನಾಂಗದ ಪ್ರಮುಖ ಬೇಡಿಕೆಯಂತೆ ಸಮಾಜ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ ನೀಡಲಾಗಿದೆ.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರು,ಮಹಿಳೆಯರು, ಮಕ್ಕಳು, ಯುವಜನರು, ಹಿರಿಯ ನಾಗರಿಕರು, ಬಡವರು ಸೇರಿ ಎಲ್ಲರಿಗೂ ಅಭಿವೃದ್ಧಿಯ ಪಾಲು ತಲುಪಿಸುವುದರ ಮೂಲಕ ರಾಜ್ಯದ ಬೆಳವಣಿಗೆ ಸಾಧಿಸಲು ರಾಜ್ಯ ಸರಕಾರ ಪ್ರಸ್ತಾವನೆಗಳನ್ನು ಮಂಡಿಸಿದೆ. ಕುಂಬಾರ ಜನಾಂಗದ ದೃಷ್ಟಿಯಿಂದ ಇತ್ತೀಚಿನ ವರ್ಷಗಳಲ್ಲೇ ಯಡಿಯೂರಪ್ಪ ಅವರು ಮಂಡಿಸಿದ ಅತ್ಯುತ್ತಮ ಬಜೆಟ್ ಇದಾಗಿದೆ. ಇದಕ್ಕೂ ಮುನ್ನ ಸದನದಲ್ಲಿ ಸರ್ವಜ್ಞ ಕರ್ನಾಟಕದ ಶ್ರೇಷ್ಠ ಪ್ರಾಚೀನ ಕವಿ ಮತ್ತು ಸಮಾಜ ಸುಧಾರಕರಾಗಿದ್ದ ಸರ್ವಜ್ಞ ಅವರ ಹೆಸರಿನಲ್ಲಿ ಕ್ಷೇತ್ರ ಅಭಿವೃದ್ಧಿ ವಿಧೇಯಕ- 2020ಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಕುಂಬಾರ ಅಭಿವೃದ್ಧಿ ನಿಯಮವನ್ನು ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಪ್ರತ್ಯೇಕಿಸಬೇಕೆಂಬ ಬೇಡಿಕೆಗೆ ಯಾವುದೇ ಸ್ಪಂದನೆ ದೊರೆಯದಿರುವುದು ನಿರಾಸೆ ಮೂಡಿಸಿದೆ. ಕುಂಬಾರರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಯಾಗದ ಹೊರತು ನೀಡಿರುವ ಅನುದಾನ ಸಮರ್ಪಕ ರೀತಿ ವಿನಿಯೋಗವಾಗದು ಎಂಬ ಅಭಿಪ್ರಾಯ ಕೇಳಿಬಂದಿದೆ.