ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ವಿಶ್ವ ಹಿಂದೂ ಪರಿಷದ್ ನಾಯಕ ಲೋಹಿತ್ ಪಣೋಲಿಬೈಲ್ ಮತ್ತು ಸಾಮಾಜಿಕ ಸೇವಾಕಾರ್ಯಕರ್ತ ರವಿಚಂದ್ರ ನಾಯ್ಕ್ ನಗ್ರಿ ಇವರ ಮುಂದಾಳತ್ವದಲ್ಲಿ ಸಹೃದಯಿ ದಾನಿಗಳ ಸಹಕಾರ ಮತ್ತು ಉತ್ಸಾಹಿ ಯುವಕರ ಪರಿಶ್ರಮದಿಂದ ಮೀನಾಕ್ಷಿ ಗೋವಿಂದ ಕುಲಾಲ್ ನಗ್ರಿ ಇವರಿಗೆ ಸುಮಾರು 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ “ಕಾಮಧೇನು ನಿಲಯ” ಮನೆಯನ್ನು, ನಾಳೆ ಡಿ.1 ರಂದು ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ಮಾಡಿ ಸಜ್ಜನ ಬಂಧುಗಳ ಸಮ್ಮುಖದಲ್ಲಿ ಹಸ್ತಾಂತರಿಸುವ ಶುಭ ಸಮಾರಂಭ ನಡೆಯಲಿದೆ.
ಸಮಾಜಮುಖಿ ಚಿಂತನೆಯ ಈ ಮಹತ್ಕಾರ್ಯದಲ್ಲಿ ಬಂಟ್ವಾಳ ಕುಲಾಲ ಯುವ ವೇದಿಕೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಸಜಿಪ ಜನಸೇವಾ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಬಂಟ್ವಾಳ, ಕುಲಾಲ ಕುಂಬಾರರ ವೇದಿಕೆ ಪಣೋಲಿಬೈಲ್ , ಸಜಿಪ ಪ್ರೀಮಿಯರ್ ಲೀಗ್ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಶ್ರೀ ಶಾರದಾ ಮಂದಿರ ನಗ್ರಿ, ವಿಶ್ವಹಿಂದು ಪರಿಷತ್ ಬಜರಂಗದಳ ಹನುಮಾನ್ ಶಾಖೆ ಸಜಿಪಮೂಡ ಬೊಳ್ಳಾಯಿ, ಶ್ರೀಕರ ಸ್ವಸಹಾಯ ಸಂಘ ಬೇಂಕ್ಯ, ಸೇವಾ ಸಂಘ ಮಂಗಳೂರು, ಸ್ನೇಹಮಿಲನ ಕಲ್ಲಡ್ಕ , ವಿದ್ಯಾದಾಯಿನಿ ಸ್ವಸಹಾಯ ಸಂಘ ನಗ್ರಿ ಸಜಿಪಮೂಡ ಹಾಗೂ ಊರ ಪರವೂರ ಹಲವಾರು ಸಹೃದಯಿ ದಾನಿಗಳು ನಿಸ್ವಾರ್ಥವಾಗಿ ತನು ಮನ ಧನ ಮತ್ತು ಶ್ರಮದಾನದ ಮೂಲಕ ಸಹಕಾರ ನೀಡಿರುತ್ತಾರೆ.
ಬಂಟ್ವಾಳ ತಾಲೂಕು ಸಜೀಪ ಮೂಡ ಗ್ರಾಮದ ನಗ್ರಿ ನಿವಾಸಿಯಾಗಿರುವ ಮೀನಾಕ್ಷೀ ಅವರ ಪತಿ ಗೋವಿಂದ ಕುಲಾಲ್ ಪಾರ್ಶ್ವವಾಯುವಿಗೆ ತುತ್ತಾಗಿ ಮೂಲೆ ಸೇರಿ ಅನೇಕ ವರ್ಷಗಳೇ ಆಗಿದ್ದು, ಅವರ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ದುಡಿದ ಹಣ ಅವರ ಔಷಧಿಗೆ ಖರ್ಚಾಗುತ್ತಿದ್ದು, ಪ್ರಾಯಕ್ಕೆ ಬಂದ ಇಬ್ಬರು ಹೆಣ್ಣು ಮಕ್ಕಳಿಗೆ ವಿವಾಹ ಮಾಡಿಸುವ ಜವಾಬ್ದಾರಿ ಕೂಡ ಇದೆ. ಈಗಾಗಲೇ ಹೆಣ್ಣು ಮಕ್ಕಳ ಮದುವೆಗೆ ಮುಂಬಯಿಯ ದಾನಿಯೊಬ್ಬರು ಸಹಾಯ ಮಾಡುವ ಭರವಸೆ ನೀಡಿದ್ದಾರೆ.