ಅಕ್ಷರಕೃಪೆಗೆ ಒಳಗಾಗಿ ತಮ್ಮ ಸಮುದಾಯದ ಅಳಿವು-ಉಳಿವಿಗಾಗಿ ಐಕ್ಯಮಾತ್ಯ ಮತ್ತು ಅಧಿಕಾರದ ಚುಕ್ಕಾಣಿಯನ್ನು ಎಡಬಿಡದೇ ಹಿಡಿದು, ಅಧಿಕಾರ, ಅಂತಸ್ತು, ವಿದ್ಯೆಯನ್ನು ಕರಗತ ಮಾಡಿಕೊಂಡು, ಮಾನವ ಕುಲದಲ್ಲಿ ತಾವೇ ಶ್ರೇಷ್ಠರೆಂದು ಭ್ರಮಿಸಿಕೊಂಡು ಜೀವನದ ಎಲ್ಲಾ ಸಮಲತ್ತುಗಳನ್ನು ತಮ್ಮೆಡೆಗೆ ನಿರಾಯಾಸವಾಗಿ ಸೆಳೆದುಕೊಂಡು, ಅವರದ್ದೇ ಇತಿಹಾಸದ ಬಗ್ಗೆ ವರ್ಣರಂಜಿತವಾಗಿ ಸಾವಿರಾರು ಗ್ರಂಥ, ಪುರಾಣಗಳನ್ನು ಬರೆದು ಇತಿಹಾಸ ನಿರ್ಮಿಸಿರುವ ಜನಾಂಗ ಒಂದೆಡೆ ಇದ್ದರೆ, ಮನುಷ್ಯನ ಬದುಕಿನ ಮೂಲಭೂತ ಅವಶ್ಯಕತೆಗಳ ಪೂರೈಕೆಗಾಗಿ, ದೈಹಿಕ, ಮಾನಸಿಕ ಶ್ರಮದಿಂದ ಸದಾ ಎತ್ತುಗಳಂತೆ ದುಡಿಯುತ್ತಾ, ಈ ಜಗತ್ತಿನ ನಾಗರೀಕತೆ, ಸಂಸ್ಕೃತಿಗೆ ತಮ್ಮದೇ ಆದ ವಿಶಿಷ್ಟ ಕಾಣಿಕೆಗಳನ್ನು ನೀಡುತ್ತಾ ಬಂದು, ಬೇರೆಯವರ ಬದುಕನ್ನು ಹಸನು ಮಾಡಲು, ಬೇಯಿಸಿ ತಿನ್ನಿ ಎಂದು ಹಸಿ ತಿನ್ನುತ್ತಿದ್ದವರಿಗೆ ಸಂಸ್ಕಾರ ಹೇಳಿಕೊಟ್ಟು, ಬೇರೆಯವರ ಕ್ರಿಯೆಗಳಿಗೆ ಬೆನ್ನೆಲುಬಾಗಿ ನಿಂತು, ರಕ್ತಮಾಂಸವಾಗಿ ಹರಿದು, ಅನ್ಯರ ವರ್ಚಸ್ಸು-ವೈಭವಗಳಿಗೆ ಉಸಿರಾಗಿ ನಿಂತು, ಗುಪ್ತಗಾಮಿನಿಯಾಗಿರುವ ಜನಾಂಗಗಳು ಇನ್ನೊಂದೆಡೆ. ಇಂತಹ ಜನಾಂಗಗಳಲ್ಲೇ ಅತೀ ಪುರಾತನವಾದ ಮೂಲ ಕಸುಬಿನ ಜನಾಂಗವೇ ಕುಂಬಾರಿಕೆಯನ್ನು ಜೀವಂತವಾಗಿಟ್ಟಿರುವ ಕುಂಬಾರರು.
ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ದೊರಕಲಿ, ಸಾಧಕರು, ಜನನ ಮರಣ ಬಂಧನದಿಂದ ಮುಕ್ತರಾಗಲಿ, ಜೀವನದ ಜಂಜಡದಿಂದ ಮುಕ್ತಾದವರು ಇತರರನ್ನು ಮುಕ್ತಿಗೊಳಿಸಲಿ ಎಂಬ ಹಿರಿಯರ ನುಡಿಯಂತೆ, ಸಭ್ಯ ಸಮಾಜ, ಸಂಸ್ಕೃತಿ, ಆಚಾರ-ವಿಚಾರ, ಸಂಸ್ಕಾರಗಳನ್ನು ಜಗತ್ತಿನಾದ್ಯಂತ ಹಂಚಿಕೊಂಡು, ತಗ್ಗಿ-ಬಗ್ಗಿ, ಒಗ್ಗಿಕೊಂಡು, ಸತ್ಯ ಸಂಧತೆಯ ಹರಿಕಾರರಾಗಿ ಬದುಕುವ ಜನಾಂಗಗಳಲ್ಲಿ ಕುಂಬಾರ ಜನಾಂಗವೂ ಒಂದು. `ಹಿಂದಣ ಹೆಜ್ಜೆಯನರಿವಿಲ್ಲದೆ ನಿಂತ ಹೆಜ್ಜೆಯನರಿಯಬಾರದು’ ಎಂಬ ಅಲ್ಲಮಪ್ರಭುವಿನ ಅಂಬೋಣದಂತೆ, ನಿಂತ ಹೆಜ್ಜೆ ಅಂದರೆ ವರ್ತಮಾನವನ್ನು ಅರಿಯಬೇಕಾದರೆ ಹಿಂದಣ ಹೆಜ್ಜೆಯನ್ನು ಅಂದರೆ ಒಂದು ಕುಲ, ಗುಂಪು, ಸಂಸ್ಥೆ, ಸಂಘಟನೆಯ ಪರಂಪರೆ, ಚರಿತ್ರೆ, ಹೋರಾಟ, ತ್ಯಾಗವನ್ನು ಅರಿಯಲೇಬೇಕು. ಆಗಲೇ ನಮಗೆ ನಾವು ಇಡುತ್ತಿರುವ ಹೆಜ್ಜೆಯ ಮಹತ್ವ ಅರಿಯುವುದು. ಹಾಗಾಗಿ ಕುಲಾಲ/ಕುಂಬಾರ ಜನಾಂಗದ ಈಗಿನ ಆಗುಹೋಗುಗಳನ್ನು ಅರಿಯಬೇಕಾಗದಲ್ಲಿ ಅದರ ಹಿಂದೆ ಇರುವ ಹಿರಿಯರ ಶ್ರಮ, ಬೆವರು ಜೀವನೋತ್ಸಾಹವನ್ನು ಪರಿಚಯಿಸಿಕೊಳ್ಳಲೇಬೇಕು. ದೇಶವನ್ನು ಒಳಗೊಂಡ ಈ ಜಗತ್ತು ತಲ್ಲಟಗೊಳಿಸುವ ಹಲವು ಬೌತಿಕ, ಸಾಮಾಜಿಕ, ಮಾನಸಿಕ, ಆಥರ್ಿಕ ತಲ್ಲಣಗಳಿಗೆ ಒಳಗಾಗುತ್ತಿದೆ. ಒಂದು ಕಡೆ ಯಂತ್ರ ವಿಜ್ಞಾನ ಅಮಾಹ್ಯವೇಗದಲ್ಲಿ ಧಾವಿಸುತ್ತಿದ್ದರೂ ಸಹಾ ಅದಕ್ಕೆ ಸಮಾನಾಂತರವಾಗಿರುವ ಬದುಕಿನ್ನೂ ದಾರಿದ್ರ್ಯ, ಅನಕ್ಷರತೆ, ಅಜ್ಞಾನ, ಮೂಢನಂಬಿಕೆಗಳಲ್ಲಿ ಜೋತುಬಿದ್ದು ಜೋಕಾಲಿಯಾಡುತ್ತಿದೆ. ರಾಜಕೀಯ ಸ್ಥಿತ್ಯಂತರಗಳು, ಆಕ್ರಮಣಕಾರಿ ಮನೋಭಾವಗಳು, ಅಂತರ್ ಯುದ್ಧಗಳು, ಬಹುಕಾಲದ ಬದುಕಿನ ಸಿದ್ಧಾಂತಗಳನ್ನು ಗಾಳಿಗೆ ತೂರಿ ಮೇಲೇರಿ ಬರಲು ಹಪಹಪಿಸುತ್ತಿದ್ದೇವೆ. ಗಂಡಾಗುಂಡಿಯನ್ನಾದರೂ ಮಾಡಿ ಗಡಿಗೆ ತುಪ್ಪ ಕುಡಿಯುವ ಆತುರದಲ್ಲಿ ಇಡೀ ಜಗತ್ತಿದೆ. ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ನಮ್ಮ ವ್ಯವಸ್ಥಗೆಳು ಏದುಸಿರು ಬಿಡುತ್ತಿವೆ. ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಹಳಸುತ್ತಿವೆ. ಮಾನವತಾವಾದ ಪುಸ್ತಕದ ಬದನೆಕಾಯಿಯಾಗಿದೆ. ಜಾತ್ಯಾತೀತತೆ ಎಂಬುದು ಮೊಸಳೆಕಣ್ಣೀರಾಗಿದೆ.
ಸಮಾಜಕ್ಕಿಂದು ಭದ್ರ ಬುನಾದಿ ಹಾಗೂ ಕಠಿಣ ದುಡಿಮೆಯ ದಂಡು ಬೇಕಾಗಿದೆ. ಹಳೆ ಬೇರು ಹೊಸ ಚಿಗುರು ಸಮಾನಾಂತರವಾಗಿ ಬೆಳೆಯ ಬೇಕಾಗಿದೆ. ಬೇರಿದ್ದರೆ ಚಿಗುರಿಲ್ಲ, ಚಿಗುರಿದ್ದರೆ ಬೇರಿಲ್ಲ ಎಂಬಂತಾಗಬಾರದು. ಕ್ರಿಯಾಶೀಲತೆ, ಕಲ್ಪನಾಶಕ್ತಿ ಹಾಗೂ ಉತ್ಸಾಹ ಚಿಲುಮೆಗಳಾಗಬೇಕಿದ್ದ ಯುವಕರಿಂದು ಹೆಂಡ, ಹಣ, ಧೂಮ್ರಪಾನ, ಮಾದಕದ್ರವ್ಯಗಳ ಗುಲಾಮಾಗುತ್ತಿದ್ದಾರೆ. ಯುವ ಪೀಳಿಗೆಯ ಕೈಯಲ್ಲಿ ಹಣ, ಹೆಸರು, ಅಂತಸ್ತು, ಅಧಿಕಾರಗಳಿದ್ದರೂ ಕೂಡಾ ಅವರು ಅಸ್ವಸ್ಥರಾಗಿರುವಂತೆ ಕಾಣುತ್ತಾರೆ. ಯುವಕರು ಪಟ್ಟಭದ್ರ ಶಕ್ತಿಗಳ ಕೈಯಲ್ಲಿರುವ ಸ್ಫೋಟಕ ಸಾಮಗ್ರಿಯಂತೆ ಬಳಕೆಯಾಗುತ್ತಿದ್ದಾರೆ. ತಮ್ಮ ತಮ್ಮ ದೇಶ, ನೆಲ, ಕುಲದ ಬಗ್ಗೆ ನಾವು ಜಾಣ ಕಿವುಡರಾಗಿದ್ದೇವೆ. ನಾವಿಂದು ವಿಷಯವನ್ನು ತಲೆಗೆ ತುಂಬಿಕೊಂಡು ಜ್ಞಾನಿ ಎಂಬಂತೆ ಮೆರೆಯುತ್ತಿದ್ದೇವೆ. ಆದರೆ ಅದನ್ನು ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ, ಸಾಮಾಜಿಕ ಪ್ರಜ್ಞೆಯಿಂದ ಉಪಯೋಗಿಸುತ್ತಿಲ್ಲ. ನಮ್ಮ ನಮ್ಮಲ್ಲೇ ಇರುವ ಬಡವರ, ನಿರ್ಗತಿಕರ, ದರಿದ್ರರ ಬದುಕನ್ನು ತಿರುಗಿ ನೋಡುವಷ್ಟೂ ತಾಳ್ಮೆ ಇಲ್ಲದವಾಗಿದ್ದೇವೆ. ಇಡೀ ಜಗತ್ತನ್ನು ಮನುಕುಲವನ್ನು ಹಠಾತ ಆಗಿ ಬದಲಾಯಿಸಲು ಸಾಧ್ಯವಿಲ್ಲ ಎಂಬುದು ನಗ್ನ ಸತ್ಯ. ಆದರೆ ಇದ್ದಲ್ಲೇ, ತನ್ನ ಮಿತಿಯಲ್ಲೇ ಹಾಸಿಗೆ ಚಾಚಿಕೊಂಡು, ತಾನೂ ಬದುಕಿ, ಉಳಿದವರಿಗೂ ಬದುಕುವ ಅವಕಾಶ ಕೊಡುವ ಸಮಚಿತ್ತದ ಬದುಕನ್ನು ಬಾಳಲು ನಾವು ಪ್ರಯತ್ನಿಸಬೇಕಾಗಿದೆ.
ಮಡಿಕೆ ಮಾಡುವ ವೃತ್ತಿಯನ್ನು ಬದುಕಿನ ಭಾಗವನ್ನಾಗಿ ಸ್ವೀಕರಿಸಿಕೊಂಡಿರುವ ಕುಂಬಾರರು ಬೇರೆ ಬೇರೆ ಹೆಸರಿನಿಂದ ಜಗತ್ತಿನಾದ್ಯಂತ ಬದುಕುತ್ತಿದ್ದಾರೆ. ಪ್ರಜಾಪತಿ, ಕುಂಭಕಾರ, ಕುಶವನ್, ಪಂಡಿತ್, ಕುಂಬಾರ, ಕುಲಾಲ, ಗುನಗ, ಹಾಂಡ, ಮೂಲ್ಯ, ಕುಂಬಾರಸೆಟ್ಟಿ, ಚಕ್ರಸಾಲಿ ಅಲ್ಲದೆ ಭಾಷೆ ಆಧರಿತ ತುಳು, ಕನ್ನಡ, ತೆಲುಗು ಕುಂಬಾರರು,, ಮಾಂಸಾಹಾರಿ ಹಾಗೂ ಸಸ್ಯಾಹಾರಿ ಕುಂಬಾರರು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ,, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ ,ಪ್ರಾದೇಶಿಕ ನೆಲೆಯ ಕುಂಬಾರರು ಎಂಬ ಪ್ರಬೇಧಗಳಿದ್ದರೂ ಕೂಡಾ, ಇತ್ತೀಚಿನ ದಿನಗಳಲ್ಲಿ ಕುಂಬಾರರು ನಾವು ಎಲ್ಲರೂ ಒಂದೇ ಎಂಬ ಗುರಿಯತ್ತ ಹೊರಟಿರುವುದು ಸ್ವಾಗತಕಾರಿ ಬೆಳವಣಿಗೆ. ಧನ ಕನಕ, ಜಮೀನುಗಳನ್ನು ಬಂಡವಾಳವನ್ನಾಗಿಸಿ ವೃತ್ತಿ ಮಾಡುವುದು ಜಗತ್ತಿನಲ್ಲಿ ಸಾಮಾನ್ಯ. ಆದರೆ ಪಂಚಭೂತಗಳಾದ ಗಾಳಿ, ನೀರು, ಮಣ್ಣು, ಬೆಂಕಿ ಹಾಗೂ ಆಕಾಶಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ವೃತ್ತಿ ಮಾಡುವ ಕುಂಬಾರರ ಬದುಕು ಅನ್ಯರಿಗಿಂತ ಒಂದು ಹೆಜ್ಜೆ ಮುಂದೆ ನಿಲ್ಲುವಂತೆ ಮಾಡಿದೆ. ಕುಂಬಾರರಿಗೆ ಸರ್ವಜ್ಞನಂತಹ, ಭಕ್ತ ಕುಂಬಾರನಂತಹ ಮಹಾನ್ ಚಿಂತಕರ ಬೆಂಗಾವಲಿದೆ. ಕುರುಬರಿಗೆ ಕನಕ, ಬಿಲ್ಲವರಿಗೆ ನಾರಾಯಣ ಗುರು, ಬೇಡರಿಗೆ ವಾಲ್ಮೀಕಿ, ಬೆಸ್ತರಿಗೆ ವೇದವ್ಯಾಸರ ಬೆಂಗಾವಲು ಸಿಕ್ಕಿದಂತೆ, ತಡವಾಗಿಯಾದರೂ ಕುಂಬಾರರಿಗೆ ಸರ್ವಜ್ಞರ ಜ್ಞಾನದ ಬೆಳಕು ದೊರೆತಿದೆ. ಈ ಬಗ್ಗೆ ಹೋರಾಟ ಮಾಡಿದ ಕುಂಬಾರ ಸಂಘಟನೆಗಳ ಬಲ ಮತ್ತಷ್ಟು ಕ್ರೋಡೀಕೃತಗೊಳ್ಳಬೇಕಾಗಿದೆ. ಸಂಘಟನೆಗಳು ನಾಲ್ಕು ದಿಕ್ಕುಗಳಲ್ಲೂ ಬೆಳೆಯಬೇಕಾಗಿದೆ. ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ನೇತಾರರು ಮುಂದಕ್ಕೆ ಬರಬೇಕಾಗಿದೆ. ಇವೆಲ್ಲಕ್ಕೂ ದಾರಿಯಾಗಬಲ್ಲ, ಧ್ವನಿಯಾಗಬಲ್ಲ ಮಾಧ್ಯಮ ಹಾಗೂ ಪತ್ರಿಕಾ ಮಾರ್ಗದರ್ಶನವೂ ನಮಗೆ ಅನಿವಾರ್ಯವಾಗುತ್ತಿದೆ.
ಸುಮಾರು ಎರಡು ದಶಕಗಳ ಹಿಂದೆ ಆರಂಭವಾದ ಮುಂಬೈ ಕುಲಾಲ ಸಂಘದ ಅಮೂಲ್ಯ ಪತ್ರಿಕೆ, ಮೈಸೂರಿನ ಕುಂಭಮಿತ್ರ, ಬೆಂಗಳೂರಿನ ಕುಂಭೋದಯ, ಇತ್ತೀಚೆಗೆ ಆರಂಭವಾದ ಉ.ಕ ದ ಕರುನಾಡ ಕುಂಬಾರ ಪತ್ರಿಕೆಗಳು ಸಾಕಷ್ಟು ಸೇವೆ ಸಲ್ಲಿಸಿವೆ, ಸಲ್ಲಿಸಲು ಸಜ್ಜಾಗಿವೆ. ನೂರಾರು ಹಿರಿಯ ಬರಹಗಾರರು , ಚಿಂತಕರು, ಸಾಹಿತಿಗಳು ಆಕಾಶವಾಣಿ, ದೂರದರ್ಶನಗಳಲ್ಲಿ ದುಡಿಯುತ್ತಾ ನಮ್ಮ ಆಸುಪಾಸಿನಲ್ಲಿದ್ದಾರೆ. ಕೆಲವರು ಪರಿಚಿತರಾಗಿದ್ದರೆ, ಇನ್ನೂ ಹಲವರು ಅಪರಿಚಿತರಾಗಿಯೇ ಉಳಿದಿದ್ದಾರೆ. ದಿನಪತ್ರಿಕೆ, ಮಾಸ ಪತ್ರಿಕೆ, ವಾರ ಪತ್ರಿಕೆ, ಪಾಕ್ಷಿಕಗಳನ್ನು ಕೈಯಲ್ಲಿ ಹಿಡಿದು ಓದುವಂತೆಯೇ ಇಂದು ಸುದ್ದಿ ಸಮಾಚಾಗಳನ್ನು ಕಂಪ್ಯೂಟರ್, ಮೊಬೈಲ್, ಲ್ಯಾಪ್ಟಾಪ್ಗಳಲ್ಲೂ ಓದುವಂತಾಗಿರುವುದು ತಂತ್ರಜ್ಞಾನದ ಬೇಳವಣಿಗೆಯ ಮಟ್ಟವನ್ನು ಸೂಚಿಸುತ್ತದೆ. ಫೇಸ್ಬುಕ್, ವಾಟ್ಸಾಪ್ ಗಳಂತಹ ಸಾಮಾಜಿಕ ತಾಣಗಳು ಇಂದು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಿ ಯುವಕರನ್ನು ಸೆಳೆಯುವ ಈ ಕಾಲಘಟ್ಟದಲ್ಲಿ ಕುಲಾಲ/ಕುಂಬಾರ ಸಮುದಾಯದ ಆಗು-ಹೋಗು, ನೋವು-ನಲಿವು, ಸಾಧಕ-ಬಾಧಕಗಳನ್ನು ಕ್ಷಿಪ್ರವಾಗಿ ಹಂಚಿಕೊಳ್ಳಲು ಈ ಸಾಮಾಜಿಕ ತಾಣಗಳು ಹೆಚ್ಚು ಸೂಕ್ತವಾಗಿವೆ. ಕಳೆದ ಐದು ವರ್ಷಗಳಿಂದ `ಕುಲಾಲ್ ವರ್ಲ್ಡ್’ ಎಂಬ ಶಿರೋನಾಮೆಯೊಂದಿಗೆ ಸಮಾಜದ ಆಗು-ಹೋಗುಗಳನ್ನು ಭಾಷೆ, ನೀತಿ, ಗುಂಪು, ಪಂಗಡ, ಪಕ್ಷಗಳನ್ನು ಮೀರಿ ನಿಂತು, ಕುಂಬಾರರು/ಕುಲಾಲರು ಎಂಬ ಪ್ರೀತಿಯಿಂದ ರಾಜ್ಯ, ದೇಶ, ವಿದೇಶಗಳಲ್ಲಿಯ ಸಮಾಜ ಬಂಧುಗಳಿಗೆ ಹಂಚಿಕೊಂಡು ಬರುತ್ತಿರುವ ಸಾಮಾಜಿಕ ತಾಣವಿಂದು www.kulalworld.com ಎಂಬ ವೆಬ್ ಪೇಜ್ ಆಗಿರುವುದು ಸಂತಸವನ್ನು ತಂದಿದೆ.
ಹಿರಿಯರಾದ ಕುಂವೀ ಯವರು, ಪತ್ರಿಕಾಂಗವನ್ನು ಅರೆದು ಕುಡಿದಿರುವ ಚಿದಂಬರ ಬೈಕಂಪಾಡಿಯವರು, ವೃತ್ತಿರಂಗದಲ್ಲೇ ಮಿಂಚುತ್ತಿರುವ ನೂರಾರು ಕುಂಬಾರ ಪತ್ರಕರ್ತರು, ಹವ್ಯಾಸಿ ಬರಹಗಾರರ ಒಂದು ಸ್ಪಷ್ಟ-ದಿಟ್ಟ ತಂಡವನ್ನು ಕಟ್ಟಿಕೊಂಡು ಉತ್ಸಾಹದಿಂದ ಹೊರಟಿರುವ ದಿನೇಶ್ ಬಂಗೇರ ಇರ್ವತ್ತೂರು ಇವರಿಗೆ ಶಹಭಾಸ್ ಹೇಳಿ, ಅವರ ಬೆನ್ನು ತಟ್ಟಬೇಕಾದುದು ನಮ್ಮ ಜವಾಬ್ದಾರಿ. ಇದೀಗ ಬೇರೆ ವೃತ್ತಿಯಲ್ಲಿದ್ದರೂ ಮಂಗಳೂರಿನ `ಪಟ್ಟಾಂಗ ಪತ್ರಿಕೆ’ `ಕರಾವಳಿ ಅಲೆ’ ಮುಂತಾದ ಪತ್ರಿಕೆಗಳಲ್ಲಿ ದಿಟ್ಟ-ಜನಪರ ಬರಹಗಳಿಂದ ಹೆಸರಾಗಿದ್ದ ಇರ್ವತ್ತೂರು ಪತ್ರಿಕೋದ್ಯಮದಲ್ಲಿ ಪಳಗಿದ ಜೀವ. ಅವ ಜೊತೆಗಿರುವ ಅನುಭವ, ಉತ್ಸಾಹ. ಸಂತುಲಿತ ತಂಡವನ್ನು ಕಂಡಾಗ ಕಾಲೇಜು ದಿನಗಳಲ್ಲಿ ಹವ್ಯಾಸಿ ಪತ್ರಿಕೋದ್ಯಮದಲ್ಲಿದ್ದು, `ಮುಂಗಾರು’ ಪತ್ರಿಕೆಯ ವಡ್ಡರ್ಸೆ ರಘುರಾಮ ಶೆಟ್ಟರ ಪ್ರಭಾವದಿಂದ ಬರಹಕ್ಕೆ, ಶಿವರಾಮ ಕಾರಂತರ ಪ್ರಭಾವಕ್ಕೆ ನೇರ ನಿಷ್ಠುರದ ಸಾಹಿತ್ಯ ಸೇವೆಗೆ ನಿಂತಂತಹ ನನಗೆ ತುಂಬಾ ಖುಷಿಯಾಯಿತು. ನಾವು ಮಾಡಲಾಗದ್ದನ್ನು ನಮ್ಮ ಸಮುದಾಯದ ಯುವಕರ ಗುಂಪೊಂದು ಮಾಡುತ್ತಿದೆ. ನಮ್ಮ ಕನಸ್ಸನ್ನು ನಮ್ಮವರೇ ನನಸು ಮಾಡುತ್ತಿದ್ದಾರೆ. ಅದನ್ನು ಜಾರದಂತೆ, ಸೋರದಂತೆ, ಬೀಳದಂತೆ, ಸೊರಗದಂತೆ, ಮುಟ್ಟಿ, ತಟ್ಟಿ, ಹರಸಿ ಹಾರೈಸಿ ಬೆಂಗಾವಲಾಗಿ ನಿಲ್ಲಬೇಕಾದುದು ನಮ್ಮೆಲ್ಲರ ಬದುಕಿನ ಭಾಗ ಹಾಗೂ ಸಮಾಜಕ್ಕೆ ಕೊಡಬಹುದಾದ ಕೊಡುಗೆ ಎಂಬುದು ನನ್ನ ಅಂಬೋಣ.
ಡಾ. ಎಂ ಅಣ್ಣಯ್ಯ ಕುಲಾಲ್, ಉಳ್ತೂರು


