ಅಸಹಿಷ್ಣತೆ ಕುಲಾಲ ಮತ್ತು ಕುಂಬಾರ ಸಮುದಾಯದ ಕೆಲವು ಯುವಮನಸ್ಸುಗಳಲ್ಲೂ ಉಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎನ್ನದೇ ವಿಧಿಯಿಲ್ಲ. ದಿನೇಶ್ ಬಂಗೇರ ಇರ್ವತ್ತೂರು www.kulalworld.com ಲೋಕಾರ್ಪಣೆ ಮಾಡಿರುವುದು ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದಲೇ ಹೊರತು ಒಡೆಯುವ ಅಥವಾ ವಿಭಜಿಸುವ ಉದ್ದೇಶದಿಂದ ಅಲ್ಲ ಎನ್ನುವುದು ನನ್ನ ಅನಿಸಿಕೆ. ಕುಲಾಲ ಸಮುದಾಯವನ್ನು ಒಗ್ಗೂಡಿಸಿ ಕುಲಾಲ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವುದಲ್ಲದೇ ಅವರಿಗೆ ಜಾಗತಿಕ ಮಟ್ಟದಲ್ಲಿ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಇದು ಉಪಯುಕ್ತ ಎನ್ನುವ ಕಾರಣಕ್ಕೆ ನನ್ನನ್ನು ಗೌರವ ಸಂಪಾದಕನಾಗಬೇಕೆಂದು ಅವರು ಕೇಳಿಕೊಂಡಾಗ ಒಪ್ಪಿಕೊಂಡಿದ್ದೇನೆ.
ಆದರೆ www.kulalworld.com ಲೋಕಾರ್ಪಣೆಯಾದ ಮೇಲೆ ದಿನೇಶ್ ಬಂಗೇರ ತಮಗಾದ ಕಹಿ ಅನುಭವವನ್ನು ಹೇಳಿಕೊಂಡರು ಜೊತೆಗೆ ತಾನು ಕುಗ್ಗುವುದಿಲ್ಲ ಎನ್ನುವ ಆತ್ಮವಿಶ್ವಾಸದ ಮಾತುಗಳನ್ನೂ ಹೇಳಿದರು. ನಾವು ನಮ್ಮೊಳಗೇ ಪರಸ್ಪರ ಟೀಕಿಸಿಕೊಂಡರೆ ಉದ್ದೇಶ ಸಾಧ್ಯವೇ? ತುಸು ಯೋಚಿಸಿ. ಶತಮಾನಗಳಿಂದಲೂ ಅವಮಾನ ಸಹಿಸಿಕೊಂಡು ಬೆಳೆದ ಇತಿಹಾಸ ನಮ್ಮದು. ಈಗ ನಾವೂ ಸೆಟೆದು ನಿಲ್ಲುವ ಕಾಲ ಬಂದಿದೆ. ನಮ್ಮ ಮಕ್ಕಳು, ವೈದ್ಯರು, ಇಂಜಿನಿಯರ್, ಐಎಎಸ್, ಐಪಿಎಸ್ ಆಗುವ ಅವಕಾಶಗಳಿವೆ. ಕ್ರೀಡಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದೇವೆ, ಸಾಂಸ್ಕೃತಿಕ ಲೋಕದಲ್ಲೂ ನಮ್ಮ ಹೆಜ್ಜೆಗುರುತುಗಳಿವೆ. ಇಂಥ ಸಂದರ್ಭದಲ್ಲಿ ದಿನೇಶ್ ಬಂಗೇರ ಅವರು ಕೈಗೊಂಡಿರುವ ಸಮುದಾಯ ಕಟ್ಟುವ ಕೆಲಸದಲ್ಲಿ ನಾವೂ ಕೈಜೋಡಿಸುವ ಅಗತ್ಯವಿದೆ. ಹಾಗೆಯೇ ನೀವೂ ನಿಮಗೆ ಸಾಮರ್ಥ್ಯವಿದ್ದರೆ ಇಂಥದ್ದೇ ಕೆಲಸವನ್ನು ಬೇರೆ ಬೇರೆ ಆಯಾಮದಲ್ಲಿ ಮಾಡಲು ಮುಂದಾಗಿ, ನನ್ನಂಥವರ ಅಗತ್ಯವಿದ್ದರೆ ಸಾಧ್ಯವಾದಷ್ಟು ತೊಡಗಿಸಿಕೊಳ್ಳುತ್ತೇನೆ ಎನ್ನುವ ವಿನಮ್ರ ಕೋರಿಕೆ.
ನಾನು ಯಾಕೆ ಈ ಮಾತುಗಳನ್ನು ಪ್ರಸ್ತಾಪಿಸುತ್ತಿದ್ದೇನೆಂದರೆ ನಮಗೆ ನಾಯಕತ್ವ ಇಲ್ಲ, ಹಣದ ಬಲವಿಲ್ಲ, ರಾಜಕೀಯದ ಬಲವಂತೂ ಇಲ್ಲವೇ ಇಲ್ಲ. ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ, ತಾಲೂಕು ಪಂಚಾಯತ್ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಷ್ಟೇ ಸೀಮಿತವಾಗಿದ್ದೇವೆ. ನಮ್ಮ ಸಮುದಾಯದಲ್ಲಿ ಒಬ್ಬ ಶಾಸಕ, ಸಂಸದ, ವಿಧಾನ ಪರಿಷತ್ ಸದಸ್ಯ, ನಾಮನಿರ್ದೇಶನಗೊಂಡ ಅಧಿಕಾರಯುತ ಹುದ್ದೆ ಇಲ್ಲ ಎನ್ನುವುದನ್ನು ಹೇಳಿಕೊಳ್ಳಲು ಬೇಸರವಾಗುತ್ತಿದೆ. ಹಾಗೆ ನೋಡಿದರೆ ಯಾವುದೇ ರಾಜಕೀಯ ಪಕ್ಷದಲ್ಲೇ ಆಗಲಿ ನಮ್ಮವರಿದ್ದಾರೆ, ಅವರ ಬೆವರು ಆ ಪಕ್ಷಗಳಿಗೆ ಹರಿಯುತ್ತಿದೆ, ಪೋಸ್ಟರ್, ಬ್ಯಾನರ್ ಕಟ್ಟಲು, ಮನೆ ಮನೆಗೆ ಕರಪತ್ರ ಹಂಚಲು, ಅಗತ್ಯಬಿದ್ದರೆ ಯಾವುದೇ ಹೋರಾಟಕ್ಕೂ ಹೋಗುವಂಥ ಯುವಪಡೆಯೇ ಸಜ್ಜಾಗಿದೆ.
ಆದರೆ ಅಧಿಕಾರದ ಪ್ರಶ್ನೆ ಬಂದಾಗ, ಶಾಸಕನ ಸ್ಥಾನಕ್ಕೆ ಟಿಕೆಟ್ ಬೇಕಾದಾಗ, ಸಂಸತ ಚುನಾವಣೆಗೆ ಸ್ಪರ್ಧಿಸುವಾಗ ಟಿಕೆಟ್ ಕೇಳುವಾಗ ನಮಗೆ ನಾಲಗೆ ಹೊರಳುವುದಿಲ್ಲ, ಅಥವಾ ಆ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಬೇಕು ಎನ್ನುವ ಮನಸ್ಸು ಪಕ್ಷದವರಿಗೂ ಇಲ್ಲ, ಈ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಿ ಎಂದು ಬೆಂಬಲಿಸುವವರೂ ಇಲ್ಲ. ಅಧಿಕಾರವನ್ನು ಪಡೆಯುವುದಕ್ಕೆ ನಾವು ಭಿಕ್ಷುಕರಾಗಿ ಅಧಿಕಾರಸ್ಥರಿಗೆ ಕಾಣುತ್ತೇವೆ. ಇದು ನಿಜಕ್ಕೂ ಅವಮಾನ. ಅಧಿಕಾರ ಕೇಳುವುದು ನಮ್ಮ ಹಕ್ಕು ಅದು ಭಿಕ್ಷೆಯಲ್ಲ, ನಾವು ಭಿಕ್ಷುಕರೂ ಅಲ್ಲ.
ನನ್ನ ಅರಿವಿಗೆ ಬಂದಂತೆ ಎ.ಲಕ್ಷೀಸಾಗರ್ ಒಬ್ಬರನ್ನು ಬಿಟ್ಟರೆ ನಮ್ಮ ಸಮುದಾಯಕ್ಕೆ ರಾಜಕೀಯ ಸ್ಥಾನ ಮಾನ ಸಿಗಲೇ ಇಲ್ಲ. ಅಮ್ಮೆಂಬಳ ಬಾಳಪ್ಪ ಅವರಿಗೆ ದೊಡ್ಡ ಮಟ್ಟದ ಅಧಿಕಾರ ಸಿಗಬೇಕಿತ್ತು ಅವರಿಗೆ ಅರ್ಹತೆಯೂ ಇತ್ತು. ಆದರೆ ಅವರು ಕೇಳಲಿಲ್ಲ, ಅವರಿಗೆ ಅವರಾಗಿ ಅಧಿಕಾರವನ್ನು ಕೊಡುವ ಮನಸ್ಸು ಮಾಡಲಿಲ್ಲ, ನಮ್ಮ ಸಮುದಾಯ ಅದಕ್ಕಾಗಿ ಹಕ್ಕೊತ್ತಾಯ ಮಾಡಲಿಲ್ಲ, ಇದು ಒಂದು ಸಮುದಾಯ ಅರ್ಹತೆಯಿದ್ದರೂ ಕಳೆದುಕೊಂಡ ಬಹುದೊಡ್ಡ ಅವಕಾಶ. ಹಾಗಾದರೆ ಇನ್ನೆಷ್ಟು ಕಾಲ ನಾವು ಮತ್ತೊಬ್ಬರನ್ನು ಬೆಂಬಲಿಸುತ್ತಾ, ಪಕ್ಷಗಳ ಚಾಕರಿ ಮಾಡುತ್ತಾ ಇರಬೇಕು. ನಮ್ಮ ಸಮುದಾಯವನ್ನು ಮುನ್ನಡೆಸುವಂಥ ಅಧಿಕಾರ ಪಡೆಯುವಂಥ ನಾಯಕರಿಲ್ಲವೇ?, ಅರ್ಹತೆಯಿಲ್ಲವೇ?, ಅಗತ್ಯವಿಲ್ಲವೇ?, ಇನ್ನೂ ಜೀತಮಾಡಿಕೊಂಡು, ಅವಮಾನ ಸಹಿಸಿಕೊಂಡು ನಮ್ಮ ಸಮುದಾಯ ಕಾಲ ಕಳೆಯಬೇಕೇ?
ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಕಾಲ ಬಂದಿದೆ, ನಮಗೂ ಅಧಿಕಾರ ಬೇಕಾಗಿದೆ, ಅರ್ಹತೆಯಿದೆ ತುಸು ಯೋಚಿಸಿ. ಹಾಗಾದರೆ ನಾವೇನು ಮಾಡಬೇಕು ?.
ನಮ್ಮೊಳಗಿನ ಕೀಳರಿಮೆಯನ್ನು ಬಿಡಬೇಕು, ಸಮುದಾಯ ಒಂದೇ ವೇದಿಕೆಯಲ್ಲಿ ಬಲಿಷ್ಠವಾಗಿ ಸಂಘಟಿತವಾಗಬೇಕು, ಹಕ್ಕಿಗಾಗಿ ಧ್ವನಿ ಎತ್ತಬೇಕು. ಕುಲಾಲ ಸಮುದಾಯವನ್ನು ಯಾವುದೇ ರಾಜಕೀಯ ಪಕ್ಷ ನಿರ್ಲಕ್ಷಿಸುವಂತಿಲ್ಲ ಎನ್ನುವುದನ್ನು ಮೊದಲು ಜಗತ್ತಿಗೆ ಮನವರಿಕೆ ಮಾಡಿಕೊಡಬೇಕು.
ನಮ್ಮ ಸಂಘ ಸಂಸ್ಥೆಗಳು ವರ್ಷಕ್ಕೊಮ್ಮೆ ವಾರ್ಷಿಕೋತ್ಸವ ಮಾಡಿ ಹೆಮ್ಮೆಪಟ್ಟುಕೊಳ್ಳುವುದರಿಂದಾಚೆಗೆ ಬರಬೇಕು. ನಾವೂ ಹಕ್ಕಿಗೆ, ಅಧಿಕಾರಕ್ಕೆ ಅರ್ಹರು, ನಮ್ಮನ್ನು ಕಡೆಗಣಿಸಿದರೆ ನಿಮ್ಮನ್ನೂ ಕಡೆಗಣಿಸುವಷ್ಟು ಸಮುದಾಯದ ಬಲವಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು. ನಾವು ಮೂಖರಲ್ಲ ನಮಗೂ ಮಾತು ಬರುತ್ತದೆ, ನಮಗೂ ಅಧಿಕಾರದ ಅಗತ್ಯವಿದೆ, ಹಕ್ಕಿನ ಅಧಿಕಾರಕ್ಕೆ ನಮ್ಮನ್ನೂ ಪರಿಗಣಿಸಿ ಎಂದು ಹಕ್ಕೊತ್ತಾಯ ಮಾಡುವ ಮನಸ್ಸು ಮಾಡಬೇಕು. ಆದ್ದರಿಂದ ನಮ್ಮೊಳಗಿನ ಅಸೂಯೆ, ನಮ್ಮೊಳಗಿನ ಭಿನ್ನಾಭಿಪ್ರಾಯ, ನಮ್ಮನ್ನು ಆವರಿಸಿರುವ ಕೀಳರಿಮೆಯಿಂದ ಹೊರಬರಬೇಕು. ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಮಾಧ್ಯಗಳ ಮೂಲಕ ಮಾಡಬೇಕು, ಸಂಘಟನೆಗಳ ವೇದಿಕೆಯಲ್ಲಿ ಧ್ವನಿಎತ್ತಬೇಕು, ಇದು ನನ್ನ ಮಹತ್ತರ ಆಸೆ.
-ಚಿದಂಬರ ಬೈಕಂಪಾಡಿ


