ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಮುಂಡ್ಕೂರು ಮುಲ್ಲಡ್ಕ ಗ್ರಾಮ ಪಂಚಾಯತ್ ಚುನಾವಣೆಗೆ ನಡೆದ ಉಪ ಚುನಾವಣೆಯಲ್ಲಿ ನಾನಿಲ್ತಾರಿನ ಸೂರಜ್ ಕುಲಾಲ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಯಗಳಿಸಿರುತ್ತಾರೆ.
ಹಿಂದಿನ ಪಂಚಾಯತ್ ಸದಸ್ಯರಾದ ಸತೀಶ್ ಮೂಲ್ಯ (ಕಾಂಗ್ರೆಸ್ ಬೆಂಬಲಿತರು) ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ನ ೧೨ರಂದು ಚುನಾವಣೆ ನಡೆದಿತ್ತು. ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸಂತೋಷ್ ಕುಲಾಲ್ ಸ್ಪರ್ಧಿಸಿ ಸೋಲುಂಡಿದ್ದಾರೆ.
ಅತ್ಯಂತ ಎಳೆಯ ವಯಸ್ಸಿನ ಸೂರಜ್ ಕುಲಾಲ್ ಇವರು ಮುಲ್ಲಡ್ಕ ಗ್ರಾಮದ ನಾನಿಲ್ತಾರು ಎಂಬಲ್ಲಿ ಶ್ರೀ ಲಕ್ಷ್ಮಣ ಸಾಲಿಯಾನ್ ಹಾಗೂ ಶ್ರೀಮತಿ ಜಯಂತಿ ಇವರ ಹಿರಿ ಪುತ್ರ. ವೃತ್ತಿಯಲ್ಲಿ ಫೈರ್ ಲೈನ್ ಮೇಲ್ವಿಚಾರಕರಾಗಿರುವ ಸೂರಜ್ ಕುಲಾಲ್ ಇವರು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡವರು. ಜತೆಗೆ ನೃತ್ಯ ತರಬೇತಿ ತರಗತಿ ನಡೆಸುತ್ತಿದ್ದು ತನ್ನದೇ ಆದ ನೃತ್ಯ ತಂಡವನ್ನು ಕಟ್ಟಿಕೊಂಡು ಹಲವಾರು ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. ಇವರು ಚೆಂಡೆ, ಯಕ್ಷಗಾನ ಭಜನಾ ಕಾರ್ಯಕ್ರಮಗಳಲ್ಲೂ ಆಸಕ್ತಿ ಹೊಂದಿದ್ದು ಎಲ್ಲಾ ರಂಗಗಳಲ್ಲಿಯೂ ತಮ್ಮ ಫ್ರೌಡಿಮೆಯನ್ನು ಒರೆಗೆ ಹಚ್ವಿ ಎಲ್ಲದರಲ್ಲೂ ಸೈ ಅನಿಸಿಕೊಂಡಿದ್ದಾರೆ. ಸದಾ ನಗು ನಗುತ್ತಾ ವ್ಯವಹರಿಸುವ ಇವರ ರಾಜಕೀಯ ಪ್ರವೇಶ ಇವರ ಅಪ್ತ ವಲಯದಲ್ಲಿ ಹಾಗೂ ಸ್ಥಳೀಯರಲ್ಲಿ ಹೊಸ ಹುರುಪು ಮೂಡಿಸಿದೆ.