ಪುತ್ತೂರು : ಇಲ್ಲಿಯ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ರೋಹಿಣಾಕ್ಷ ಇವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಯನ್ನು ನೀಡಿದೆ.
ಇವರು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಆನಂದ ಕೋಡಿಂಬಳ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ ನಾಡು – ರಾಷ್ಟ್ರ ಪರಿಕಲ್ಪನೆ : ಕನ್ನಡ ಕವಿತೆಗಳ ವಾಗ್ವಾದದ ತಾತ್ವಿಕತೆ’ ಎಂಬ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಅತ್ಯುನ್ನತ ಶ್ರೇಣಿಯೊಂದಿಗೆ ಪಿಎಚ್.ಡಿ ಪದವಿಯನ್ನು ಘೋಷಿಸಿದೆ. ಕನ್ನಡ ಕವಿತೆಗಳಲ್ಲಿ ಪ್ರಕಟವಾದ ಭಾರತೀಯ ರಾಷ್ಟ್ರೀಯತೆಯ ವಿಶಿಷ್ಟ ಸ್ವರೂಪದ ಕುರಿತಾಗಿ ನಡೆಸಿದ ಅಧ್ಯಯನ ಇದಾಗಿದೆ.
ರೋಹಿಣಾಕ್ಷ ಅವರು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಶಿವಪ್ಪ ಮೂಲ್ಯ ಹಾಗೂ ರುಕ್ಮಿಣಿ ದಂಪತಿಯ ಮಗನಾಗಿದ್ದು ಮಂಗಳೂರು ವಿ.ವಿ ಯಿಂದ ಕನ್ನಡ ಎಂ.ಎ ಪದವಿಯನ್ನು ಎರಡನೇ ರ್ಯಾಂಕ್ ನೊಂದಿಗೆ ಪೂರೈಸಿರುತ್ತಾರೆ. ಇವರು ಕನ್ನಡ ವಿವಿಯಿಂದ ಎಂ.ಫಿಲ್ ಪದವಿಯನ್ನೂ, ರಾಜ್ಯ ಮುಕ್ತ ವಿವಿಯಿಂದ ಎಂಸಿಜೆ ಪದವಿಯನ್ನೂ ಪಡೆದಿರುತ್ತಾರೆ.
ವಿಶ್ವವಿದ್ಯಾಲಯ ಅನುದಾನ ಆಯೋಗ ನವದೆಹಲಿ ನಡೆಸುವ ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನೂ ತೇರ್ಗಡೆಗೊಳಿಸಿರುತ್ತಾರೆ. ಇವರ ಅನೇಕ ಸಂಶೋಧನಾ ಬರಹಗಳು ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದು ಅನೇಕ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಇವರು ಪ್ರಸ್ತುತ ಎಬಿವಿಪಿಯ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿರುತ್ತಾರೆ.