ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಟ್ಟಕಡೆಯ ವ್ಯಕ್ತಿಗೂ ಬದುಕು ಕಟ್ಟಿಕೊಡಲು ಸಮಾಜ ಶಕ್ತಿ ತುಂಬಬೇಕು. ದೇವರಾಜ ಅರಸು ಅವರ ಮಾದರಿಯಲ್ಲಿಯೇ ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಬೆಳೆಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳೂರಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ವಿಂಶತಿ ಸಂಭ್ರಮ, ಪಡೀಲ್ನ ಕುಲಾಲ್ ಹೆಲ್ತ್ಸೆಂಟರ್ನ 25ನೇ ವರ್ಷಾಚರಣೆ ಹಾಗೂ ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್ನ 5ನೇ ವರ್ಷಾಚರಣೆ ಪ್ರಯುಕ್ತ ಪಡೀಲ್ ಕೊಡಕ್ಕಾಲ್ ಕುಲಾಲ್ ಹೆಲ್ತ್ ಸೆಂಟರ್ ಆವರಣದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಮತ್ತು ಹಿರಿಯ ವೈದ್ಯ ಡಾ. ಎಂ.ವಿ. ಕುಲಾಲ್ ಅವರಿಗೆ ರವಿವಾರ ‘ಅರಸು ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ.ಮೋಹನ್ ಆಳ್ವ ‘ಇಂದಿನ ಸಮಾಜದಲ್ಲಿ ಶ್ರೀಮಂತರು ಮಾತ್ರವಲ್ಲದೆ ತೀರಾ ಬಡತನದಲ್ಲಿರುವ ಅಶಕ್ತ ಕುಟುಂಬಗಳೂ ಇವೆ. ಕೆಲವರು ವಿದ್ಯೆಯಿಂದಲೂ ವಂಚಿತರಾದವರಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಅಂತರ ಉಂಟಾಗಿದೆ. ಇದನ್ನು ದೂರ ಮಾಡಬೇಕಿದೆ. ತಮ್ಮ ತಮ್ಮ ಕೆಲಸದ ಜತೆಗೆ ಸಮಾಜದ ಅಶಕ್ತರ ಏಳಿಗೆಯ ಕಾರ್ಯದಲ್ಲಿಯೂ ತೊಡಗಿಕೊಳ್ಳುವ ಆವಶ್ಯಕತೆ ಇದೆ ಎಂದರು.
ಶ್ರೀಧಾಮ ಮಾಣಿಲ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಆಶಯ ಮಾತುಗಳನ್ನಾಡಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಂಗಳೂರು ವಿ.ವಿ ಉಪಕುಲಪತಿ ಡಾ. ಪಿ.ಎಸ್.ಯಡಪಡಿತ್ತಾಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣರಾವ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಕಾರ್ಯದರ್ಶಿ ಮಮತಾ ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಸ್ವಾಗತಿಸಿದರು. ಆರ್ಜೆ ನಯನಾ ಮತ್ತು ಆರ್ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯ ಜನಜಾಗೃತಿ ಸಮ್ಮೇಳನ
ವಿಂಶತಿ ಸಂಭ್ರಮದ ಪ್ರಯುಕ್ತ ಹಮ್ಮಿಕೊಳ್ಳಲಾದ ಆರೋಗ್ಯ ಜನಜಾಗೃತಿ ಸಮ್ಮೇಳನವನ್ನು ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಉದ್ಘಾಟಿಸಿದರು. ವೆನ್ಲಾಕ್ ಆಸ್ಪತ್ರೆಯ ಎಲುಬು ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ. ಕೆ.ಆರ್. ಕಾಮತ್, ಇಂಡಿಯನ್ ರೆಡ್ಕ್ರಾಸ್ಸೊಸೈಟಿ ದ.ಕ. ಅಧ್ಯಕ್ಷ ಸಿ.ಎ.ಶಾಂತರಾಮ ಶೆಟ್ಟಿ, ಒಮೆಗಾ ಆಸ್ಪತ್ರೆ ಹೃದ್ರೋಗ ತಜ್ಞ ಡಾ. ಮುಕುಂದ್ ಕೆ., ಫಸ್ಟ್ ನ್ಯೂರೋ ಆಸ್ಪತ್ರೆಯ ತಜ್ಞ ಡಾ. ರಾಜೇಶ್ ಶೆಟ್ಟಿ, ಐಎಂಎ ರಾಜ್ಯ ಹಿರಿಯ ಉಪಾಧ್ಯಕ್ಷ ಡಾ. ಜಿ.ಕೆ.ಭಟ್ ಸಂಕಬಿತ್ತಿಲು, ನೇತ್ರತಜ್ಞ ಡಾ. ಸುಧೀರ್ ಹೆಗ್ಡೆ ಉಪಸ್ಥಿತರಿದ್ದರು.
ಹಿರಿಯ ನಾಗರಿಕರಿಗೆ ಮೂಳೆಯ ಖನಿಜ ಲವಣಾಂಶ ಸಾಂದ್ರತೆ ಪತ್ತೆ, ಆಯ್ದ ರೋಗಿಗಳಿಗೆ ಇಕೋ ಮತ್ತು ಇಸಿಜಿ ಪರೀಕ್ಷೆ, ಶಾಲಾ ಮಕ್ಕಳಿಗೆ ರಕ್ತ ಗುಂಪು ವರ್ಗೀಕರಣ, ಅಂಗಾಂಗ ದಾನದ ಬಗ್ಗೆ ಮಾಹಿತಿ ಮತ್ತು ಪ್ರತಿಜ್ಞೆ, ಕಣ್ಣು ದಾನದ ಬಗ್ಗೆ ಮಾಹಿತಿ ಮತ್ತು ಪ್ರತಿಜ್ಞೆ, ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ತಪಾಸಣೆ, ಕಣ್ಣು ತಪಾಸಣೆ ನಡೆಯಿತು. ಆಹಾರ ಮತ್ತು ಪೌಷ್ಠಿಕಾಂಶದ ಬಗ್ಗೆ ಸಲಹೆ ಮತ್ತು ಸಾಂತ್ವಾನ ಒದಗಿಸಲಾಯಿತು.