ಬೆಳ್ತಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಸೌರ ಶಕ್ತಿಯನ್ನು ಬಳಸಿ ಮಣ್ಣಿನ ಮಡಕೆ ಮಾಡುವ ಯಂತ್ರದ ಪ್ರಾತ್ಯಕ್ಷಿಕೆಯನ್ನು ಧರ್ಮಸ್ಥಳದಲ್ಲಿರುವ ಸೆಲ್ಕೋ ಸೋಲಾರ್ ಎನರ್ಜಿ ಸೆಂಟರ್ ನಲ್ಲಿ ಡಿಸೆಂಬರ್ 02ರಂದು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಇದರ ಅಧ್ಯಕ್ಷರೂ, ಕರ್ನಾಟಕ ರಾಜ್ಯ ಕುಲಾಲ ಯಾನೆ ಕುಂಬಾರರ ಯುವ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಹರೀಶ್ ಕಾರಿಂಜ ಇವರು ಉದ್ಘಾಟನೆ ಮಾಡಿದರು.
ಮಡಕೆ ಮಾಡುವ ಆಸಕ್ತ ಯುವಕರಿಗೆ ಹಾಗು ಸಾಂಪ್ರದಾಯಿಕವಾಗಿ ಮಡಕೆ ಮಾಡುವ ಕುಲ ಕಸುಬುದಾರರು ಸೆಲ್ಕೋ ಸೋಲರ್ ಸಂಸ್ಥೆಯವರು ನೂತನವಾಗಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಯಂತ್ರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಮುದಾಯದ ಕುಲ ಕಸುಬುದಾರರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಶ್ರೀಹರಿ ಇವರು ಮಾತನಾಡಿ ಕುಂಬಾರಿಕೆ ಕೆಲಸ ಮಾಡುವ ಕುಲಕಸುಬುದಾರರಿಗೆ ಯೋಜನೆಯು ಹಿಂದಿನಿಂದಲೂ ಪ್ರೋತ್ಸಾಸುತ್ತಿದ್ದು, ಮುಂದೆ ಈ ಯಾಂತ್ರೀಕೃತ ಮಡಕೆ ಮಾಡುವ ಯಂತ್ರವನ್ನು ಬಳಸಿ ಸಾಂಪ್ರದಾಯಿಕ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆಯಿತ್ತರು. ಕುಲಾಲ ಸಂಘದ ನಿರ್ದೇಶಕರಾದ ಪುಷ್ಪರಾಜ್, ಸೆಲ್ಕೋ ಸಂಸ್ಥೆಯಿಂದ ಕಿಶೋರ್ ಮಣಿಪಾಲ,ಸುಹಾಸ್ ಶೆಣೈ ಹಾಗು ಸೆಲ್ಕೋ ಸೋಲಾರ್ ಸಂಸ್ಥೆಯ ಬೆಳ್ತಂಗಡಿ ಶಾಖಾ ಪ್ರಬಂದಕರಾದ ನವೀನ್ ನೆರಿಯ ಉಪಸ್ಥಿತರಿದ್ದರು. ಮಡಕೆ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಸೇಸಪ್ಪ ಕುಂಬಾರ ಪಟ್ರಮೆ ಇವರು ನೆರವೇರಿಸಿದರು.