ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ನರ ದೌರ್ಬಲ್ಯದಿಂದ ಬಳಲುತ್ತಿರುವ ಬೆಳ್ತಂಗಡಿಯ ಬೇಬಿ ಕುಲಾಲರ ಎರಡು ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಕುಲಾಲ ಚಾವಡಿ ವಾಟ್ಸಪ್ ಬಳಗದಿಂದ ಆರ್ಥಿಕ ನೆರವು ನೀಡಲಾಯಿತು.
ಧನ ಸಹಾಯವಾಗಿ ಕೂಡಿ ಬಂದ 16150 ರೂಪಾಯಯನ್ನು ಕಾರ್ಕಳ ಕುಲಾಲ ಸಂಘದಲ್ಲಿ ಅಧ್ಯಕ್ಷ ಶ್ರೀ ಭೋಜ ಕುಲಾಲ್ ಬೇಳಂಜೆಯವರು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭ ಚಾವಡಿ ಸದಸ್ಯರುಗಳಾದ ಸುಧೀರ್ ಬಂಗೇರ,ಸತೀಶ್ ಕಜ್ಜೋಡಿ, ವಿಜೇಶ್ ಕುಲಾಲ್, ದೇವಪ್ಪ ಕುಲಾಲ್, ವಿನಯಾ ಕುಲಾಲ್, ವಸಂತ್ ಎರ್ಲಪಾಡಿ, ತಿಮ್ಮಪ್ಪ ಕುಲಾಲ್, ಹೃದಯ್ ಕುಲಾಲ್, ಸಂದೇಶ್ ಕುಲಾಲ್, ವಿಶ್ವನಾಥ್ ಕುಲಾಲ್, ಸಂತೋಷ್ ಕುಲಾಲ್ ಅಜೆಕಾರ್ ಹಾಗೂ ಸಂತೋಷ್ ಕುಲಾಲ್ ಪದವು ಉಪಸ್ಥಿತರಿದ್ದರು.
ಬಾಲ್ಯದಲ್ಲಿ ಎಲ್ಲಾ ಮಕ್ಕಳಂತೆ ಸಹಜವಾಗಿ ಬೆಳವಣಿಗೆ ಹೊಂದಿದ್ದ ದೇಹದ ಅವಯವಗಳು ಪ್ರೌಢವಸ್ಥೆಯ ಹಂತದಲ್ಲಿ ನಿಶಕ್ತಗೊಂಡು ಶಾರೀರಿಕ ನ್ಯೂನತೆ ಹೊಂದಿದ ಆ ಎರಡು ಮಕ್ಕಳು ಭವಿಷ್ಯದಲ್ಲಿ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸೂಕ್ತ ವೈದ್ಯಕೀಯ ಚಿಕಿತ್ಸೆಯ ಆಗತ್ಯವಿತ್ತು. ಆದರೆ ಗೇರು ಬೀಜ ಕಂಪೆನಿಯಲ್ಲಿ ದುಡಿಯುವ ಬೇಬಿಯವರಿಗೆ ಮಕ್ಕಳ ಚಿಕಿತ್ಸೆಗೆ ಅವಶ್ಯ ಇದ್ದಷ್ಟು ಹಣ ಹೊಂದಿಸುವುದೇ ದೊಡ್ಡ ಚಿಂತೆಯಾಗಿತ್ತು.
ಮಗನೇನೋ ತಕ್ಕ ಮಟ್ಟಿಗೆ ಆರೋಗ್ಯವಂತನಾದರೂ ಮಗಳ ಪರಿಸ್ಥಿತಿ ತೀರಾ ಬಿಗಡಾಯಿಸಿತ್ತು. ಹೆತ್ತು ಹೊತ್ತು ಸಾಕಿ ಸಲಹಿದ ಮಗಳು ಮದುವಣಗಿತ್ತಿಯಾಗಿ ಶೃಂಗಾರಗೊಂಡು ಹಸೆಮಣೆಯೇರುವ ಚಂದವನ್ನು ಕಣ್ತುಂಬಿಕೊಂಡು ಎರಡು ಕಾಳು ಅಕ್ಷತೆ ಏರಿಸಿ ಹರಸಲು ಕಾತರದಲ್ಲಿದ್ದ ಆ ಹೆಂಗರುಳು ಈಗ ಮಗಳ ಸದ್ಯದ ದುಸ್ಥಿತಿಗೆ ಮತಿ ಭ್ರಮಣಗೊಂಡಂತಿತ್ತು. ಬಾಳ ಮುಸ್ಸಂಜೆಯಲಿ ತನಗೆ ಆಸರೆಯಾಗಬೇಕಿದ್ದ ಹದಿ ಹರೆಯದ ಮಗಳಿಗೆ ತಾನೇ ಆಸರೆಯಾಗಿ ನಿಲ್ಲಬೇಕಾದ ತನ್ನ ದುರಾದೃಷ್ಟಕ್ಕೆ ಹಳಿದುಕೊಳ್ಳುತ್ತಾ ಕನಿಷ್ಠ ಪಕ್ಷ ಮಗಳ ಆರೋಗ್ಯ ಆದರೂ ಸುಧಾರಿಸಲಿ ಎನ್ನುವ ಆಶಾವಾದ ಹೊತ್ತು ದಾನಿಗಳ ಮೊರೆ ಹೊಕ್ಕರು. ಮಗಳ ನಿತ್ಯದ ಆರೈಕೆಗಾಗಿ ತನ್ನ ದುಡಿಮೆಯನ್ನು ನಿಲ್ಲಿಸಿ ತನ್ನ ಸಹೋದರನ ಮನೆಯಲ್ಲಿ ಆಶ್ರಯ ಪಡೆದಿರುವ ಬೇಬಿ ಕುಲಾಲರ ಕುಟುಂಬದ ದುಸ್ಥಿತಿಯ ಬಗ್ಗೆ ಚಾವಡಿ ಬಳಗಕ್ಕೆ ಮಾಹಿತಿ ತಿಳಿದು ಧನ ಸಂಗ್ರಹದ ಬಗ್ಗೆ ಮನವಿ ಮಾಡಿತ್ತು.
ಬರಹ: ಸತೀಶ್ ಕಜ್ಜೋಡಿ