ಹಸೆಮಣೆಯಲ್ಲಿ ಆದರ್ಶ ಮೆರೆದ ರೋಹಿತ್ ಕುಲಾಲ್
ಕಡಬ(ಕುಲಾಲ ವರ್ಲ್ಡ್ ಡಾಟ್ ಕಾಮ್): ಹಸೆಮಣೆ ಏರಿದ ನವ ದಂಪತಿಗೆ ಬಂಧು ಮಿತ್ರರು ನಾನಾ ಬಗೆಯ ಉಡುಗೊರೆ ನೀಡಿ ಶುಭಾಷಯ ಕೋರುವುದು ಎಲ್ಲೆಡೆ ನಡೆದು ಬಂದ ವಾಡಿಕೆ. ಇಲ್ಲೊಬ್ಬರು ಈ ವಿಚಾರದಲ್ಲಿ ಅಪೂರ್ವವಾದ ಆದರ್ಶ ಮೆರೆದಿದ್ದಾರೆ. ತಾನು ಮದುವೆ ಮಂಟಪದಲ್ಲಿ ಉಡುಗೊರೆ ಸ್ವೀಕರಿಸುವ ಬದಲು ಸ್ವತಃ ಬಡ ವ್ಯಕ್ತಿಯೊಬ್ಬರಿಗೆ ತನ್ನ ಮದುವೆಯ ಹೆಸರಿನಲ್ಲಿ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ. ಅವರೇ ಕಡಬ ತಾಲೂಕು ರಾಮಕುಂಜ ಗ್ರಾಮದ ಬೊಳ್ಳೆರೋಡಿ ನಿವಾಸಿ ಚೆನ್ನಪ್ಪ ಕುಲಾಲ್ ಮತ್ತು ಹೇಮಾವತಿ ದಂಪತಿಗಳ ಪುತ್ರ ರೋಹಿತ್ ಕುಲಾಲ್.
ಎಂಟು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ ರೋಹಿತ್, ವೇಣೂರು ಠಾಣೆಯಲ್ಲಿ ಕೆಲಸ ಮಾಡಿ ಮೂರು ತಿಂಗಳ ಹಿಂದಷ್ಟೇ ಪುತ್ತೂರು ಟ್ರಾಫಿಕ್ ಠಾಣೆಗೆ ವರ್ಗವಾಗಿ ಬಂದಿದ್ದಾರೆ. ಆಡಂಬರದ ಮದುವೆ ನನಗೆ ಇಷ್ಟವಿಲ್ಲ. ಯದ್ವಾತದ್ವ ಖರ್ಚು ಮಾಡಿ ಮದುವೆಯಾಗುವಾಗ ಬದುಕಲ್ಲಿ ಏನೂ ಇಲ್ಲದವರ ನೆನಪು ಬರುತ್ತದೆ. ಅದಕ್ಕಾಗಿ ನನ್ನ ಮದುವೆಯ ಹೆಸರಿನಲ್ಲಿ ಯಾರಿಗಾದರೂ ಬಡವರಿಗೆ ನೆರವಾಗುವ ಆಸೆ ಇಟ್ಟುಕೊಂಡಿದ್ದೆ. ಆಗ ನನಗೆ ಯುವ ಬ್ರಿಗೇಡ್ ನ ಮುಖಂಡರಾದ ಶಿಶಿಲದ ಕಾರ್ತಿಕ್ ನೆರವಾದರು ಎಂದು ರೋಹಿತ್ ಹೇಳುತ್ತಾರೆ. ನವೆಂಬರ್ ಮೂರರರಂದು ಉಪ್ಪಿನಂಗಡಿಯ ಶಕ್ತಿ ಸಭಾಭವನದಲ್ಲಿ ರೋಹಿತ್ ಕುಲಾಲ್ ಮತ್ತು ಅಮಿತಾ ಅವರ ಮಾಡುವೆ ನಡೆಯಿತು. ಈ ಸಂದರ್ಭ ಬಳ್ಪ ಸಮೀಪದ ಕೇನ್ಯ ಗ್ರಾಮದ ಲಿಂಗು ಎಂಬ ಕಣ್ಣು ಕಾಣದ ವಿಶೇಷ ಚೇತನರನ್ನು ಯುವ ಬ್ರಿಗೇಡ್ ನವರು ಕರೆ ತಂದಿದ್ದರು. ಇವರಿಗೆ ಮದುವೆ ಮಂಟಪದಲ್ಲಿ 25,000 ರೂ. ಗಳನ್ನು ನೀಡಿದ್ದು, ಇದಲ್ಲದೆ ಮನೆ ಕಟ್ಟಲು ಬೇಕಾದ ಹೆಂಚು ಮತ್ತಿತರ ಸಾಮಗ್ರಿಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಕಣ್ಣು ಕಾಣದ ಏಕಾಂಗಿ :
ಲಿಂಗು ಅವರು ಏಕಾಂಗಿಯಾಗಿ ವಾಸವಾಗಿದ್ದಾರೆ. ಅವರಿಗೆ ಕಣ್ಣು ಕಾಣುವುದಿಲ್ಲ, ಕಿವಿ ಕೇಳಿಸುವುದಿಲ್ಲ. ಬಂಧು ಮಿತ್ರರು ಯಾರೂ ಇವರ ಜೊತೆಗಿಲ್ಲ. ಒಬ್ಬಂಟಿ ಜೀವನ. ವಾಸಿಸಲು ಮನೆಯೂ ಇಲ್ಲದೆ ಹರುಕುಮುರುಕು ಗುಡಿಸಲಿನಲ್ಲಿ ದಿನ ದೂಡುತ್ತಿದ್ದಾರೆ. ಯುವ ಬ್ರಿಗೇಡ್ ನ ಸದಸ್ಯರು ಇವರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು, ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದೆ.
ಸುಧಾಕರ ಸುವರ್ಣ (ಕೃಪೆ : ವಿಜಯ ಕರ್ನಾಟಕ)