ಎರಡು ತಿಂಗಳಲ್ಲೇ 1.7 ಕೋಟಿ ಫಾಲೋವರ್ಸ್, 3.4 ಮಿಲಿಯನ್ ಲೈಕ್ಸ್ !
ಧಾರವಾಡ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಟಿಕ್ ಟಾಕ್ ಈಗ ಬಹುಬೇಡಿಕೆಯ ಆ್ಯಪ್ ಆಗಿ ಬೆಳೆದಿದೆ. ಈ ಆ್ಯಪ್ ಎಲೆಮರೆಯ ಕಾಯಿಯಂತಿರುವ ಅನೇಕ ಕಲಾವಿದರಿಗೆ ವೇದಿಕೆಯಾಗಿದೆ. ಅನೇಕರು ಇದನ್ನು ಹಾಸ್ಯ ಮಾಡಲು ಹಾಗೂ ಮನರಂಜನೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಈ ಆ್ಯಪ್ ನ್ನು ತಮ್ಮ ಕಲೆಯನ್ನು ಗುರುತಿಸಿಕೊಳ್ಳುವುದಕ್ಕೋಸ್ಕರ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಅನೇಕರು ಈ ಟಿಕ್ ಟಾಕ್ ವ್ಯಾಮೋಹಕ್ಕೆ ಒಳಗಾಗಿ ಜೀವ ಕಳೆದುಕೊಂಡ ಉದಾಹರಣೆಯೂ ಇದೆ. ಆದರೆ, ಅದು ಬೇರೆ ವಿಷಯ. ಇಲ್ಲೊಬ್ಬ ಕಲಾವಿದ ಟಿಕ್ ಟಾಕ್ ನ್ನು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮಕ್ಕೆ ಸೆಲೆಕ್ಟ್ ಆಗುವುದಕ್ಕೋಸ್ಕರ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಹೌದು.! ಇವರು ಗಾರೆ ಕೆಲಸದ ಮೇಸ್ತ್ರಿ. ಜೊತೆಗೆ ಗ್ರಾಮ ಪಂಚಾಯ್ತಿ ಸದಸ್ಯ ಕೂಡ ಹೌದು. ಅನೇಕ ನಾಟಕಗಳಲ್ಲೂ ಇವರು ಅಭಿನಯಿಸಿದ್ದಾರೆ. ಅವರೇ ಸಿದ್ದಪ್ಪ ಮೂಗಪ್ಪ ಕುಂಬಾರ (41). ಇವರು ತಾಲೂಕಿನ ಹೆಬ್ಬಳ್ಳಿ ಗ್ರಾಮದವರು. ವೃತ್ತಿಯಿಂದ ಇವರು ಗಾರೆ ಕೆಲಸದ ಮೇಸ್ತ್ರಿ. ಗ್ರಾಮ ಪಂಚಾಯ್ತಿ ಸದಸ್ಯರಾಗಿ ಕೂಡ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಸಿದ್ದಪ್ಪ ಅವರು ‘ರಾಮ ರಾಜ್ಯದಲ್ಲಿ ಶೀಲ ಸಮಾಧಿ’, ‘ಸಿಡಿದೆದ್ದ ಶಿವಶಕ್ತಿ’, ‘ಶಿವ ಧರಿಸಿದ ಸರ್ಪ’, ‘ಕುರುಕ್ಷೇತ್ರ’, ಜನಮೆಚ್ಚಿದ ನಾಯಕ ಎಂಬ ನಾಟಕಗಳಲ್ಲಿ ಹಾಸ್ಯಭರಿತ ಪಾತ್ರಗಳನ್ನು ಮಾಡಿದ್ದರು.
ಈ ಆಧಾರದ ಮೇಲೆ ಸಿದ್ದಪ್ಪ ಕಾಮಿಡಿ ಕಿಲಾಡಿಗಳು ಆಡಿಶನ್ ಗೆ ಹೋಗಿ ಅಲ್ಲಿ ಸೆಲೆಕ್ಟ್ ಆಗದೇ ವಾಪಸ್ ಬಂದಿದ್ದಾರೆ. ಏಕೆಂದರೆ ಅಲ್ಲಿ ಟಿಕ್ ಟಾಕ್ ಹಾಗೂ ಲೈಕ್ ಆ್ಯಪ್ ನಲ್ಲಿರುವಂತ ವೀಡಿಯೋಗಳ ಐಡಿ ಕೊಡಿ ಎಂದು ಕೇಳಿದಾಗ, ಸಿದ್ದಪ್ಪ ಅವರ ಬಳಿ ಆತರಹದ ಯಾವುದೇ ಐಡಿಗಳು ಇರಲಿಲ್ಲ. ಹೀಗಾಗಿ ಅವರು ಕಾಮಿಡಿ ಕಿಲಾಡಿ ಕಾರ್ಯಕ್ರಮಕ್ಕೆ ಸೆಲಕ್ಟ್ ಆಗದೇ ವಾಪಸ್ ಬಂದಿದ್ದರು. ಅಲ್ಲಿಂದ ಬಂದ ನಂತರ ಲೈಕ್ ಐಡಿ ಮಾಡಿ ವೀಡಿಯೋಗಳನ್ನು ಮಾಡಲು ಪ್ರಾರಂಭಿಸಿದರು.
ಈಗ ಎರಡು ತಿಂಗಳ ಹಿಂದೆ ಟಿಕ್ ಟಾಕ್ ಬಳಸುತ್ತಿರುವ ಸಿದ್ದಪ್ಪ ಇಷ್ಟು ಕಡಿಮೆ ಅವಧಿಯಲ್ಲಿ 1.5 ಕೋಟಿ ಫಾಲೋವರ್ ಗಳನ್ನು ಗಳಿಸಿದ್ದಾರೆ. 2 ಮಿಲಿಯನ್ ಲೈಕ್ಸ್ ಗಳನ್ನು ಸಿದ್ದಪ್ಪ ಹೊಂದಿದ್ದಾರೆ. ಆ ಮೂಲಕ ಇದೀಗ ಸಿದ್ದಪ್ಪ ಟಿಕ್ ಟಾಕ್ ಸ್ಟಾರ್ ಎನಿಸಿಕೊಂಡಿದ್ದಾರೆ.
ಟಿಕ್ ಟಾಕ್ ಬಳಸುವ ಅನೇಕರು ಹಾಗೂ ರಾಜ್ಯದ ವಿವಿಧ ಭಾಗಗಳ ಕಲಾವಿದರು ಹೆಬ್ಬಳ್ಳಿಗೆ ಬಂದು ಇವರ ಜೊತೆ ಟಿಕ್ ಟಾಕ್ ಮಾಡಿಕೊಂಡು ಹೋಗುತ್ತಿದ್ದಾರೆ. ಟಿಕ್ ಟಾಕ್ ಮೂಲಕ ಸಿದ್ದಪ್ಪ ಅವರ ಕಲೆ ನೋಡಿರುವ ಅನೇಕ ಸಂಘಟನೆಯವರು ಇವರಿಗೆ ಸನ್ಮಾನ ಮಾಡಲು ಕೂಡ ಕರೆಯುತ್ತಿದ್ದಾರೆ.
ನಾಟಕ ಕಲೆ ಹಾಗೂ ಅಭಿನಯದ ಕಲೆ ಹೊಂದಿರುವ ಸಿದ್ದಪ್ಪ ಅವರಿಗೆ ಸಿನಿಮಾದಲ್ಲಿ ನಟನೆ ಮಾಡುವ ಆಸಕ್ತಿ ಇದೆ. ಹೀಗಾಗಿಯೇ ಟಿಕ್ ಟಾಕ್ ನ್ನು ಬಳಕೆ ಮಾಡಿಕೊಂಡು ಕಡಿಮೆ ಅವಧಿಯಲ್ಲಿ ಒಂದೂವರೆ ಕೋಟಿ ಫಾಲೋವರ್ ಗಳನ್ನು ಹೊಂದಿದ್ದಾರೆ. ಇವರು ಈ ಕಲೆಗೆ ಬೇಗ ವೇದಿಕೆ ಸಿಗಲಿ ಎಂಬುದೇ ನಮ್ಮ ಆಶಯ.