ಈತನೇ ನಿಜವಾದ ಗೋ ಪ್ರೇಮಿ ಎಂದ ನೆಟ್ಟಿಗರು!
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ನಗರದ ಹೊರವಲಯದ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾಲು ಮುರಿದುಕೊಂಡು ಅನಾಥವಾಗಿ ಬಿದ್ದಿದ್ದ ಕರುವಿನ ನೆರವಿಗೆ ಧಾವಿಸಿ, ಸೂಕ್ತ ಚಿಕಿತ್ಸೆ ನೀಡಿ ಯುವಕನೋರ್ವ ಮಾದರಿ ಕೆಲಸ ಮಾಡಿ ಕರಾವಳಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಜ.13ರಂದು ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಅಪರಿಚಿತ ವಾಹನವೊಂದು ಕರುವೊಂದಕ್ಕೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿತ್ತು. ಈ ಅಪಘಾತದಲ್ಲಿ ಪುಟ್ಟ ಕರುವಿನ ಕಾಲಿಗೆ ಗಂಭೀರ ಗಾಯವಾಗಿ, ನೋವಿನಿಂದ ಒದ್ದಾಡುತ್ತಿತ್ತು. ಈ ವೇಳೆ ತಕ್ಷಣ ನೆರವಿಗೆ ಧಾವಿಸಿ ಬಂದ ಕಡೆಶಿವಾಲಯದ ಗೌತಮ್ ಕುಲಾಲ್ ಎಂಬವರು ತಮ್ಮ ವಾಹನದಲ್ಲಿ ಕರುವನ್ನು ಪಡೀಲ್ ಎಂಬಲ್ಲಿರುವ ಪಶು ವೈದ್ಯಕೀಯ ಕೇಂದ್ರಕ್ಕೆ ಕೊಂಡೊಯ್ದು ಸೂಕ್ತ ಸಮಯದಲ್ಲಿ ವೈದ್ಯರ ಸಹಾಯದಿಂದ ಚಿಕಿತ್ಸೆಯನ್ನು ಕೊಡಿಸಿದ್ದರು. ಪರಿಣಾಮ, ಕಾಲು ನೋವಿನಿಂದ ನಡೆಯಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಕರು ಚೇತರಿಸಿಕೊಂಡಿದೆ.
ವೈದ್ಯರ ಸಲಹಯಂತೆ ಕರುವಿಗೆ ಚಿಕಿತ್ಸೆಯನ್ನು ಮುಂದುವರೆಸಿರುವ ಗೋಪ್ರೇಮಿ ಗೌತಮ್, ತಮ್ಮ ಮನೆಗೆ ಕರುವನ್ನು ಕರೆತಂದಿದ್ದು ಗೋಸೇವೆ ಮಾಡುತ್ತಿದ್ದಾರೆ. ಗಾಯಗೊಂಡಿರುವ ಕರುವಿಗೆ ಒಂದು ತಿಂಗಳುಗಳ ಕಾಲ ಚಿಕಿತ್ಸೆಯ ಅನಿವಾರ್ಯ ಇದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.
ಸದ್ಯ ಬಂಟ್ವಾಳದ ಕಡೇಶಿವಾಲಯದ ಗೋಪ್ರೇಮಿ ಗೌತಮ್ ಕುಲಾಲ್ ತೊಕ್ಕೊಟ್ಟಿನಲ್ಲಿ ತನಿಯಾ ಮೋಟರ್ಸ್ ಎಂಬ ದ್ವಿಚಕ್ರ ವಾಹನಗಳ ಶೋರೂಮ್ ಮಾಲಕರಾಗಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದ್ದು, ಇದುವೇ ನಿಜವಾದ ಗೋಪ್ರೇಮ ಎನ್ನುವ ಹೊಗಳಿಕೆಯ ಮಾತುಗಳು ಕೇಳಿ ಬಂದಿದ್ದು, ಇವರ ಮಾನವೀಯ ಕಾರ್ಯಕ್ಕೆ ಕರಾವಳಿಯ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.