ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ. ಡಾ.ರೋಹಿಣಾಕ್ಷ ಶಿರ್ಲಾಲು, ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇದರ ಅಧ್ಯಕ್ಷ ನಾಗೇಶ್ ಕುಲಾಲ್ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿ ಜೀವನದಿಂದಲೇ ಎಬಿವಿಪಿ ಸಂಘಟನೆಯಲ್ಲಿ ಕ್ರೀಯಾಶೀಲರಾಗಿರುವ ರೋಹಿಣಾಕ್ಷ ಶಿರ್ಲಾಲ್ ಅವರು ರಾಜ್ಯ ಉಪಾಧ್ಯಕ್ಷ ಸಹಿತ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ತಾರುಣ್ಯ ಸೇವಾ ಟ್ರಸ್ಟ್ ವಿದ್ಯಾರ್ಥಿಗಳಿಗಾಗಿ ನಡೆಸುವ ವಿದ್ಯಾರ್ಥಿ ಪಥ ಸಂಪಾದಕರಾಗಿಯೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ‘ ಸಾಹಿತ್ಯ ವಿಚಾರ’ ಸಹಿತ ಹಲವು ಕೃತಿಗಳನ್ನು ರಚಿಸಿರುವ ಇವರು ವಿಜಯಕರ್ನಾಟಕ ಪತ್ರಿಕೆಯಲ್ಲಿ `ಸಂವಾದ’ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ರೋಹಿಣಾಕ್ಷ ಅವರು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಶಿವಪ್ಪ ಮೂಲ್ಯ ಹಾಗೂ ರುಕ್ಮಿಣಿ ದಂಪತಿಯ ಮಗನಾಗಿದ್ದು ಮಂಗಳೂರು ವಿ.ವಿ ಯಿಂದ ಕನ್ನಡ ಎಂ.ಎ ಪದವಿಯನ್ನು ಎರಡನೇ ರ್ಯಾಂಕ್ ನೊಂದಿಗೆ ಪೂರೈಸಿರುತ್ತಾರೆ. ಇವರು ಕನ್ನಡ ವಿವಿಯಿಂದ ಎಂ.ಫಿಲ್ ಪದವಿಯನ್ನೂ, ರಾಜ್ಯ ಮುಕ್ತ ವಿವಿಯಿಂದ ಎಂಸಿಜೆ ಪದವಿಯನ್ನೂ, ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಯನ್ನೂ ಪಡೆದಿರುತ್ತಾರೆ.
ಕಲಾಕುಂಭ ಸಾಂಸ್ಕೃತಿಕ ವೇದಿಕೆ ಮೂಲಕ ತುಳುನಾಡ ಸಂಸ್ಕೃತಿ, ಆಚಾರ, ಕಲೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಾ ಸಮಾಜ ಸೇವೆಗೈಯುತ್ತ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ನಾಗೇಶ್ ಕುಲಾಲ್ ಅವರು ಸ್ವರ್ಣ ಕುಂಭ ವಿವಿದೋದ್ದೇಶ ಸ.ಸಂ.ಸುರತ್ಕಲ್ ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದು, ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.