ಬಂಟ್ವಾಳ( ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇಟಲಿಯಲ್ಲಿ ನಡೆದ 19th winter deaflympics-2019 ನಲ್ಲಿ ಮಹಿಳಾ ಚೆಸ್ ಪಂದ್ಯದಲ್ಲಿ ಭಾರತ ತಂಡದ ಪರ ಆಡಲು ಸ್ಥಾನ ಪಡೆದಿದ್ದ ಬಂಟ್ವಾಳದ ಯಶಸ್ವಿ ಕುಲಾಲ್ ಅಮೋಘ ಪ್ರದರ್ಶನ ನೀಡುವ ಮೂಲಕ ವಿಶ್ವದ ಗಮನಸೆಳೆದಿದ್ದಾರೆ.
ಇಟಲಿಯ ವಾಲ್ಟೇಲಿನ ವಾಲ್ಚಿಯವೆನ್ನಾ ಎಂಬಲ್ಲಿ ನಡೆದ ಚೆಸ್ ಮಹಿಳೆಯರ ತಂಡದ ಅಂತಿಮ ಸುತ್ತಿನ ಪಂದ್ಯದಲ್ಲಿ ಯಶಸ್ವಿ ಅವರು ತೃತೀಯ ಸ್ಥಾನ ಪಡೆದಿದ್ದಾರೆ. ಪಂದ್ಯದ ಎರಡನೇ ಬೋರ್ಡ್ ಆಟಗಾರರಾಗಿದ್ದ ಯಶಸ್ವಿ ಅವರು ಎಲ್ಲಾ ಸುತ್ತಿನಲ್ಲೂ ಉತ್ತಮ ಪಾಯಿಂಟ್ ಕಲೆ ಹಾಕಿದರು. ಪಂದ್ಯದ ಆರಂಭಿಕ ಹಾಗೂ ಇತರ ಎರಡು ಬೋರ್ಡ್ ನ ಆಟಗಾರರು ನಿರೀಕ್ಷಿತ ಪಾಯಿಂಟ್ ಗಳಿಸಲು ವಿಫಲರಾದ ಕಾರಣ ಪಂದ್ಯದಲ್ಲಿ ಭಾರತ ಸ್ಥಾನ ಪಡೆಯುವಲ್ಲಿ ವಿಫಲವಾಯಿತು.
ಪುತ್ತೂರು ಜೀನಿಯಸ್ ಚೆಸ್ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ಯಶಸ್ವಿ ಅವರು ಈ ಹಿಂದೆ ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ಶ್ರವಣಶಕ್ತಿಯ ಕೊರತೆ ಇರುವವರಿಗಾಗಿ ನಡೆದ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನ ಮಹಿಳಾ ವಿಭಾಗದಲ್ಲಿ ಭಾಗವಹಿಸಿ ಕಂಚಿನ ಪದಕ ಗಳಿಸಿದ್ದರು. ಬಂಟ್ವಾಳ ಎಸ್ವಿಎಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಲ್ಯಾಬ್ ಅಸಿಸ್ಟೆಂಟ್ ತಿಮ್ಮಪ್ಪ ಮೂಲ್ಯ ಮತ್ತು ಬಂಟ್ವಾಳ ತಾಲೂಕಿನ ಸರಕಾರಿ ಶಾಲಾ ಶಿಕ್ಷಕಿ ಯಶೋದಾ ದಂಪತಿಯ ಇಬ್ಬರು ಪುತ್ರಿಯರಲ್ಲಿ ಯಶಸ್ವಿ ಎರಡನೆಯವಳು. ಹುಟ್ಟಿದಂದಿನಿಂದಲೇ ಶ್ರವಣ ಸಾಮರ್ಥ್ಯ ಹೊಂದಿರದ ಈಕೆ ಮಾತನಾಡಲು ತಡವರಿಸಿದರೂ ಕಲಿಕೆ, ಗ್ರಹಿಕಾ ಸಾಮರ್ಥ್ಯದಲ್ಲಿ ಮುಂದಿದ್ದರು.