ತಂತ್ರಜ್ಞಾನ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಹೀಗಾಗಿ ಇವತ್ತಿನ ದಿನಗಳಲ್ಲಿ ಜಗತ್ತೇ ನಮ್ಮ ಅಂಗೈಯಲ್ಲಿದೆ ಎಂಬುವಷ್ಟರ ಮಟ್ಟಿಗೆ ನಮ್ಮ ಸಂಪರ್ಕ ಜಾಲ ದೇಶ, ವಿದೇಶಗಳನ್ನು ಬೆಸೆಯುತ್ತಾ ಸಾಗುತ್ತಿದೆ. ಒಂದು ಕಾಲದಲ್ಲಿ ಯಾವುದಾದರೂ ವಿಷಯಗಳ ಬಗ್ಗೆ ಮಾಹಿತಿ ಬೇಕು ಎಂದಾದಲ್ಲಿ ಗೃಂಥಾಲಯದತ್ತ ಜನ ಹೆಜ್ಜೆ ಹಾಕುತ್ತಿದ್ದರು. ಈಗ ಹಾಗಿಲ್ಲ. ಹೆಚ್ಚಿನವರು ಇಂಟರ್ನೆಟ್ನತ್ತ ಮುಖ ಮಾಡುತ್ತಾರೆ. ಗೂಗಲ್ನಲ್ಲಿ ನಮಗೆ ಬೇಕಾದ ವಿಷಯದ ಬಗ್ಗೆ ಮಾಹಿತಿಯಿದೆಯಾ ಎಂದು ಹುಡುಕಾಟ ನಡೆಸುತ್ತಾರೆ. ಇವತ್ತು ಅಂತರ್ಜಾಲ ಮಾಹಿತಿ, ಸಂಪರ್ಕ, ಮನೋರಂಜನೆ ನೀಡುವುದರೊಂದಿಗೆ ಜನತೆಯ ನಡುವಿನ ಸಂಪರ್ಕಕೊಂಡಿಯಾಗಿದೆ ಎಂದರೆ ತಪ್ಪಾಗಲಾರದು. ಹೀಗಿರುವಾಗ ಅಂತರ್ಜಾಲವನ್ನು ಜಾಲಾಡುವವರಿಗೆ ಮೂಲತಃ ಕರ್ನಾಟಕದ ಕುಂಬಾರ ಸಮಾಜದವರಾಗಿ ಉದ್ಯೋಗ ನಿಮಿತ್ತ ಹೊರರಾಜ್ಯ, ಹೊರದೇಶಗಳಿಗೆ ತೆರಳಿ ಅಲ್ಲಿ ನೆಲೆಸಿದವರಿಗೆ ಮತ್ತು ನಮ್ಮ ಸಮಾಜದ ಬಗ್ಗೆ ಮಾಹಿತಿ ಪಡೆಯಲು ತಡಕಾಡುವವರಿಗಾಗಿ, ಇಲ್ಲಿ ಏನೇನು ನಡೆಯುತ್ತಿದೆ ಎಂಬಿತ್ಯಾದಿ ತತ್ ಕ್ಷಣದ ಸುದ್ದಿಗಳಲ್ಲದೆ, ಸಮಾಜದ ಸಮಗ್ರ ಮಾಹಿತಿಯನ್ನು ನಾವು kulalworld ವೆಬ್ಸೈಟ್ ಮೂಲಕ ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಉನ್ನತ ಆದರ್ಶಗಳನ್ನು ಹಾಗೂ ಮೌಲ್ಯಗಳನ್ನು ಜಗತ್ತಿಗೆ ನೀಡಿದ ನಮ್ಮ ಕುಲಾಲ/ಕುಂಬಾರ ಸಮಾಜ ಕಾಲನ ಹಿಡಿತಕ್ಕೆ ಸಿಕ್ಕಿ ಅನ್ಯಾಯವಾಗಿ ಉಪೇಕ್ಷೆ ಹಾಗೂ ದೊಷಣೆಗಳಿಗೆ ಒಳಗಾಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಉನ್ನತವಾದ ಸಾಮಾಜಿಕ ಕೊಡುಗೆಗಳನ್ನು ಹಾಗೂ ಆದರ್ಶಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ವಿಶ್ವವ್ಯಾಪಕತೆಯನ್ನು ಹೊಂದಿರುವ ಜಾಗೃತ ಮಾಹಿತಿ ವ್ಯವಸ್ಥೆಯನ್ನು ಹೊಂದುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಜಾಲತಾಣ ಪರಿಣಾಮಕಾರಿಯಾದ ಸಂವಹನ ವ್ಯವಸ್ಥೆಯನ್ನು ಹೊರಹೊಮ್ಮುವ ಆಶಯ ನಮ್ಮದು. ನಮ್ಮ ಪರಂಪರೆಯ ಮೌಲಿಕತೆಯನ್ನು ಆಧುನಿಕ ವ್ಯವಸ್ಥೆಯ ಮೂಲಕ ಇಂದಿನ ಜನಾಂಗಕ್ಕೆ ಶೀಘ್ರವಾಗಿ ಪರಿಚಯಿಸುವ ಪರಿಚಯಿಸಲು ಹಾಗೂ ಸಮಾಜ ಬಾಂಧವರಲ್ಲಿ ಒಗ್ಗಟ್ಟು ಹಾಗೂ ಜಾಗೃತಿ ಮೂಡಿಸುವಲ್ಲಿ ಹಾಗೂ ಕುಂಬಾರ ಸಮಾಜದ ಬಗ್ಗೆ ಅನ್ಯ ಸಮಾಜದಲ್ಲಿರುವ ತಪ್ಪು ಮಾಹಿತಿಗಳು ಹಾಗೂ ಸಂದೇಹ ಹಾಗೂ ಆಕ್ರೋಶಗಳನ್ನು ದೂರಮಾಡುವಲ್ಲಿ ಈ ವೆಬ್ ಸೈಟ್ ಸಹಕಾರಿಯಾಗಲೆಂದು ಬಯಸುತ್ತೇವೆ.
ಮನುಷ್ಯನ ಪ್ರಗತಿಯ ಹೆಜ್ಜೆಗಳು ವಿಸ್ತಾರವಾದಂತೆಲ್ಲ ಆತನ ಬದುಕಿನ ನೆಲೆಯೂ ಬಹಳ ವೇಗವಾಗಿ ಪಸರಿಸುತ್ತದೆ. ಕುಲಾಲ ಸಮುದಾಯವೂ ಇದಕ್ಕೇನೂ ಹೊರತಲ್ಲ. ಎಷ್ಟೋ ವರ್ಷಗಳ ನಿರಂತರ ಶ್ರಮ ಹಾಗೂ ಬೌದ್ಧಿಕ ಸಾಮರ್ಥ್ಯದ ಸಮರ್ಪಕ ಬಳಕೆಯಿಂದ ನಮ್ಮ ಬಹಳಷ್ಟು ವ್ಯಕ್ತಿಗಳು – ಕುಟುಂಬಗಳು ದೇಶದ ಅನ್ಯಾನ್ಯ ಪ್ರದೇಶಗಳಲ್ಲಲ್ಲದೆ ವಿದೇಶಗಳಲ್ಲೂ ತಮ್ಮ ಬದುಕಿನ ನೆಲೆ ಕಂಡಿದ್ದಾರೆ. ಕುಂಬಾರ, ಕುಲಾಲ,ಮೂಲ್ಯ, ಗುನಗ ಮುಂತಾದ ಹೆಸರುಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಚದುರಿ ಹೋಗಿರುವ ಸುಮಾರು 20 ಲಕ್ಷ ಜನಸಂಖ್ಯೆಯಿರುವ ಕುಂಬಾರ ಸಮುದಾಯದವರು ಆಧುನಿಕ ತಂತ್ರಜ್ಞಾನದ ಒತ್ತಡದಿಂದ ಹಾಗೂ ಲೋಹ ಮತ್ತು ಪ್ಲಾಸ್ಟಿಕ್ ಬಳಕೆಯಿಂದಾಗಿ ತಮ್ಮ ಕುಲ ಕಸುಬಿಗೆ ಬೇಡಿಕೆ ಕಳೆದುಕೊಂಡು, ಜನಾಂಗದ ಬಹುಪಾಲು ಜನರು ಸ್ವಂತ ಕೃಷಿಭೂಮಿ ಅಥವಾ ಬೇರೆ ಪರ್ಯಾಯ ಉದ್ಯೋಗಗಳಿಲ್ಲದೇ ಸಾಮಾಜಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕುಂಬಾರ ಜನಾಂಗದವರು ತಮ್ಮ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಉಳಿವಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಗಣ್ಯರು ಸಮಾನಮನಸ್ಕರಾಗಿ ಒಂದೇ ಲಾಂಛನದಡಿಯಲ್ಲಿ ಒಟ್ಟುಗೂಡಿ ಅಭೂತಪೂರ್ವ ಒಗ್ಗಟ್ಟನ್ನು ಪ್ರದರ್ಶಿಸಿ ಜನಾಂಗದ ಸದಸ್ಯರು ಗೌರವಯುತ ಹಾಗೂ ಸ್ವಾಭಿಮಾನದ ಜೀವನ ನಡೆಸಲು ಸಹಕರಿಸುವ,ಈ ರೀತಿ ಬಹಳ ವಿಸ್ತಾರವಾಗಿ ಹಂಚಿಹೋಗಿರುವ ನಮ್ಮ ಕುಲಾಲ ಸಮುದಾಯವನ್ನು ಮಾಹಿತಿ ವಿನಿಮಯದ ಮೂಲಕ ಏಕಸೂತ್ರದಲ್ಲಿ ಸಂಧಿಸುವಂತೆ ಮಾಡುವ ಮಹತ್ವದ ಉದ್ದೇಶವೂ ನಮ್ಮದಾಗಿದೆ.
ಕೃಷಿಯೇತರ ವೃತ್ತಿಯನ್ನು ಜೀವನಾಧಾರವಾಗಿ ಅಳವಡಿಸಿಕೊಂಡ ಬಹುತೇಕ ಮಂದಿ ಸಹಜವಾಗಿ ಪರಸ್ಪರ ಭೇಟಿಯಾಗುವ ಅವಕಾಶಗಳಿಂದ ವಂಚಿತರಾಗುತ್ತಾರೆ. ಇಷ್ಟೇ ಅಲ್ಲದೆ ಊರು ಬಿಟ್ಟು ಪರ ಊರಲ್ಲಿ ನೆಲೆಸಿರುವ ಎಲ್ಲಾ ಕುಲಾಲ ಬಾಂಧವರಿಗೂ ಊರಿನ ಆಗುಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿರುವುದಿಲ್ಲ. ಮಾತ್ರವಲ್ಲದೆ, ಕುಲಾಲ ಸಮುದಾಯದ ಮೂಲ , ಚಾರಿತ್ರಿಕ ಹಿನ್ನೆಲೆ , ನಮ್ಮ ಆಚಾರ-ವಿಚಾರ , ಹಬ್ಬ ಹರಿದಿನ , ಧಾರ್ಮಿಕ -ಶೈಕ್ಷಣಿಕ ಕೇಂದ್ರ, ಕ್ರೀಡೆ ಇತ್ಯಾದಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ನಮ್ಮದೊಂದು ಹೆಜ್ಜೆ. ಕುಲಾಲ ಸಮುದಾಯದ ಪ್ರತಿಭಾನ್ವಿತರನ್ನು, ಗಣ್ಯರನ್ನು ಗುರುತಿಸಿ ಎಲ್ಲಾ ಕುಲಾಲರಿಗೆ ಅವರ ಪರಿಚಯ ಮಾಡಿಸುವುದು ಜೊತೆಗೆ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ಅಸಹಾಯಕರಿಗೆ ನೆರವು ನೀಡುವುದು ಅಲ್ಲದೆ, ನಮ್ಮ ಪರಂಪರೆಯ ಬಗ್ಗೆ ಇನ್ನಷ್ಟು ಉಪಯುಕ್ತ ಮಾಹಿತಿಯನ್ನು ಸುಲಭದಲ್ಲಿ ಲಭ್ಯವಾಗುವಂತೆ ಮಾಡುವುದು ಇನ್ನೊಂದು ಉದ್ದೇಶ. ಇದರ ವ್ಯಾಪಕತೆ ಹಾಗೂ ಒಪ್ಪವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ವೇದಿಕೆಯಿಂದ ನಮ್ಮ ಸಮಾಜಕ್ಕೆ ಒಂದಷ್ಟು ಪ್ರಯೋಜನವಾದರೆ ಅದೇ ಸಾರ್ಥಕತೆ. ನಮ್ಮ-ನಿಮ್ಮ ಬಾಂಧವ್ಯದ ಕೊಂಡಿ ಅಂತರಜಾಲದ ಅಕ್ಷರ ಲೋಕದ ಮೂಲಕ ಸದಾ ಹಸನಾಗಿರಲಿ. ತಪ್ಪುಗಳಿದ್ದರೆ ಮನ್ನಿಸಿ.
ಈ ವೆಬ್ಸೈಟ್ ಸಮಗ್ರ ಮಾಹಿತಿಯೊಂದಿಗೆ ಎಲ್ಲರ ಗಮನಸೆಳೆದು ಜನಪ್ರಿಯವಾಗ ಬೇಕಾದರೆ ನೀವು ನಮ್ಮೊಂದಿಗೆ ಕೈಜೋಡಿಸಬೇಕಾದ ಅಗತ್ಯವಂತೂ ಇದ್ದೇ ಇದೆ.
ನಿಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮ, ನಿಮ್ಮ ಮನೆಯಲ್ಲಿ, ಕುಟುಂಬ, ಬಂಧುಮಿತ್ರರು, ಗೆಳೆಯ, ಗೆಳತಿಯರು ಒಂದಲ್ಲಾ ಒಂದು ರೀತಿಯ ವಿಶಿಷ್ಟ ಸಾಧನೆ ಮಾಡುತ್ತಿದ್ದರೆ (ಕಲೆ, ಸಾಹಿತ್ಯ, ಕೃಷಿ, ಇತರೆ) ಅವರ ವಿವರವನ್ನು ಚಿತ್ರ ಸಹಿತ ಕಳುಹಿಸಿಕೊಡುವ ಮೂಲಕ, ನೀವು ಬರಹಗಾರರಾಗಿದ್ದಲ್ಲಿ, ಅಥವಾ ಬರವಣಿಗೆಯಲ್ಲಿ ಆಸಕ್ತಿಯಿದ್ದರೆ ಕಥೆ, ಕವಿತೆ, ಲೇಖನವನ್ನು, ನಿಮ್ಮ ಸುತ್ತಮುತ್ತ ಇರುವ ಕುಲಾಲ/ಕುಂಬಾರ ಸಮಾಜದ ಮಾಹಿತಿಯನ್ನು ಕೂಡ ನೀಡಬಹುದಾಗಿದೆ. ನೀವು ಕಳುಹಿಸುವ ಬರಹಗಳನ್ನು ಪರಿಶೀಲಿಸಿ ಸೂಕ್ತವಾಗಿದ್ದಲ್ಲಿ ಪ್ರಕಟಣೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ವೆಬ್ ಅನ್ನು ನಮ್ಮ ಜನಾಂಗದ ಗೆಳೆಯ-ಗೆಳತಿಯರಿಗೆ ಪರಿಚಯಿಸಿ-ಬೆಳೆಸಿ ಇದು ನಮ್ಮ ವೇದಿಕೆ. ಎಲ್ಲವೂ ಸಾಕಾರಗೊಳ್ಳಬೇಕಾದರೆ ನೀವು ನಮ್ಮೊಂದಿಗೆ ಕೈಜೋಡಿಸಲೇ ಬೇಕು. ಅದನ್ನು ನೀವು ಮಾಡುತ್ತೀರೆಂಬ ವಿಶ್ವಾಸದಲ್ಲಿ ನಾವಿದ್ದೇವೆ.
* ದಿನೇಶ್ ಬಂಗೇರ ಇರ್ವತ್ತೂರು


